

ಬೆಂಗಳೂರು: ದೆಹಲಿಯಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆದು ಸುಮಾರು 4 ಗಂಟೆಗಳ ಕಾಲ ಮಾತುಕತೆ ನಡೆಸಿದರು. ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಸಭೆ ನಡೆಸಿದರು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಳಗೆ ಹೈಕಮಾಂಡ್ ಮಟ್ಟದಲ್ಲಿ ಏನು ಮಾತುಕತೆಯಾಯಿತು ಎಂದು ನಮಗೆ ಗೊತ್ತಿಲ್ಲ, ಮಾಧ್ಯಮಗಳಲ್ಲಿ ಹಲವು ವದಂತಿಗಳು ಬಂದಿವೆ. ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರು ಬೆಂಗಳೂರಿಗೆ ಬರುತ್ತಿದ್ದಾರೆ, ಅವರು ಎಲ್ಲದಕ್ಕೂ ಸ್ಪಷ್ಟನೆ ನೀಡಲಿದ್ದಾರೆ ಎಂದರು.
ರಾಜ್ಯಸಭೆ ಮತ್ತು ಕೌನ್ಸಿಲ್ ಗೆ ನೇಮಕಾತಿ ಬಗ್ಗೆ ಚರ್ಚೆ ಮಾಡಿರುವುದಾಗಿ ಹೇಳಿದ್ದಾರೆ,ಮಾಧ್ಯಮಗಳಲ್ಲಿ ಕೂಡ ಅದು ಪ್ರಸಾರವಾಗಿದ್ದು ನಮಗೆ ಗೊತ್ತಿರುವುದು ಅಷ್ಟೇ ಎಂದರು. ಸಿಎಂ ಅವರು ನನ್ನ ಜೊತೆ ಏನೂ ಚರ್ಚೆ ಮಾಡಿಲ್ಲ ಎಂದರು.
ಸಿದ್ದರಾಮಯ್ಯನವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರೆ ನೀವು ಸಿಎಂ ಹುದ್ದೆಗೆ ಬೇಡಿಕೆ ನೀಡುತ್ತೀರಾ ಎಂದು ಕೇಳಿದಾಗ ಅವೆಲ್ಲ ಅಪ್ರಸ್ತುತ, ಅದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ, ನಾನು ಯಾರನ್ನೂ ಭೇಟಿ ಮಾಡಿಲ್ಲ, ಅಲ್ಲಿ ಏನು ಚರ್ಚೆ ನಡೆಯಿತು ಎಂದು ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯನವರು ಹಲವು ಬಾರಿ ಸಚಿವರನ್ನು ಉಪಹಾರ ಕೂಟಕ್ಕೆ ಕರೆದಿದ್ದಾರೆ. ಅದರಂತೆ ನಾಳೆ ಕೂಡ ಸೌಹಾರ್ದಯುತವಾಗಿ ಕರೆದಿದ್ದಾರೆ, ಅದರಲ್ಲೇನೂ ವಿಶೇಷತೆ ಇಲ್ಲ ಎಂದರು.
Advertisement