

ಬೆಂಗಳೂರು: ನೈಸ್ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ನೈಸ್ ಹಗರಣ 2ಜಿ ಸ್ಕ್ಯಾಮ್, ಕೋಲ್ ಸ್ಕ್ಯಾಮ್‌ಗಿಂತ ದೊಡ್ಡ ಹಗರಣ ಎಂದು ಆರೋಪಿಸಿದರು. 2003ರಲ್ಲಿ ಸಿಎಂ ಡಿಕೆಶಿ ಆಸ್ತಿ 4 ಕೋಟಿ ರೂ. ಇತ್ತು. ಆದರೆ 2023ರಲ್ಲಿ ಅದು 1,413 ಕೋಟಿ ರೂ. ಆಗಿದೆ ಎಂದು ಆರೋಪಿಸಿದ್ದರು.
ಇಂದು ದೆಹಲಿಯಲ್ಲಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ನನಗೆ ವ್ಯವಹಾರ, ವ್ಯಾಪರ ಮಾಡುವ ಶಕ್ತಿ ಇದೆ. ಅದಕ್ಕೆ ಅಧಿಕೃತವಾಗಿ ಆಸ್ತಿ ಘೋಷಿಸಿದ್ದೇನೆ, ಇವರ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಆರೋಪಗಳಿಗೆ ಉತ್ತರ ಕೊಡುವುದಿಲ್ಲ. ಅವರಿಗೆ ಸಂಸ್ಕಾರ ಸಂಸ್ಕೃತಿ ಯಾವುದೂ ಇಲ್ಲ. ಬ್ಲ್ಯಾಕ್ಮೇಲ್ ಮಾಡಿದರೆ ನಾನು ಹೆದರುತ್ತೇನೆ ಅಂದುಕೊಂಡಿದ್ದಾರೆ. ಹೆದರುವ ಜಾಯಮಾನ ನಂದಲ್ಲ. IT, ED ಎಲ್ಲಾ ಆಗೋಯ್ತು. ಇನ್ನೇನು ಮಾಡುತ್ತಾರೋ ಮಾಡ್ಲಿ. ನಾನು ಎಲ್ಲದಕ್ಕೂ ಸಿದ್ಧನಿರುವೆ ಎಂದಿದ್ದಾರೆ.
ಇಷ್ಟು ದಿನ ಯಾಕೆ ಸುಮ್ಮನೆ ಇದ್ದರು. ಅವರ ತಂದೆಯೇ ಈ ಯೋಜನೆಗೆ ಸಹಿ ಹಾಕಿದ್ದಾರೆ, ಅವರು ಮುಖ್ಯಮಂತ್ರಿಯಾಗಿದ್ದರು. ಈ ನಡುವೆ ಬೇಕಾದಷ್ಟು ಬೇನಾಮಿ ಹಗರಣ ನಡೆದಿದೆ. ಪಾಪಾ ಬಹಳ ಡೆಸ್ಪರೇಟ್ ಆಗಿದ್ದಾರೆ. ಬಿಜೆಪಿಯಿಂದ ಅವರಿಗೆ ಒತ್ತಡ ಇದೆ ಎಂದರು.
ಅವರಿಗೆ ನಮ್ಮ ಸರ್ಕಾರದ ಜನಪ್ರಿಯತೆ ತಡೆಯಲು ಸಾಧ್ಯವಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ, ಪಾರ್ಟ್ 2ನಲ್ಲಿ ಏನಿದೆ ಅಂತ ಗೊತ್ತಿದೆ. ಸ್ವಾಮೀಜಿ ಫೋನ್ ಟ್ರ್ಯಾಪ್ ಮಾಡಿಸಿದವರು, ಯಾರನ್ನು ಬಿಟ್ಟಿದ್ದಾರೆ ಅವರು? ನನ್ನನ್ನು ಬಿಡ್ತಾರಾ? ಕುಮಾರಸ್ವಾಮಿ ಅವರ ತಂದೆಯನ್ನೇ ಬಿಡಲ್ಲ, ನನ್ನಿಂದ ನಮ್ಮಪ್ಪ ಅಂತಾರೇ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಅವರು ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಸಾಕಷ್ಟು ದಾಖಲೆ ನೀಡಿದ್ದಾರೆ. ಇನ್ನಷ್ಟು ದಾಖಲೆ ಕೊಡಲಿ, ಸುಳ್ಳೇ ಅವರ ಮನೆಯ ದೇವರು. ಎಷ್ಟೇ ಆದ್ರೂ ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ ಎಲ್ಲ ಇದ್ದಾರೆ. ಕುಮಾರಸ್ವಾಮಿ ಹೇಳಿದ್ದು ಎಲ್ಲವೂ ಸುಳ್ಳಿನ ಕಂತೆ. ನೈಸ್ ಜೊತೆ ವ್ಯವಹಾರ ಕಿತ್ತೋಯ್ತು ಎಂದು ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಅಣ್ಣ ತಮ್ಮನ ಆಸ್ತಿ ಎಷ್ಟಿದೆ,ಎಲ್ಲಿದೆ ಎಂದುಗೊತ್ತಿಲ್ವಾ? ವಿಧಾನಸೌಧದ ಮುಂದೆ ಅಲ್ಲ, ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಎಂದು ಪ್ರತಿ ಸವಾಲು ಹಾಕಿದರು.