

ಬೆಂಗಳೂರು: ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ನೇಮಕವಾಗಲಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ 2028ರ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಮತ್ತೆ ಅಧಿಕಾರಕ್ಕೆ ಬರುವುದು ನಮ್ಮ ಗುರಿಯಾಗಿದ್ದು, ಅನಗತ್ಯ ಚರ್ಚೆಗಳು ಅಪ್ರಸ್ತುತ.
ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ, ವಿರೋಧ ಪಕ್ಷಗಳು ತಮ್ಮ ಮನೆಯ ದೋಷ ಮುಚ್ಚಿಕೊಳ್ಳಲು ಇಂತಹ ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.
ಇಂಧನದಲ್ಲಿ ಎಥೆನಾಲ್ ಮಿಶ್ರಣದ ಕುರಿತು ರಾಜ್ಯದ ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ ಅವರು, ಇಂಧನದಲ್ಲಿ ಶೇ.20ರಿಂದ 30ರಷ್ಟು ಎಥೆನಾಲ್ ಮಿಶ್ರಣವಾಗುತ್ತಿರುವ ಬಗ್ಗೆ ಬಂದಿರುವ ಪ್ರಯೋಗಾಲಯದ ವೈಜ್ಞಾನಿಕ ವರದಿಗಳ ಆಧಾರದ ಮೇಲೆಯೇ ಸಚಿವರು ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ತೈಲ ಕಂಪನಿಗಳಿಗೆ ಸೂಕ್ತ ಸೂಚನೆ ನೀಡಬೇಕು ಎಂಬುದು ಅವರ ಕಳಕಳಿಯಾಗಿತ್ತೇ ಹೊರತು ಬೇರೆಯಲ್ಲ. ವೈಜ್ಞಾನಿಕ ದತ್ತಾಂಶಗಳ ಮೇಲಿನ ಹೇಳಿಕೆಯನ್ನು ಕೇಂದ್ರ ಸಚಿವರು ಟೀಕಿಸುವುದು ಸಾಧುವಲ್ಲ ಎಂದರು.
ಬಿಬಿಎಂಪಿ ಹಾಗೂ ಜಿಬಿಎ ಚುನಾವಣೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿ, ಕರಡು ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆಕ್ಷೇಪಣೆಗಳ ವಿಲೇವಾರಿ ಬಳಿಕ ಅಂತಿಮ ಪಟ್ಟಿ ಪ್ರಕಟವಾದಾಗ ಚುನಾವಣೆ ನಡೆಯಲಿದೆ. ಜೊತೆಗೆ ಜನಗಣತಿಯ ಗೊಂದಲಗಳೂ ಸಹ ಚುನಾವಣೆ ಮುಂದೂಡಿಕೆಗೆ ಕಾರಣವಾಗಿವೆ ಎಂದರು.