

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಬಗ್ಗೆ ಮತ್ತೊಮ್ಮೆ ಮೆಲುಕು ಹಾಕಿದ್ದಾರೆ. 1991ರಲ್ಲಿ ಕೊಪ್ಪಳದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತೆ, ಅಂದು ಗೆದ್ದಿದ್ದರೆ ಎಂಪಿ ಆಗಿ ದೆಹಲಿಗೆ ಹೋಗಿ ಲೋಕಸಭೆ ಪ್ರವೇಶಿಸುತ್ತಿದ್ದೆ. ಅದು ರಾಜೀವ್ ಗಾಂಧಿ ಅವರ ಹತ್ಯೆಯಾದ ಸಮಯ, 10 ಸಾವಿರ ವೋಟ್ ಗಳಿಂದ ಸೋತೆ, ಆಗ ಸೋತಿದ್ದೇ ಒಳ್ಳೆದಾಯ್ತು, ಇಲ್ಲದಿದ್ದರೆ ಎರಡು ಬಾರಿ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲವೇನೋ ಎಂದು ಹೇಳಿದ್ದಾರೆ.
ಲೇಖಕ ಸಂಗಮೇಶ್ ಬಾದವಾಡಗಿ ಬರೆದಿರುವ ಜೋಳ ರಾಜನ ಕಥೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಸೋಲಿಗೆ ಕಾರಣವೇನು ಎಂದು ವೇದಿಕೆಯಲ್ಲಿ ಹೇಳಿದರು.
ಬಾಲ್ಯದ ದಿನಗಳ ಮೆಲುಕು
ನಾವೆಲ್ಲ ರಾಗಿಯನ್ನು ಮುಖ್ಯ ಆಹಾರವಾಗಿ ತಿನ್ನುವವರು. ಅನ್ನವನ್ನು ಹಬ್ಬದ ದಿನಗಳಲ್ಲಿ ಮಾತ್ರ ಊಟ ಮಾಡುತ್ತಿದ್ದೆವು. ಜೋಳವನ್ನು ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಊಟ ಮಾಡ್ತಾರೆ. ನಾನು ಅನ್ನ ಭಾಗ್ಯ ಯೋಜನೆ ತಂದಿದ್ದು ನನ್ನ ಅನುಭವದ ಆಧಾರದ ಮೇಲೆ.
ನಮ್ಮೂರಿನ ಕ್ಷೌರಿಕರ ಮನೆಯಲ್ಲಿ ಅನ್ನ ಮಾಡುತ್ತಿರಲಿಲ್ಲ, ಅವರು ರಾಗಿ ಮುದ್ದೆ ಮಾತ್ರ ಮಾಡುತ್ತಿದ್ದರು. ಅನ್ನವನ್ನು ನಮ್ಮ ಮನೆಯಲ್ಲಿ ಮಾಡ್ತಾ ಇದ್ದರು. ಅವರ ಮನೆಯಲ್ಲಿ ಮಗುವಿಗೆ ಹುಷಾರು ಇಲ್ಲದಿದ್ದಾಗ ಅನ್ನಕ್ಕೆ ನಮ್ಮ ಮನೆಗೆ ಬರೋರು. ನಮ್ಮ ತಾಯಿ ಗೊಣಗಿಕೊಂಡು ಅನ್ನ ಕೊಡ್ತಿದ್ರು. ಹೀಗಾಗಿ ಎಲ್ಲರಿಗೂ ಅನ್ನ ಸಿಗಬೇಕು ಎಂದು ಅನ್ನ ಭಾಗ್ಯ ಜಾರಿ ಮಾಡಿದ್ದು ಎಂದು ಹೇಳಿದರು.
ಜೋಳ ಉತ್ತರ ಕರ್ನಾಟಕದ ಮುಖ್ಯ ಬೆಳೆ. ಈಗ ಎಲ್ಲ ಕಡೆ ಬೆಳೆಯುತ್ತಾರೆ. ಜೋಳ ನಮಗೆ ಬರಗಾಲದಲ್ಲಿ ಸಿಗ್ತಾ ಇತ್ತು. ಈಗಲೂ ಬರಗಾಲವಿದೆ. ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಬರಗಾಲ ಇದೆ. ಕರಾವಳಿ ಭಾಗದಲ್ಲೂ ಬರಗಾಲವಿರಬೇಕು. ಬರಗಾಲ ಈ ಬಾರಿ ಬಹಳ ವ್ಯಾಪಕವಾಗಿದೆ. ರಾಜ್ಯ ಸರ್ಕಾರ ಐದು ಸಾವಿರ ಪ್ರತಿ ಕುಟುಂಬಕ್ಕೆ ಕೋಡ್ತೇವೆ ಅಂದಿದ್ದಾರೆ. ಕೇಂದ್ರ ಸರ್ಕಾರ ಕೂಡ ಸಹಾಯಕ್ಕೆ ಬರಬೇಕು. ಸುಮಾರು 60 ಸಾವಿರ ಕೋಟಿ ನಷ್ಟ ಆಗಿದೆ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ನೀಡಲಾಗಿದೆ. ಕೇಂದ್ರ ಸರ್ಕಾರ ಎಷ್ಟು ಕೋಡ್ತಾರೆ ಅಂತ ಗೊತ್ತಿಲ್ಲ ಎಂದರು.