

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದ್ದ 2026ರ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಅಚ್ಚರಿ ನಿರ್ಧಾರ ಪ್ರಕಟಿಸಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಈ ಪಟ್ಟಿಗೆ ಅನುಮೋದನೆ ನೀಡಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಕೈ ತಪ್ಪಿದೆ.
ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರಿಗೆ ಮಣೆ ಹಾಕಲಾಗಿದೆ. ಇನ್ನು ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ನಿಷ್ಠಾವಂತ ನಾಯಕರಾದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಕಣಕ್ಕಿಳಿಸಲಾಗಿದೆ.
ಬಿಜೆಪಿಯ ಈ ಹಠಾತ್ ನಿರ್ಧಾರವು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಭಾರಿ ಆಘಾತ ನೀಡಿದ್ದು, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಮರು ಆಯ್ಕೆಯ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.
ರಾಜ್ಯಸಭಾ ಟಿಕೆಟ್ ಆಕಾಂಕ್ಷೆಯಲ್ಲಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ತೀವ್ರ ನಿರಾಸೆಯಾಗಿದೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹಿರಿತನದ ಆಧಾರದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಗೌಡರನ್ನೇ ಜಂಟಿ ಅಭ್ಯರ್ಥಿಯನ್ನಾಗಿ ಮರುಆಯ್ಕೆ ಮಾಡಬಹುದು ಎಂಬ ಬಲವಾದ ಆಸೆ ಜೆಡಿಎಸ್ ಶಾಸಕರಲ್ಲಿತ್ತು.
ಆದರೆ, ಬಿಜೆಪಿ ಹೈಕಮಾಂಡ್ ವಯಸ್ಸು ಮತ್ತು ಆರೋಗ್ಯದ ಕಾರಣವನ್ನು ಮುಂದಿಟ್ಟುಕೊಂಡು ದೇವೇಗೌಡರಿಗೆ ಟಿಕೆಟ್ ನಿರಾಕರಿಸಿದೆ. ಮೈತ್ರಿಕೂಟದಲ್ಲಿದ್ದರೂ ‘ನಾವು ಯಾವುದೇ ಕಾರಣಕ್ಕೂ ಟಿಕೆಟ್‌ಗಾಗಿ ಬಿಜೆಪಿ ನಾಯಕರಿಗೆ ಒತ್ತಡ ಹಾಕುವುದಿಲ್ಲ’ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪದೇ ಪದೇ ಹೇಳುತ್ತಿದ್ದರು. ಇದೀಗ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ಜೆಡಿಎಸ್‌ನ ನಿರೀಕ್ಷೆಗೆ ತಣ್ಣೀರೆರಚಿದೆ.
ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ತ್ಯಾಗ ಮಾಡಿದ ಮಾಜಿ ಸಂಸದೆ ಸುಮಲತಾ ಅವರ ಹೆಸರು ಕೂಡ ಕೇಳಿ ಬಂದಿತ್ತು. ದೆಹಲಿ ಮಟ್ಟದಲ್ಲಿ ಸುಮಲತಾ ಲಾಬಿ ಕೂಡ ನಡೆಸಿದ್ರು. ಆದ್ರೆ ಬಿಜೆಪಿ ಸುಮಲತಾ ಅವರನ್ನೂ ಕೂಡ ಆಯ್ಕೆ ಮಾಡಿಲ್ಲ. ಇದ್ರಿಂದ ಮಂಡ್ಯ ಮೈತ್ರಿಯಲ್ಲಿ ಮಹಾಬಿರುಕು ಮೂಡುವ ಸಾಧ್ಯತೆ ಇದೆ.
Advertisement