

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಇತರರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಪಕ್ಷದ ಹಣೆ ಬರಹ ನೋಡಿಕೊಳ್ಳಿ ಎಂದು ಶುಕ್ರವಾರ ತಿರುಗೇಟು ನೀಡಿದ್ದಾರೆ.
ಜೆಡಿ(ಎಸ್) ನಿರ್ನಾಮ ಆಗಿದೆ ಎಂದ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮ್ಮ ಪಕ್ಷಕ್ಕೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ ಮತ್ತು ಕಾಂಗ್ರೆಸ್‌ನ ದುರಹಂಕಾರಕ್ಕೆ ಬೆಲೆ ತೆತ್ತಿದೆ ಎಂದರು.
"ಜೆಡಿ(ಎಸ್) ಬಗ್ಗೆ ಮಾತನಾಡುವ ಮೊದಲು, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮ ರಾಷ್ಟ್ರೀಯ ಪಕ್ಷದ ಸ್ಥಿತಿಯನ್ನು ನೋಡಿ". ಮುಂಬೈನಲ್ಲಿ ಇವತ್ತು ಏನಾಗಿದೆ. ಕರ್ನಾಟಕ ಹಣೆಬರಹ ಮುಂದಿನ ಚುನಾವಣೆಯಲ್ಲಿ ಇದೇ ರೀತಿ ಇರುತ್ತೆ. ಬಿಹಾರದಲ್ಲಿ 6 ಸೀಟು ತಗೊಂಡಿದ್ದಿರಲ್ಲಾ? ಈ ದುರಂಹಕಾರ ಬಿಡದೆೇ ಇದ್ರೆ ಇದೇ ಪರಿಸ್ಥಿತಿ ಬರುತ್ತೆ. ಏನ್ ಅಭಿವೃದ್ಧಿ ಮಾಡಿದ್ದೀರಾ ಅಂತಾ ಜನರು ನಿಮಗೆ ಅಧಿಕಾರ ಕೊಡ್ತಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
"ಜೆಡಿ(ಎಸ್) ಬಗ್ಗೆ ಚರ್ಚಿಸಲು ಪ್ರಿಯಾಂಕ್ ಖರ್ಗೆ ಯಾರು? ನಮಗೆ ಅವರ ಪ್ರಮಾಣಪತ್ರದ ಅಗತ್ಯವಿಲ್ಲ" ಎಂದರು.
ಒಬ್ಬರು ಲೀಸ್ ಅವಧಿ ಮುಗಿದಿದೆ ನನ್ನ ಸಿಎಂ ಮಾಡಿ ಅಂತಾರೆ. ಇನ್ನೊಬ್ಬರು ಲೀಸ್ ಅವಧಿ ಮುಗಿದಿಲ್ಲ, ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಅಂತಾರೆ. ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ, ನಾನೇ ಮುಂದುವರಿಯುತ್ತೇನೆ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಏನು ಮರಿ ಖರ್ಗೆ ಅವರೇ? ಮೊದಲು ನಿಮ್ಮ ಪಕ್ಷದ ಹಣೆಬರಹ ನೋಡಿಕೊಳ್ಳಿ. ನಂತರ ಬೇರೆಯವರ ಬಗ್ಗೆ ಮಾತನಾಡಿ ಎಂದು ಪ್ರಿಯಾಂಗ್ ಖರ್ಗೆಯನ್ನು ತರಾಟೆಗೆ ತೆಗೆದುಕೊಂಡರು.
"ನಮ್ಮ ಮೈತ್ರಿಯಿಂದಾಗಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಸಂಖ್ಯೆ ಒಂಬತ್ತು ಸ್ಥಾನಗಳಿಗೆ ಇಳಿಯಿತು. ಆ ಒಂಬತ್ತು ಸ್ಥಾನಗಳು ಸಹ ನಮ್ಮ ತಪ್ಪುಗಳಿಂದಾಗಿ ಬಂದವು. ಇಲ್ಲದಿದ್ದರೆ, ಅಧಿಕಾರದಲ್ಲಿದ್ದರೂ, ನಿಮ್ಮ ರಾಷ್ಟ್ರೀಯ ಪಕ್ಷವು ಮೂರು ಅಥವಾ ನಾಲ್ಕು ಸ್ಥಾನಗಳಿಗೆ ಇಳಿಯುತ್ತಿತ್ತು ಎಂದು ಕೇಂದ್ರ ಸಚಿವ ವಾಗ್ದಾಳಿ ನಡೆಸಿದರು.
ಕೆಲವರಿಗೆ ಜನರನ್ನು ಲೂಟಿ ಮಾಡಿ ದುಡ್ಡು ಮಾಡುವ ಚಪಲ. ನನಗೆ ಜನರ ಜತೆ ನಿಂತು ಅವರ ಸಹಾಯಕ್ಕೆ ನಿಲ್ಲುವ ಚಪಲ. ಒಬ್ಬೊಬ್ಬರಿಗೆ ಒಂದೊಂದು ಚಪಲ ಇರುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
Advertisement