

ದಾವಣಗೆರೆ: ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಮತ್ತು ಯುವ ಕಾರ್ಯಕರ್ತರ ಬೆಂಬಲ, ಆಶೀರ್ವಾದ ತೆಗೆದುಕೊಂಡು ಇಂದು ನಾನು ನಾಮಪತ್ರ ಸಲ್ಲಿಸಿದ್ದೇನೆ. ನಾನು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ನಮ್ಮ ಪಕ್ಷದ ಕಾರ್ಯಕರ್ತರಿಗೆ ತುಂಬಾ ಖುಷಿ ನೀಡಿದೆ ಎಂದು ಇಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಸಮರ್ಥ್ ಶಾಮನೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಾಕಷ್ಟು ಬಹುಮತದಿಂದ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ನಮ್ಮ ತಾತನವರು ಕುಳಿತಿದ್ದ ಜಾಗದಲ್ಲಿಯೇ ಫಾರ್ಮ್ ತುಂಬಿ ನಾಮಪತ್ರ ಸಲ್ಲಿಸಿದ್ದೇನೆ. ಅವರ ಆಶೀರ್ವಾದ ನನಗಿದೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರು, ಯುವಕರು ಮತ್ತು ನಾಗರಿಕರ ಆಶೀರ್ವಾದಗಳೊಂದಿಗೆ, ನಮ್ಮ ತಾತ ಶಾಮನೂರು ಶಿವಶಂಕರಪ್ಪ ಹಾಗೂ ಸ್ಥಳೀಯ ದೈವ ದುರ್ಗಮ್ಮರನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಈ ಶುಭ ದಿನದಲ್ಲಿ ನಾವು ಕೆಲಸ ಆರಂಭ ಮಾಡುತ್ತಿದ್ದೇವೆ. ನಮ್ಮ ತಾತನವರು ಇಲ್ಲಿ ಮತ್ತು ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು, ಅವರ ಕೆಲಸವನ್ನು ಮುಂದುವರಿಸಿ ಬಡವರು ಮತ್ತು ಎಲ್ಲಾ ವರ್ಗದ ಜನರಿಗೆ ಸೇವೆ ಮಾಡುವ ಉದ್ದೇಶ ನಮ್ಮದು ಎಂದರು.
ಇನ್ನು ಸಂಸದೆ ಸಮರ್ಥ್ ಅವರ ತಾಯಿ ಡಾ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಯುಗಾದಿ ರಂಜಾನ್ ಹಬ್ಬ ಕೂಡಿ ಬಂದಿದೆ. ಶುಭ ಮುಹೂರ್ತ ಅಂಥ ಇಂದು ಮೊದಲ ಸೆಟ್ ನಾಮಿನೇಷನ್ ಫೈಲ್ ಮಾಡಿದ್ದೀವಿ. ಹಿಂದೆ ಅಪ್ಪಾಜಿ ಕೂಡ ಬಿ ಫಾರಂ ಇಲ್ಲದೆ ನಾಮಿನೇಷನ್ ಫೈಲ್ ಮಾಡಿದ್ರು. ಯುವಕರು ರಾಜಕೀಯಕ್ಕೆ ಬರಬೇಕು ಎಂದರು.
ನಮಗೆ ತುಂಬಾ ವಿಶ್ವಾಸ ಇದೆ. ಇಂದು ಶುಭ ದಿನ. ನಮ್ಮ ಭಾಗದಲ್ಲಿ ನಾವು ಯುಗಾದಿ ಮತ್ತು ರಮಝಾನ್ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಆದ್ದರಿಂದ ಈ ಶುಭ ದಿನದಲ್ಲಿ ನಾವು ನಾಮಪತ್ರ ಸಲ್ಲಿಸಿದ್ದೇವೆ. “ನಾವು ಚರ್ಚೆ ಮಾಡಬೇಕಾಗಿದೆ. ಚರ್ಚೆ ಮಾಡಿ ನಂತರ ಹೇಳುತ್ತೇವೆ. ಆದರೆ ನಮಗೆ ತುಂಬಾ ವಿಶ್ವಾಸ ಇದೆ. ಸ್ಥಳೀಯ ನಾಯಕರು ಬಹಳ ಸಕಾರಾತ್ಮಕವಾಗಿದ್ದಾರೆ. ಅವರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಕೆಪಿಸಿಸಿ ಮತ್ತು ಎಐಸಿಸಿ ವರಿಷ್ಠರು ಕೂಡ ದಾವಣಗೆರೆಗೆ ಬಂದು ಎಲ್ಲಾ ವರ್ಗದ ನಾಯಕರೊಂದಿಗೆ ಯೂತ್ ಕಾಂಗ್ರೆಸ್, ಎಸ್‌ಸಿ/ಎಸ್‌ಟಿ ಸಮುದಾಯದ ನಾಯಕರೊಂದಿಗೆ—ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ. ಜನರ ಬೆಂಬಲದ ಆಧಾರದ ಮೇಲೆ ಸಮರ್ಥ್ ಇಂದು ತನ್ನ ನಾಮಪತ್ರವನ್ನು ಸಲ್ಲಿಸಿದ್ದಾನೆ ಎಂದರು.
Advertisement