

ಬೆಂಗಳೂರು: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದೊಂದಿಗೆ ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.
ಪ್ರತಿಪಕ್ಷ ಬಿಜೆಪಿ ಎರಡೂ ಕಡೆ ಸೋತರೂ ಲಡ್ಡು ಹಾಗೂ ಚುರುಮುರಿ ವಿತರಿಸುವ ಮೂಲಕ ಪಶ್ಚಿಮ ಬಂಗಾಳದ ಬಿಜೆಪಿಯ ಗೆಲುವನ್ನು ರಾಜ್ಯ ಬಿಜೆಪಿ ನಾಯಕರು ಸಂಭ್ರಮಿಸಿದ್ದಾರೆ.
ಪಶ್ಚಿಮ ಬಂಗಾಳ ವಿಜಯದ ನಂತರ, ರಾಜ್ಯ ಬಿಜೆಪಿ ನಾಯಕರು ಇಂದು ಕರ್ನಾಟಕದ 'ಚುರುಮುರಿ' ಬಂಗಾಳಿಯ 'ಝಲ್ಮುರಿ'ಯನ್ನು ಬೆಂಗಳೂರಿನ ಪಕ್ಷದ ಕಚೇರಿ ಜಗನ್ನಾಥ ಭವನದ ಹೊರಗೆ ಜನರಿಗೆ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಝಲ್ಮುರಿ ಮಾರುತ್ತಿದ್ದ ಮಾರಾಟಗಾರರ ಬಳಿಗೆ ಹೋಗಿ ಅದನ್ನು ಸವಿದಾಗ ದೊಡ್ಡ ಚರ್ಚಾಸ್ಪದ ವಿಷಯವಾಗಿತ್ತು.
"ನಾವು ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ತುಮಕೂರು ಮತ್ತು ಇತರ ವಿವಿಧ ಸ್ಥಳಗಳಲ್ಲಿ ಜನರಿಗೆ ಝಲ್ಮುರಿ ಹಾಗೂ ಬಂಗಾಳಿ ಸಿಹಿತಿಂಡಿಗಳನ್ನು ವಿತರಿಸಿದ್ದೇವೆ" ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಈ ಚುನಾವಣಾ ಫಲಿತಾಂಶ ಮೋದಿ ನಾಯಕತ್ವದ ಮೇಲೆ ಜನರ ನಂಬಿಕೆಯನ್ನು ಗಟ್ಟಿಗೊಳಿಸಿದೆ ಎಂದು ಬಿಜೆಪಿ ನಾಯಕರು ಹೇಳಿದರು.
ಪಕ್ಷವು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವ ಹಾದಿಯಲ್ಲಿದೆ. ಪುದುಚೇರಿಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಪ್ರಸ್ತುತ ಟಿಎಂಸಿ ಆಡಳಿತದಡಿಯಲ್ಲಿ, ರಾಜ್ಯವು ಭಯೋತ್ಪಾದಕರು ಮತ್ತು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಗೆ ದೇಶದಲ್ಲಿ ನೆಲೆಸಲು ಆಧಾರ್ ಮತ್ತು ಇತರ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ ಎಂದು ಆರೋಪಿಸಿದರು.
ವಿಶೇಷ ಸಮಗ್ರ ಪರಿಷ್ಕರಣೆ(SIR) ಯಿಂದ ಬಿಜೆಪಿಗೆ ಲಾಭವಾಗಿದೆಯೇ ಎಂದು ಕೇಳಿದಾಗ, SIR ನಿಂದ ಪಕ್ಷಕ್ಕೆ ಲಾಭವಾಗುವ ಪ್ರಶ್ನೆಯೇ ಇಲ್ಲ ಎಂದು ಅಶೋಕ್ ಹೇಳಿದರು.
Advertisement