

ಬೆಂಗಳೂರು: ಚಿಕ್ಕಬಳ್ಳಾಪುರ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಜೋರಾಗಿದೆ. ಶಾಸಕ ಪ್ರದೀಪ್ ಈಶ್ವರ್ ಅವರು ಕಳೆದ ಬಾರಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಗೆಲ್ಲೋ ಯೋಗ್ಯತೆ ಇಲ್ಲ, ರಾಜಕೀಯವಾಗಿ ಏನೂ ಮಾಡಲಾರೆ. ರಿಯಲ್ ಎಸ್ಟೇಟ್ ಮಾಡು ಉದ್ದಾರವಾದ್ರೂ ಆಗ್ತೀಯ ಎಂದಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಶಾಸಕ ಪ್ರದೀಪ್ ಈಶ್ವರ್ ಅವರು, "ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಟಿಕೆಟ್ ಕೊಟ್ಟಾಗ ಗೆಲ್ಲುವ ಯೋಗ್ಯತೆ ಇಲ್ಲದಿರುವ ವ್ಯಕ್ತಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಪದೇ ಪದೇ ಕೈ ಹಾಕಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡುತ್ತಿದ್ದಾನೆ.
ಅವಕಾಶ ಸಿಕ್ಕಾಗ ತಾಕತ್ತು ತೋರಿಸಲು ವಿಫಲವಾಗಿ ಈಗ ವಿನಾಕಾರಣ ಸ್ಥಳೀಯರನ್ನ ಪಕ್ಷದ ವಿರುದ್ಧ ಎತ್ತಿಕಟ್ಟಿ ಬಿಜೆಪಿಯವರ ಜೊತೆ ಕೈಜೋಡಿಸಿ ಪೇರೆಸಂದ್ರದಲ್ಲಿ ಬಿಜೆಪಿಯವರ ಜೊತೆ ಕರಗ ಕಾರ್ಯಕ್ರಮಕ್ಕೆ ಭಾಗವಹಿಸಿ ಮತ್ತು ಬಿಜೆಪಿಯವರ ಜೊತೆ ನಿರಂತರ ಸಂಪರ್ಕವಿರುವ ಆ ಪಕ್ಷ ವಿರೋಧಿಯನ್ನ ನಾವು ಏನೆಂದು ಕರೆಯುವುದು? ಎಂದು ಪ್ರಶ್ನೆ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗೆ ಹೇಳಲು ಬಯಸುತ್ತೇನೆ, "ನಿನ್ನ ಜೀವನದಲ್ಲಿ ನೀನು ರಾಜಕೀಯವಾಗಿ ಏನೂ ಮಾಡಲಾರೆ. ಸಾಧ್ಯವಾದರೆ real estate ಆದ್ರೂ ಮಾಡಿಕೊಂಡಿರು, ಉದ್ದಾರವಾದ್ರೂ ಆಗ್ತೀಯ". ಇಂತಿ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಪ್ರದೀಪ್ ಈಶ್ವರ್. ನಿನಗೆ ಎಂ.ಪಿ ಟಿಕೆಟ್ ತಪ್ಪಿಸುತ್ತೇನೆ, ಮುಂದಿನ ಬಾರಿ ನನ್ನ ತಮ್ಮನಿಗೆ ಎಂಪಿ ಟಿಕೆಟ್ ಕೊಡಿಸ್ತೀನಿ ನೋಡ್ತೀಯಾ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.