

ಮೈಸೂರು: ನಟ ಪ್ರಕಾಶ್ ರಾಜ್ ಹಾಗೂ ಪ್ರದೀಪ್ ಈಶ್ವರ್ ಇಬ್ಬರನ್ನೂ ಸಮಾಜದವರೇ ಹುಚ್ಚರು ಎಂದು ದೂರ ಇಟ್ಟಿದ್ದಾರೆ. ಮೋದಿ ಅವರು 13 ವರ್ಷಗಳಿಂದ ತಮ್ಮನ್ನು ಬಂಧಿಸಿಲ್ಲ ಎಂದು ಪ್ರಕಾಶ್ ರಾಜ್ ಹೇಳುತ್ತಾರೆ. ಹುಚ್ಚರನ್ನು ಯಾರಾದರೂ ಬಂಧಿಸಿ ಜೈಲಿಗೆ ಹಾಕುತ್ತಾರಾ ಎಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೇಶದ್ರೋಹಿಗಳು ಎಂದು ನಟ ಪ್ರಕಾಶ್ ರಾಜ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಟ ಪ್ರಕಾಶ್ ರಾಜ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಇಬ್ಬರೂ ಹುಚ್ಚರು ಎಂದಿದ್ದಾರೆ. ಹುಚ್ಚರು ಎಂದರೆ ಎಲ್ಲರೂ ದೂರ ಇರ್ತಾರೆ, ಹಾಗಾಗಿ ನೀವು ಅವರಿಗೆ ಮೈಕ್ ಹಿಡಿಯೋಕೆ ಹೋಗಬೇಡಿ. ಸರ್ಕಾರ ಹುಚ್ಚರನ್ನು ಅರೆಸ್ಟ್ ಮಾಡಲು ಹೋಗೋದಿಲ್ಲ ಎಂದಿದ್ದಾರೆ.
ಒಬ್ಬರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದು ಕೊಂಡಿದ್ದಾರೆ. ಮತ್ತೊಬ್ಬರು ಎಂಎಲ್‌ಎ, ಗ್ಯಾರಂಟಿ ಕೂಸು ಎಂದು ಪ್ರದೀಪ್ ಈಶ್ವರ್ ಅವರನ್ನು ಉಲ್ಲೇಖಿಸಿ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡುವುದಿಲ್ಲ, ಹೀಗಾಗಿ ಹುಚ್ಚನಾಗಿ ಓಡಾಡುತ್ತಿದ್ದಾನೆ.
ಅಲ್ಲಿ ಬೇರೆಯವರನ್ನು ಈಗಾಗಲೇ ಆಯ್ಕೆ ಮಾಡಿ ಇಡಲಾಗಿದೆ. ಐದು ವರ್ಷ ಏನೋ ಮಾತನಾಡಲಿ ಎಂದು ಸುಮ್ಮನೆ ಬಿಟ್ಟಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.