

ಕಲಬುರಗಿ: ರಾಜ್ಯದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ಎದುರಿಸಲಿವೆ, 2028ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷದ ಅಭ್ಯರ್ಥಿ ಶಶಿಲ್ ನಮೋಶಿ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಇಂದು ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಆಡಳಿತ ವೈಫಲ್ಯದಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಆರೋಪಿಸಿದರು.
ಸಿಎಂ ಅಭ್ಯರ್ಥಿ ಯಾರು?
ಹೆಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಮುಂದಿನ ಸಿಎಂ ಅಭ್ಯರ್ಥಿ ಎನ್ನುವ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿ, ನಮ್ಮ ಗಮನವೆಲ್ಲ ಸದ್ಯಕ್ಕೆ ಆ ಕಡೆಯಿದೆ. ವಿಧಾನಸಭೆ ಚುನಾವಣೆ ಬಳಿಕ ಯಾರು ಸಿಎಂ ಆಗಬೇಕು ಎಂಬುವುದರ ತೀರ್ಮಾನವಾಗುತ್ತದೆ. ಚುನಾವಣೆ ಬಳಿಕ ಯಾರು ಸಿಎಂ ಎಂಬುದು ಈಗಾಗಲೇ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮೊದಲು ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಬಳಿ ಬಿಜೆಪಿ ಜೆಡಿಎಸ್ ಎರಡು ಒಂದೆ ಎಂಬ ಅಭಿಪ್ರಾಯವಿದೆ. ಸಿಎಂ ಯಾರಾಗಬೇಕು ಎನ್ನುವುದು ನಂತರ ತೀರ್ಮಾನವಾಗುತ್ತದೆ ಎಂದರು.
2028 ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಡಿಕೆ ಶಿವಕುಮಾರ್ ಭ್ರಮೆಯಲ್ಲಿದ್ದಾರೆ ಇರಲಿ, ಅವರ ಭ್ರಮೆಗೆ ನಮ್ಮ ಅಭ್ಯಂತರವೇನೂ ಇಲ್ಲ. ಹಣ ಹೆಂಡ ಬಲದ ಮೇಲೆ ಚುನಾವಣೆಯಲ್ಲಿ ಗೆಲ್ಲುವ ಕಾಲ ಹೋಗಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರಕ್ಕೆ ಪಾಠ ಕಲಿಸಬೇಕು ಅಂದ್ರೆ ಈ ಚುನಾವಣೆಯಲ್ಲಿ ಸೊಲಿಸಬೇಕಿದೆ. ಈ ರಾಜ್ಯದ ಮತದಾರರು ಜಾಗೃತರಾಗಿದ್ದಾರೆ. ಬರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತೆವೆ ಎಂದು ಹೇಳಿದರು.
ನಮ್ಮ ದೇಶದ ಹೆಮ್ಮೆಯ ಪೈಲೆಟ್ ಸ್ಮಿತ್ 172 ಜನರ ರಕ್ಷಣೆ ಮಾಡಿದ್ದಾರೆ. ಸ್ಮಿತ್ ಅವರಿಗೆ ಭಾರತ ರತ್ನ ಕೊಡಬೇಕು ಅಂತಾ ಪ್ರಧಾನಿಯವರಿಗೆ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.