

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲಿಯೇ ನೂತನ ಮುಖ್ಯಮಂತ್ರಿ ಆಯ್ಕೆ ಮತ್ತು ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಿದ್ದು, ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು, ಜೂನ್ 3 ರಂದು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮ ರಾಜಭವನದ ಗ್ಲಾಸ್ ಹೌಸ್ ನಲ್ಲಿ ಅತ್ಯಂತ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಆರಂಭದಲ್ಲಿ ಪ್ರಮಾಣವಚನ ಸಮಾರಂಭದ ಸ್ಥಳದ ಬಗ್ಗೆ ಗೊಂದಲವಿತ್ತು. ಆದರೆ ಅಂತಿಮವಾಗಿ ಲೋಕಭವನದಲ್ಲಿ ನಡೆಸಲು ನಿರ್ಧರಿಸಲಾಯಿತು ಎಂದರು.
ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಸಿಎಂ ಆಗುತ್ತಿದ್ದರೂ ಸಹ ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ(ರಾಜಭವನ) ಸರಳವಾದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಚಂದ್ರಶೇಖರ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಪ್ರಮಾಣವಚನ ಸಮಾರಂಭಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ನಾವು ಯಾರಿಗೂ ಯಾವುದೇ ಪಾಸ್ ಗಳನ್ನು ಸಹ ನೀಡುತ್ತಿಲ್ಲ. ತೈಲ ಬೆಲ ಏರಿಕೆ ಆಗಿರುವುದಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಬೇಡ ಎಂದು ತೀರ್ಮಾನ ಮಾಡಲಾಗಿದೆ. ಹೀಗಾಗಿ ಯಾರೂ ಸಹ ಬೆಂಗಳೂರಿಗೆ ಬರಬಾರದು ಎಂದು ಮನವಿ ಮಾಡಿದರು.
ದೊಡ್ಡ ಪ್ರಮಾಣದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಜನರನ್ನು ಕರೆತರಲು ರಾಜ್ಯದ ವಿವಿಧ ಭಾಗಗಳಿಂದ ಸುಮಾರು 10,000 ರಿಂದ 15,000 ಬಸ್‌ಗಳನ್ನು ಕಾಯ್ದಿರಿಸುವ ಬಗ್ಗೆ ಚರ್ಚೆಗಳು ನಡೆದವು. ಆದರೆ ಇಂಧನ ಬಿಕ್ಕಟ್ಟು ಮತ್ತು ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ರದ್ದುಗೊಳಿಸಲಾಯಿತು ಮತ್ತು ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ನಡೆಸಬೇಕೆಂದು ಪಕ್ಷ ನಿರ್ದೇಶನ ನೀಡಿದೆ" ಎಂದು ಚಂದ್ರಶೇಖರ್ ಹೇಳಿದರು.
Advertisement