

ನವದೆಹಲಿ: ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ತೀವ್ರ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಈ ಪ್ರಕರಣವು ರಾಜ್ಯದ ಕಾಂಗ್ರೆಸ್ ನಾಯಕರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಜೆಡಿಎಸ್ ಪಕ್ಷ ರೂಪಿಸಿದ ಸಂಚು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿವಾದದ ಕುರಿತು ವಿವರಣೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ನಿನ್ನೆ ಗುರುವಾರ ದೆಹಲಿಗೆ ತೆರಳಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾದರು.
ಈ ಸಭೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಭಾಗವಹಿಸಿದ್ದರು. 40 ನಿಮಿಷಗಳಿಗೂ ಹೆಚ್ಚು ಕಾಲ ಸಭೆ ನಡೆಯಿತು.
ಮೂಲಗಳ ಪ್ರಕಾರ, ಸ್ಟಿಂಗ್ ಆಪರೇಷನ್ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಜೆಡಿಎಸ್ ನಾಯಕರು ರೂಪಿಸಿದ ಸಂಚು ಇದೆ ಎಂದು ಡಿಕೆ ಶಿವಕುಮಾರ್ ಅವರು ವೇಣುಗೋಪಾಲ್ ಅವರಿಗೆ ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಗೆ ತಾವು ಆದೇಶಿಸಿದ್ದು, ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದೂ ಹೇಳಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಇತರ ಕಾಂಗ್ರೆಸ್ ನಾಯಕರು ದೂರು ನೀಡಿದ ಹಿನ್ನೆಲೆಯಲ್ಲಿ ವೇಣುಗೋಪಾಲ್ ಅವರು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ದೆಹಲಿಗೆ ಕರೆಸಿದ್ದರು. ಕರ್ನಾಟಕದಲ್ಲಿ ಈ ವಿವಾದದಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಅವರು ಹೈಕಮಾಂಡ್‌ಗೆ ತಿಳಿಸಿ, ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೂ ಈ ವಿವಾದ ಪರಿಣಾಮ ಬೀರಬಹುದು ಎಂದು ಕೆಲವು ನಾಯಕರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ನಿನ್ನೆ ಹೈಕಮಾಂಡ್ ಜೊತೆ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ವೇಣುಗೋಪಾಲ್ ಅವರೊಂದಿಗೆ ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಚರ್ಚಿಸಿಲ್ಲ ಎಂದು ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮೊಂದಿಗೆ ಸಭೆಗೆ ಬಂದಿದ್ದರು ಎಂಬ ವರದಿಗಳನ್ನೂ ಅವರು ತಳ್ಳಿಹಾಕಿದರು. ವೇಣುಗೋಪಾಲ್ ಅವರ ನಿವಾಸದಲ್ಲಿ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದದ್ದು ಕೇವಲ ಕಾಕತಾಳೀಯ ಎಂದು ಹೇಳಿದರು.
ಇನ್ನು ಒಂದೆರಡು ದಿನಗಳಲ್ಲಿ ವಿದೇಶ ಪ್ರವಾಸದಿಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮರಳಿದ ಬಳಿಕ ನಾವು ಸಿದ್ದಪಡಿಸಿದ ಸಚಿವ, ನಿಗಮ ಮಂಡಳಿಗಳ ಮುಖ್ಯಸ್ಥರ ಪಟ್ಟಿಗೆ ಅನುಮೋದನೆ ನೀಡುವುದಾಗಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಕೆಲವು ಶಾಸಕರನ್ನು ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರನ್ನಾಗಿ ನೇಮಿಸಬೇಕಿದೆ. ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ಕುರಿತು ರಾಜ್ಯದ ನಾಯಕರೊಂದಿಗೆ ಶೀಘ್ರದಲ್ಲೇ ಸಂಪರ್ಕಿಸುವುದಾಗಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ವಿಧಾನ ಪರಿಷತ್ ಚುನಾವಣೆಗಳ ಮಾದರಿ ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ವಿವಿಧ ಮಂಡಳಿ ಮತ್ತು ನಿಗಮಗಳಿಗೆ ಸುಮಾರು 500 ಸದಸ್ಯರನ್ನು ನಿರ್ದೇಶಕರನ್ನಾಗಿ ನೇಮಿಸುವುದಾಗಿ ಅವರು ತಿಳಿಸಿದರು.