

ಕಲಬುರಗಿ: ಕರ್ನಾಟಕ ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಹಾಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಭರ್ಜರಿ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಮೊದಲ ಸುತ್ತಿನ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಶಶೀಲ್ ನಮೋಶಿ ಅವರು ಶರಣಪ್ಪ ಮಟ್ಟೂರು ಅವರಿಗಿಂತ 1,529 ಮತಗಳ ಮುನ್ನಡೆ ಸಾಧಿಸಿದ್ದರು. ಎರಡನೇ ಸುತ್ತಿನಲ್ಲೂ ನಮೋಶಿ ಮುನ್ನಡೆ ಮುಂದುವರಿಸಿದ್ದು, 3 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಫಲಿತಾಂಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ನಡೆದ ನಾಲ್ಕು ಎಂಎಲ್‌ಸಿ ಚುನಾವಣೆಯಲ್ಲಿ ಸರ್ಕಾರಕ್ಕೆ ಪ್ರಜ್ಞಾವಂತ ಜನ ಪಾಠ ಕಲಿಸಿದ್ದಾರೆ. ನಮ್ಮ ರಾಜ್ಯದ ಶಿಕ್ಷಕರು ಹಾಗೂ ಪದವೀಧರರು ಡಿಕೆಶಿ ಅವರಿಗೆ ಪಾಠ ಕಲಿಸಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ ಅಂತಾ ಹೇಳುವ ಡಿಕೆಶಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಈ ನಾಲ್ಕು ಚುನಾವಣೆಯ ಫಲಿತಾಂಶ ಮುಂಬರುವ 2028ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.