

ಬೆಂಗಳೂರು: ‘ಸ್ಟಿಂಗ್ ಆಪರೇಷನ್’ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಮೆಟಾ ಎಐ (Meta AI) ಕನ್ನಡಕ ಧರಿಸಿದ್ದ ಉದ್ಯಮಿಯೊಬ್ಬರು ಇತ್ತೀಚೆಗೆ ತಮ್ಮನ್ನು ಭೇಟಿಯಾಗಿದ್ದರು. ಈ ವೇಳೆ ಅವರು ತಮ್ಮ ಮೇಲೆ ಕಣ್ಣಿಡುವ ಉದ್ದೇಶದಿಂದ ಬಂದಿರಬಹುದು ಎಂಬ ಅನುಮಾನ ಮೂಡಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೇವರು ನನಗೆ ಒಂದು ಶಕ್ತಿಯನ್ನು ಕೊಟ್ಟಿದ್ದಾನೆ. ಅದೇನೆಂದರೆ, ಮುಖಭಾವಗಳನ್ನು ಓದುವ ಶಕ್ತಿ. ನನ್ನ ಅನುಭವದ ಆಧಾರದ ಮೇಲೆ ಯಾರೊಬ್ಬರು ನನ್ನ ಬಳಿಗೆ ಏಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಲ್ಲೆ. ಪ್ರತಿದಿನ ಸಾವಿರಾರು ಜನರು ನನ್ನನ್ನು ಭೇಟಿಯಾಗುತ್ತಾರೆ. ಅವರ ಮುಖಭಾವಗಳನ್ನು ನಾನು ಓದಬಲ್ಲೆ,” ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಉದ್ಯಮಿಯೊಬ್ಬರು ನನ್ನನ್ನು ಭೇಟಿಯಾಗಿ ವ್ಯವಹಾರದ ಬಗ್ಗೆ ಚರ್ಚಿಸಲು ಬಂದಿದ್ದರು. ಅಧಿಕಾರಿಗಳು ಅವರ ಭೇಟಿಗೆ ಸಮಯ ನಿಗದಿಪಡಿಸಿದ್ದರು. ಅವರು ನನ್ನನ್ನು ಆ್ಯಂಟೆ ಚೇಂಬರ್‌ಗೆ ಕರೆದೊಯ್ದು ತಮ್ಮ ಲ್ಯಾಪ್‌ಟಾಪ್ ತೆರೆದರು. ತಮ್ಮ ಕಂಪನಿ ಅಥವಾ ವ್ಯವಹಾರದ ಬಗ್ಗೆ ಮಾತನಾಡುವ ಬದಲು, ಅವರು ರಾಜಕೀಯ ಮತ್ತು ಚುನಾವಣಾ ವಿಶ್ಲೇಷಣೆಯ ಬಗ್ಗೆ ಚರ್ಚಿಸಲು ಆರಂಭಿಸಿದರು. ಚುನಾವಣಾ ವಿಶ್ಲೇಷಕರಂತೆ ಯಾವ ಮತಗಟ್ಟೆಯಲ್ಲಿ ಏನು ಮಾಡಬಹುದು ಎಂಬುದನ್ನು ವಿವರಿಸಲಾರಂಭಿಸಿದರು ಎಂದು ಡಿ ಕೆ ಶಿವಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.
ಇದರಿಂದ ನನಗೆ ಅನುಮಾನ ಮೂಡಿತು. ಹೀಗಾಗಿ, ಅವರ ಬಗ್ಗೆ ಹಾಗೂ ಅವರ ಹಿನ್ನೆಲೆಯ ಕುರಿತು ತನಿಖೆ ನಡೆಸುವಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಮಾಡಲು ಬಂದ ವ್ಯಕ್ತಿ ನನ್ನನ್ನು ಮತ್ತು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಭೇಟಿ ಮಾಡಿದ್ದಾರೆ. ಆಗ ಮೆಟಾ ಕನ್ನಡಕ ಧರಿಸಿದ್ದರು ಎಂದು ಹೇಳಿದ್ದಾರೆ. ಆದರೆ ಆ ವ್ಯಕ್ತಿ ಯಾರು, ಅವರ ಹೆಸರೇನು, ಹಿನ್ನಲೆಯೇನು ಎಂದು ಸಿಎಂ ಬಹಿರಂಗಪಡಿಸಿಲ್ಲ.