

ಬೆಂಗಳೂರು: ರಾಜ್ಯದ ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿರುವ ವಿರೋಧ ಪಕ್ಷ ಬಿಜೆಪಿ, ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ರಾಜೀನಾಮೆ ನೀಡಬೇಕು ಎಂದು ಶುಕ್ರವಾರ ವಿಧಾನಸಭೆಯಲ್ಲಿ ಆಗ್ರಹಿಸಿದೆ.
ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮದ್ಯ ಪರವಾನಗಿ ಮೂಲಕ ಸಂಗ್ರಹಿಸಲಾದ ಲಂಚವನ್ನು ಅಸ್ಸಾಂ ಮತ್ತು ಕೇರಳ ಸೇರಿದಂತೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಚುನಾವಣಾ ವೆಚ್ಚಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ನಿಗದಿತ ನಿಯಮಗಳನ್ನು ಉಲ್ಲಂಘಿಸಿ ಮದ್ಯ ಪರವಾನಗಿಗಳನ್ನು "ಹರಾಜು" ಮಾಡಲಾಗುತ್ತಿದೆ ಎಂದು ಆರ್ ಅಶೋಕ್ ಆರೋಪಿಸಿದರು.
ಸ್ಪೀಕರ್ ಯು ಟಿ ಖಾದರ್ ಅವರು ಕಾಂಗ್ರೆಸ್ ಶಾಸಕ ಎ ಎಸ್ ಪೊನ್ನಣ್ಣ ಅವರನ್ನು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವಂತೆ ಕೇಳಿದ ನಂತರ ಈ ಅಬಕಾರಿ ಹಗರಣ ಸದನದಲ್ಲಿ ಘರ್ಷಣೆಗೆ ಕಾರಣವಾಯಿತು.
ಅಬಕಾರಿ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಅಶೋಕ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಈ ವಿಷಯವನ್ನು ನಂತರ ಬೇರೆ ನಿಯಮದಡಿಯಲ್ಲಿ ಚರ್ಚಿಸಬಹುದು ಎಂದು ಹೇಳಿದರು.
ಆದಾಗ್ಯೂ, ಅಶೋಕ್ ಮತ್ತು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಒತ್ತಾಯದ ಮೇರೆಗೆ, ಸ್ಪೀಕರ್ ಅಶೋಕ್ ಅವರಿಗೆ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಿದರು.
"ರಾಜ್ಯದಲ್ಲಿ ಸುಮಾರು 2,500 ಕೋಟಿ ರೂ.ಗಳ ಮದ್ಯ ಸಂಬಂಧಿತ ಹಗರಣ ನಡೆದಿದೆ, ಕೆಲವು ಆಡಿಯೋಗಳು ಇವೆ. ಅಬಕಾರಿ ಇಲಾಖೆಯಲ್ಲಿ ಪರವಾನಗಿಗಳನ್ನು ಹರಾಜು ಮಾಡಲಾಗುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಅವರ ಮಗನ ಹೆಸರು ಕೇಳಿ ಬಂದಿದೆ. ಇದು ಮೂರನೇ ನಿದರ್ಶನ ಎಂದು ಹೇಳಲಾಗುತ್ತದೆ" ಎಂದು ಅಶೋಕ್ ಹೇಳಿದರು.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಸಚಿವರ ವಿರುದ್ಧ ದೂರು ದಾಖಲಾಗಿದೆ. ಆರೋಪವು ಆಡಿಯೋವನ್ನು ಆಧರಿಸಿದೆ, ಈ ಬಗ್ಗೆ ದೂರು ಕೂಡ ಇದೆ. ಇದು ಒಂದು ಪ್ರಮುಖ ವಿಷಯವಾಗಿದ್ದು, ಇದನ್ನು ಚರ್ಚಿಸಬೇಕಾಗಿದೆ. ಈ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅನುಮತಿ ನೀಡಿ" ಎಂದರು.
ಮತ್ತೊಂದು ನಿಯಮದ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದ್ದರೂ, ಬಿಜೆಪಿ ಶಾಸಕರು ಚರ್ಚೆಗೆ ಒತ್ತಾಯಿಸುತ್ತಲೇ ಇದ್ದರು.
ಸ್ಪೀಕರ್ ನಿಗದಿತ ಕಲಾಪವನ್ನು ಮುಂದುವರಿಸುತ್ತಾ, ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರಿಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಲು ಅವಕಾಶ ನೀಡುತ್ತಿದ್ದಂತೆ, ಆಡಳಿತ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ಅವರು ಇದನ್ನು ಅನುಮೋದಿಸಿದರು. ಈ ವೇಳೆ ಬಿಜೆಪಿ ಶಾಸಕರು, ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಘೋಷಣೆಗಳ ನಡುವೆ, ಸ್ಪೀಕರ್ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
Advertisement