

ಚಿಕ್ಕಬಳ್ಳಾಪುರ: ನಂದಿ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್‌ಗೆ ಸಂಸದ ಡಾ.ಕೆ ಸುಧಾಕರ್ ತಾಯಿಯವರ ಹೆಸರಿಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ನಡೆದ ವಿಶೇಷಚೇತನ ಹಾಗೂ ಹಿರಿಯ ನಾಗರೀಕರಿಕರಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಧಾಕರ್ ಅವರ ತಾಯಿ ಶಾಂತಮ್ಮನವರು ನನಗೂ ತಾಯಿಯಿದ್ದಂತೆ, ಅವರ ಹೆಸರು ಇಡಬೇಕು. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ ಅನುಮತಿ ಕೊಡಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಭೈರತಿ ಸುರೇಶ್ ಹಾಗೂ ಸುಧಾಕರ್ ಎದುರಲ್ಲೇ ಪ್ರದೀಪ್ ಈಶ್ವರ್ ಈ ಮಾತುಗಳನ್ನಾಡಿದರು. ಚಿಕ್ಕಬಳ್ಳಾಪುರ ತಾಲೂಕು ಅರೂರು ಬಳಿ ಇರುವ ನಂದಿ ವೈದ್ಯಕೀಯ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್ ಇಂದು ಉದ್ಘಾಟನೆಗೊಂಡಿದೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.
ರಾಜಕೀಯ ಬದ್ದ ವೈರಿಗಳು ಎಂದು ಕರೆಸಿಕೊಳ್ಳುವ ಪ್ರದೀಪ್ ಈಶ್ವರ್ ಹಾಗೂ ಕೆ ಸುಧಾಕರ್ ಇಂದು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದರು. ಈ ಹಿನ್ನೆಲೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.
ಈ ವೇಳೆ ಪ್ರಾರಂಭದಲ್ಲಿ ಇಬ್ಬರು ನಾಯಕರು ಭೈರತಿ ಸುರೇಶ್ ಅಕ್ಕ ಪಕ್ಕ ಕುಳಿತಿದ್ದರು. ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರದೀಪ್ ಈಶ್ವರ್, ಸಂಸದರು ನನ್ನ ಅಣ್ಣ.. ಸುಧಾಕರ್ ಅಣ್ಣ ಎಂದು ಹೇಳುವ ಮೂಲಕ ಗಮನಸೆಳೆದರು.