'ಇದು ರಾಜಕೀಯ ಪ್ರೇರಿತ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರ ಮೇಲೆ BJP ಇಡಿ ದಾಳಿ ಮಾಡಿಸಬಹುದು': ಡಿ ಕೆ ಶಿವಕುಮಾರ್; Video

ಸತೀಶ್ ಜಾರಕಿಹೊಳಿ ಅವರು ದಲಿತ ನಾಯಕರು, ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದೆ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ, ಇದು ಮುಂದೆ ಅವರಿಗೇ ತಿರುಗುಬಾಣವಾಗಲಿದೆ ಎಂದರು.
D K Shivakumar
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ED) ದಾಳಿಯ ಹಿಂದೆ ಬಿಜೆಪಿಯ ದುರುದ್ದೇಶವಿದ್ದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷವನ್ನು ರಾಜಕೀಯವಾಗಿ ಗುರಿಯಾಗಿಸಲು ಇ.ಡಿ ಅಸ್ತ್ರವನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ತಮ್ಮೆಲ್ಲಾ ಸಚಿವರಿಗೆ ಎಚ್ಚರಿಕೆಯ ಮಾತುಹೇಳಿರುವ ಡಿಕೆ ಶಿವಕುಮಾರ್, ಇ.ಡಿ ಯಾರನ್ನೂ ಬಿಡುವುದಿಲ್ಲ, ಸುಳ್ಳು ಕಥೆ ಕಟ್ಟಿ, ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾಗೇಂದ್ರ ಮೇಲೆ ಇಡಿ ದಾಳಿ ಮಾಡಿದರು, ಆಮೇಲೆ ನಿಜಾನ, ಸುಳ್ಳೋ ಎಂದು ನಾನು ಪರೀಕ್ಷೆ ಮಾಡಿಸಿದೆ, ಬಿಜೆಪಿಯವರಿಗೆ ತಲೆಯಲ್ಲಿ ಏನೂ ಇಲ್ಲ, ಸಿದ್ದರಾಮಯ್ಯನವರೇ ಅಂದು ವಾಲ್ಮೀಕಿ ನಿಗಮದಲ್ಲಿ ಅಕ್ರಮವಾಗಿದೆ ಎಂದಿದ್ದರು, ನಾಗೇಂದ್ರ ಅವರು ರಾಜೀನಾಮೆ ನೀಡಿದರೂ ಇನ್ನೂ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಕೆಪಿಎಸ್ ಸಿ ಹಗರಣ ಸಂಬಂಧ ಕೂಡ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ.

ನಾಳೆ ನನ್ನ ನೇತೃತ್ವದ ಸರ್ಕಾರ 100 ದಿನಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ನಾನು ಜನರ ಮುಂದೆ ಕೆಲವು ಉತ್ತಮ ವಿಚಾರಗಳನ್ನು ಹಂಚಿಕೊಳ್ಳಬೇಕೆಂದಿದ್ದೇನೆ, ಈ ಸಂದರ್ಭದಲ್ಲಿ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಇಡಿ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಎಚ್ಚರವಾಗಿರಿ

ಸುಮಾರು 40 ಮಂದಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರನ್ನು ಇ.ಡಿ ಗುರಿಯಾಗಿಸಬಹುದು. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಬಿಜೆಪಿ ನಾಯಕರ ವಿರುದ್ಧದ ಹಳೆಯ ಎಫ್‌ಐಆರ್‌ಗಳು, ವಿಶೇಷವಾಗಿ ಭೋವಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇ.ಡಿ ಏಕೆ ಇನ್ನೂ ತನಿಖೆ ನಡೆಸಿಲ್ಲ ಎಂದು ಅವರು ಪ್ರಶ್ನಿಸಿದರು. ಇದು ಬಿಜೆಪಿಯ ರಾಜಕೀಯ ಪ್ರೇರಿತ ತಂತ್ರ ಎಂದರು.

ಸತೀಶ್ ಜಾರಕಿಹೊಳಿ ಅವರು ದಲಿತ ನಾಯಕರು, ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದೆ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ, ಇದು ಮುಂದೆ ಅವರಿಗೇ ತಿರುಗುಬಾಣವಾಗಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com