ಖಾತೆ ಹಂಚಿಕೆ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ, ಮೋದಿ ಸರ್ಕಾರ ದೇಶದ ಚಿನ್ನವನ್ನು ಮಾರಾಟ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ-Video

ತಮಗೆ ಗೃಹ ಖಾತೆ ಸಿಗುತ್ತದೆ ಎಂಬ ವದಂತಿಯಿದೆ ಎಂದು ಕೇಳಿದಾಗ ಯಾವ ಹುದ್ದೆ ಮೇಲೂ ಅಲ್ಲ, ಕೀಳೂ ಅಲ್ಲ, ನಾಯಕರು ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಜನರ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಕುರಿತು ಇನ್ನೂ ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ, ಬಹುಶಃ ಇಂದು ಸಂಜೆಯೊಳಗೆ ತೀರ್ಮಾನವಾಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇಂದು ಸದಾಶಿವನಗರದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಮುಖ್ಯಮಂತ್ರಿ ಅವರು ಸಂಜೆಯೊಳಗೆ ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ. ಅಧಿಕೃತ ಘೋಷಣೆ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

ತಮಗೆ ಗೃಹ ಖಾತೆ ಸಿಗುತ್ತದೆ ಎಂಬ ವದಂತಿಯಿದೆ ಎಂದು ಕೇಳಿದಾಗ ಯಾವ ಹುದ್ದೆ ಮೇಲೂ ಅಲ್ಲ, ಕೀಳೂ ಅಲ್ಲ, ನಾಯಕರು ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಜನರ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ವಿರೋಧ ಪಕ್ಷಗಳಲ್ಲಿ ಆತಂಕ ಆರಂಭವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಗೃಹ ಸಚಿವರಾದರೂ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಕಾನೂನು ಹಾಗೂ ಸಂವಿಧಾನವನ್ನು ಮೀರಿ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಮತ್ತು ಆರ್. ಅಶೋಕ್ ಅವರ ಫೈಲ್‌ಗಳು ಹೊರಬರುತ್ತವೆ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅಂತಹ ಫೈಲ್‌ಗಳು ಇವೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಅದನ್ನು ಯತ್ನಾಳ್ ಅವರನ್ನೇ ಕೇಳಬೇಕು ಎಂದು ಹೇಳಿದರು.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ತಮ್ಮ ಪಕ್ಷದಲ್ಲೇ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲಿ.ವಿಜಯೇಂದ್ರ ಮತ್ತು ಆರ್. ಅಶೋಕ್ ಮಹಿಳೆಯರಿಗೆ ನಾಯಕತ್ವದ ಸ್ಥಾನ ಕಲ್ಪಿಸಲಿ. ಆರೆಸ್ಸೆಸ್‌ ಕೂಡ ಮಹಿಳೆಯರನ್ನು ಸಹ-ಸಂಚಾಲಕರನ್ನಾಗಿ ಮಾಡಲಿ. ನಂತರ ಅವರು ನಮ್ಮ ಬಗ್ಗೆ ಮಾತನಾಡಲಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com