

ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಇಂದು ಕೇವಲ ರಾಜಕೀಯ ಭಾಷಣಗಳಿಗಷ್ಟೇ ಅಲ್ಲ, ದೈಹಿಕ ನೂಕುನುಗ್ಗಲಿಗೂ ಸಾಕ್ಷಿಯಾಯಿತು.
ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ ಹೊರನಡೆದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರನ್ನು ತಡೆಯಲು ಹೋದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಮಾರ್ಷಲ್‌ಗಳ ನಡುವೆ ತೀವ್ರ ಘರ್ಷಣೆ ನಡೆದಿದ್ದು, ಈ ವೇಳೆ ಹರಿಪ್ರಸಾದ್ ಅವರ ಜುಬ್ಬಾ ಹರಿದುಹೋಗಿರುವ ಘಟನೆ ಸಂಭವಿಸಿದೆ.
ರಾಜ್ಯಪಾಲರು ಕೇವಲ ಎರಡು ಸಾಲುಗಳ ಭಾಷಣ ಮಾಡಿ ಸದನದಿಂದ ಹೊರನಡೆಯುತ್ತಿದ್ದಂತೆ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ಅವರನ್ನು ತಡೆಯಲು ಮುಂದಾದರು. ಈ ವೇಳೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಪಾಲರ ಹಾದಿಗೆ ಅಡ್ಡಲಾಗಿ ನಿಂತು ಪ್ರತಿಭಟಿಸಲು ಮುಂದಾದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ವಿಧಾನಸಭೆಯ ಮಾರ್ಷಲ್‌ಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ರಾಜ್ಯಪಾಲರಿಗೆ ದಾರಿ ಮಾಡಿಕೊಡಲು ಯತ್ನಿಸಿದರು. ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಲು ಬಿಡದ ಮಾರ್ಷಲ್‌ಗಳು, ಅವರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಲು ಮುಂದಾದರು.
ಈ ವೇಳೆ ನಡೆದ ತಳ್ಳಾಟದಲ್ಲಿ ಮಾರ್ಷಲ್‌ಗಳು ಹರಿಪ್ರಸಾದ್ ಅವರನ್ನು ಎತ್ತಿಕೊಂಡು ಹೋಗಿ ಪಕ್ಕಕ್ಕೆ ತಳ್ಳಿದರು. ಈ ಸಂಘರ್ಷದ ನಡುವೆ ಹರಿಪ್ರಸಾದ್ ಅವರು ಧರಿಸಿದ್ದ ಬಿಳಿ ಬಣ್ಣದ ಜುಬ್ಬಾ ಹರಿದುಹೋಯಿತು. ಇದರಿಂದ ಕೆಲಹೊತ್ತು ಯಾರೂ ಇಲ್ಲದ ಜಾಗದಲ್ಲಿ ನಿಂತುಕೊಂಡು ತಮ್ಮ ಆಪ್ತರಿಗೆ ಬೇರೊಂದು ಜುಬ್ಬಾ ವ್ಯವಸ್ಥೆ ಮಾಡುವುದಕ್ಕೆ ಕರೆ ಮಾಡಿ ತಿಳಿಸಿದರು.
ಸಂವಿಧಾನದಲ್ಲಿ ರಾಜ್ಯಪಾಲರ ಅಧಿಕಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರದ ಭಾಷಣವನ್ನು ಸದನದಲ್ಲಿ ಓದುವ ಕೆಲಸ ಮಾಡಬೇಕು. ಆದರೆ ಸರ್ಕಾರದ ಭಾಷಣ ಓದದೆ ಅವರದ್ದೇ ಆದ ಭಾಷಣ ಓದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರು ಸ್ವೇಚ್ಚಾಚಾರವಾಗಿ ನಡೆದುಕೊಳ್ಳವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಹಿಂದಿನಿಂದ ಬಂದು ನನ್ನ ಬಟ್ಟೆ ಹರಿದಿದ್ದಾರೆ ಬಿಜೆಪಿಗರು. ಮುಂದಿನಿಂದ ಬರುವ ಶಕ್ತಿ ಇಲ್ಲ. ಹಿಂದಿನಿಂದ ಬಂದು ಹರಿದಿದ್ದಾರೆ. ರಣಹೇಡಿಗಳು ಹಾಗೂ ಬ್ರಿಟೀಷರ ಬೂಟ್ ನೆಕ್ಕಿದವರು. ಕರ್ನಾಟಕದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement