

ಮೈಸೂರು: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಅವರು ಮಸೀದಿ ಮುಂದೆ ಪಟಾಕಿ ಸಿಡಿಸಿದ್ರೆ, ಗ್ರಹಚಾರ ಬಿಡಿಸ್ತೇನೆ ಎಂದು ಎಚ್ಚರಿಕೆ ನೀಡಿದ್ದು, ಆಡಳಿರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಇದೀಗ ಇನ್ಸ್ಪೆಕ್ಟರ್ ಧನಂಜಯ್ ಪರ ನಿಂತ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಪಾಪ ಇನ್ಸ್ಪೆಕ್ಟರ್ ಧನಂಜಯ ಯಾವುದೇ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.
ಬುದ್ಧಿವಾದ ಹೇಳುವ ಧಾಟಿ ಸ್ವಲ್ಪ ಬದಲಾಗಿದೆ. ಅದನ್ನು ಬಿಟ್ಟರೆ ಧನಂಜಯ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದಿರುವ ಇನ್ಸ್ಪೆಕ್ಟರ್ ವಿರುದ್ಧ ಯಾಕೆ ಕ್ರಮಕೈಗೊಳ್ಳಬೇಕು? ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅವರಿಗೆ ಬೇಕಾದಂತಹ ರಸ್ತೆಯಲ್ಲಿ ಹೋಗಲು ಬಿಡಲು ಆಗುತ್ತಾ? ಸ್ಥಳೀಯ ಆಡಳಿತದ ಅನುಮತಿ ಪಡೆದು ಮೆರವಣಿಗೆ ಮಾಡಬಹುದು. ಅನುಮತಿ ಪಡೆಯದೆ ಏನಾದ್ರೂ ಸಮಸ್ಯೆಯಾದರೆ ಯಾರು ಹೊಣೆ? ಏನಾದರೂ ಹೆಚ್ಚುಕಡಿಮೆಯಾದರೆ? ಅದನ್ನೇ ಪಿಐ ಧನಂಜಯ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ ಹೇಳಿರುವುದು ಸರಿಯಾಗೇ ಇದೆ ಎಂದರು.
ಬಿಜೆಪಿಯವರು ರಣಹದ್ದುಗಳು. ಕೋಮುಗಲಭೆ ಆಗುವುದನ್ನೇ ಕಾಯುತ್ತಿರುತ್ತಾರೆ. ಕೋಮುಗಲಭೆ ಆಗಬೇಕು, ಯಾರಾದ್ರೂ ಸಾಯಬೇಕೆಂದು ಬಯಸುತ್ತಾರೆ. ಸಾವಿನ ಲಾಭ ಪಡೆಯಬೇಕು ಎಂಬುದು ಬಿಜೆಪಿಯವರ ಪ್ಲ್ಯಾನ್. ಎಲ್ಲೇ ಕೋಮುಗಲಭೆ ಆದರೂ ಬಿಜೆಪಿಗೆ ಚುನಾವಣಾ ಲಾಭವಾಗಿದೆ. ಹೀಗಾಗಿ ಬಿಜೆಪಿಯವರು ಕೋಮು ಗಲಭೆ ಬಗ್ಗೆ ಆಸಕ್ತಿ ವಹಿಸುತ್ತಾರೆ. ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಅದೇ ಕೆಲಸಕ್ಕೆ ಬಂದಿದ್ದಾರೆ. ಪ್ರತಿಭಟನಾ ಮೆರವಣಿಗೆ ಸೇರಿದಂತೆ ಏನಾದರೂ ಮಾಡಲಿ ಬಿಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.