

ಹಾಸನ: ನಾನು ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ಮೋದಿ ಕಾರಣ ಅವರೇ ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರು. ಧರ್ಮಸ್ಥಳ ಮಂಜುನಾಥ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ಅಡ್ಡ ಮತದಾನ ಮಾಡಿಲ್ಲ ಎಂದು ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಅವರು ತಿಳಿಸಿದ್ದಾರೆ,
ವಿಧಾನಸೌಧ ಆವರಣದಲ್ಲಿ ನಿನ್ನೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, "ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಪ್ರಥಮ ಪ್ರಶಸ್ತದ ಮತವನ್ನು ಬಿಜೆಪಿಯ ಲಿಂಗರಾಜು ಪಾಟೀಲ್ ಮತ್ತು ಎರಡನೇ ಪ್ರಶಸ್ತಿದ ಮತವನ್ನು ಜೆಡಿಎಸ್ ಪಕ್ಷದ ಗೋವಿಂದರಾಜುಗೆ ಹಾಕಿದ್ದೇನೆ ಎಂದರು.
ಕರ್ನಾಟಕ ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ, ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಕೆ. ಸುರೇಶ್ ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಪಕ್ಷದ ವತಿಯಿಂದ ವಿಪ್ ಜಾರಿ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ, ಮೊದಲನೆಯ ಪ್ರಾಶಸ್ತ್ರ ಮತವನ್ನು ಭಾರತೀಯ ಜನತಾ ಪಕ್ಷದ ಲಿಂಗರಾಜು ಪಾಟೀಲ್ ಅವರಿಗೆ ಹಾಗೂ ಗೋವಿಂದರಾಜು ಜನತಾದಳ ಪಕ್ಷದವರಿಗೆ ಎರಡನೇ ಪ್ರಾಶಸ್ತ್ರ ಮತವನ್ನು ಚಲಾಯಿಸಿದ್ದೇನೆ. ಅಲ್ಲದೇ ಇದಕ್ಕೆ ಸಾಕ್ಷಿಯಾಗಿ ದೊಡ್ಡಗೌಡನ ಪಾಟೀಲ್ ಮತ್ತು ಅಭ್ಯರ್ಥಿಯಾದ ಲಿಂಗರಾಜು ಪಾಟೀಲ್ ಅವರೊಡನೆ ಮತ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿದ್ದೇನೆ ಎಂದು ಪ್ರಕಟಣೆ ಕೂಡ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ.
ನಾನು ಸಂಘ ಪರಿವಾರದಿಂದ ಬಂದವನು
ನಾನು ಹಿಂದುತ್ವ, ಸಂಘಪರಿವಾರ, ಪಕ್ಷದ ಸಿದ್ಧಾಂತ ಮತ್ತು ಶಿಸ್ತುಗಳಿಗೆ ಬದ್ಧನಾಗಿದ್ದು, 2005ರಲ್ಲಿ ಪಕ್ಷ ಸಂಘಟನೆ ಮೇಲೆ ವಿಶ್ವಾಸವಿಟ್ಟು, 300 ಮತಗಳು ಬೀಳುವಂತಹ ಗಂಡಸಿ ವಿಧಾನ ಸಭಾ ಕ್ಷೇತ್ರದಿಂದ ಸಂಘಟನೆಯ ಧೃಡಸಂಕಲ್ಪವನ್ನು ಮಾಡಿ, ನನ್ನ ಪಕ್ಷಕ್ಕೆ ಮತ್ತು ನನ್ನ ಮತಕ್ಷೇತ್ರಕ್ಕೆ ನನ್ನ ಸಮಯ ನೀಡಿ ಶಾಸಕನಾಗಿದ್ದೇನೆ. ನಾನು ನಿರ್ವಹಿಸುತ್ತಿರುವ ಕಾರ್ಯವೈಖರಿಗಳ ಯಶಸ್ಸನ್ನು ಸಹಿಸದೇ ಕೆಲವು ಮುಖಂಡರುಗಳು, ನನ್ನ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ ಯಾವುದೇ ದಾಖಲೆ ಅಥವಾ ಪುರಾವೆಗಳನ್ನು ನೀಡದೇ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ. ಇಂತಹ ಸುಳ್ಳು ಹಾಗೂ ದುರುದ್ದೇಶಪೂರಿತ ಹೇಳಿಕೆಗಳಿಂದ ನನ್ನ ವೈಯುಕ್ತಿಕ ಘನತೆಗೆ, ರಾಜಕೀಯ ವರ್ಚಸ್ಸಿಗೆ ಹಾಗೂ ಹಲವು ವರ್ಷಗಳಿಂದ ಪಕ್ಷಕ್ಕಾಗಿ ಮಾಡಿದ ನನ್ನ ಸೇವೆಗೆ ಅನಗತ್ಯ ಹಾನಿಯಾಗಿದೆ ಎಂದು ಕಿಡಿಕಾರಿದರು.
ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ
ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನಾನು ಪಕ್ಷದ ಯಾವುದೇ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಹಾಗೂ ಅಡ್ಡಮತದಾನವನ್ನು ಮಾಡಿರುವುದಿಲ್ಲ ಎಂದು ಪ್ರಮಾಣೀಕರಿಸುತ್ತೇನೆ. ನನ್ನ ಘನತೆ ಮತ್ತು ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಅಪಪ್ರಚಾರ ನಡೆಸುತ್ತಿರುತ್ತಾರೆ. ಅದ್ದರಿಂದ ವಿಪ್ ಉಲ್ಲಂಘನೆಗೆ ಸಂಬಂದಿಸಿದಂತೆಯಾಗಲೀ, ಅಥವಾ ಆರ್ಥಿಕ ಆಮಿಷಕ್ಕೆ ಒಳಗಾಗಿರುವ ಬಗ್ಗೆಯಾಗಲೀ, ಮತ್ತು ಇನ್ನಿತರ ಆರೋಪಗಳ ಬಗ್ಗೆಯಾಗಲಿ, ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು, ಸತ್ಯಶೋಧನಾ ಸಮಿತಿ ರಚಿಸಿ ಪರಿಶೀಲಿಸಿ, ನನ್ನ ಬಗ್ಗೆ ಅಪಪ್ರಚಾರ ನಡೆಸಿರುವವರ ವಿರುದ್ಧ ಹಾಗೂ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾನು ಆಗ್ರಹ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕೆ ಮತ್ತು ಸಂಘಟನೆಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿರುವ ನನ್ನ ಮೇಲೆ ನಿನ್ನೆ ತಡವಾಗಿ ಮತದಾನಕ್ಕೆ ಹೋಗಿರುವ ಕಾರಣ ಈ ರೀತಿ ಆರೋಪವನ್ನು ಮಾಡಿದ್ದಾರೆ. ಜೂನ್ 18ರಂದು ರಾಘವೇಂದ್ರ ಸ್ವಾಮಿಗಳ ವಿಶೇಷ ದಿನವಾಗಿದ್ದು, ನನ್ನ ಮಗನ ಮದುವೆಯ ವಿಚಾರ ಸಂಬಂಧ ವಧುವಿನ ಮನೆಯವರು ತಕ್ಷಣ ನಮ್ಮ ಮನೆಗೆ ಬಂದ ಕಾರಣ ನನ್ನ ಮತ ಕ್ಷೇತ್ರದಿಂದ ನಾನು ಒಂದಿಷ್ಟು ತಡವಾಗಿ ಮತದಾನಕ್ಕೆ ಬಂದಿದ್ದು, ಆ ಕಾರಣವನ್ನು ಇಟ್ಟುಕೊಂಡು ಕೆಲವು ಮುಖಂಡರುಗಳು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ನಿನ್ನೆ ನಡೆದ ಮತದಾನಕ್ಕೆ ಸಂಬಂದಿಸಿದಂತೆ ನನ್ನ ಬಗ್ಗೆ ವಿವಿಧ ರೀತಿಯ ಊಹಾ ಪೋಹಗಳು, ಸುಳ್ಳುಸುದ್ದಿಗಳು ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡುತ್ತಿರುವುದು ತರವಲ್ಲ. ಇದು ನನಗೆ ಮತ್ತು ನನ್ನ ಕ್ಷೇತ್ರದ ಜನತೆಗೆ ಬಹಳ ನೋವುಂಟಾಗಿದೆ ಎಂದರು.
ಬಿಜೆಪಿ ನನಗೆ ಮಾತೃ ಸ್ವರೂಪ
ನಾನು ನಾಯಕತ್ವದ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದು. ನನ್ನ ಭಾರತೀಯ ಜನತಾ ಪಕ್ಷವನ್ನು ಮಾತೃ ಸ್ವರೂಪವಾಗಿ ಗೌರವಿಸುತ್ತೇನೆ. ನನ್ನ ಪಕ್ಷದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯಲ್ಲೂ ಭಾಗಿಯಾಗಿರುವುದಿಲ್ಲ. ಇತರೇ ಪಕ್ಷದ ಯಾವುದೇ ಮುಖಂಡರುಗಳಿಂದಾಗಲಿ, ಕಾರ್ಯಕರ್ತರ ಬಳಿಯಿಂದಾಗಲಿ, ಯಾವುದೇ ವಿಷಯಕ್ಕೆ ನಾನು ಆಸೆ, ಆಮಿಷಗಾಗಲಿ ಒಳಗಾಗಿರುವುದಿಲ್ಲ, ನಾನು ಆರ್ಥಿಕವಾಗಿ ಪರಮಾತ್ಮನ ದಯೆಯಿಂದ ಸಧೃಡನಾಗಿದ್ದೇನೆ. ಕಳೆದ ಎರಡು ಚುನಾವಣೆಯಲ್ಲಿ ಪರಾಭಾವವನ್ನು ಹೊಂದಿದ್ದರೂ ಸಹ ಯಾವುದೇ ಆಮಿಶಕ್ಕೆ ಬಲಿಯಾಗದೇ, ಪಕ್ಷದ ಸಂಘಟನೆಯ ಹೋರಾಟದ ಫಲವಾಗಿ 2023ರಲ್ಲಿ ಶಾಸಕನಾಗಿರಲು ಚನ್ನಕೇಶವನ ದಯೆಯಿಂದ ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದಾರೆ ಎಂದರು.
Advertisement