ಶಿಕ್ಷಣದ ವ್ಯಾಪಾರೀಕರಣಕ್ಕೆ ತಡೆ, ಕನ್ನಡ ಭಾಷಾ ಮಾಧ್ಯಮಕ್ಕೆ ಪ್ರಾಧಾನ್ಯತೆ

ಶಿಕ್ಷಣದ ವ್ಯಾಪಾರಿಕರಣಕ್ಕೆ ತಡೆ ಹಾಕಬೇಕು ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ..
81ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಷಣ ಮಾಡಿದರು (ಸಂಗ್ರಹ ಚಿತ್ರ)
81ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಷಣ ಮಾಡಿದರು (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: ಶಿಕ್ಷಣದ ವ್ಯಾಪಾರಿಕರಣಕ್ಕೆ ತಡೆ ಹಾಕಬೇಕು ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಆಯೋಜಿಸಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಮ್ಮೇಳನವನ್ನು ಉದ್ಘಾಟಿಸಲು ನನಗೆ ಅತ್ಯಂತ ಸಂತಸವಾಗುತ್ತಿದೆ. ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಅಭಿಮಾನವನ್ನು ಉಂಟುಮಾಡಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಹಾಗೂ ಸರಸ್ವತಿ ಸಮ್ಮಾನದ ಗರಿ ಮೂಡಿಸಿಕೊಂಡ ಕನ್ನಡ ನಾಡು ಹೆಮ್ಮೆಯ ಬೀಡು. ಈ ಸಂದರ್ಭದಲ್ಲಿ ಸಂತಸದಿಂದ ಪಾಲ್ಗೊಳ್ಳುವ ಮೂಲಕ ನಾಡು-ನುಡಿಯ ಬಗ್ಗೆ ಅಭಿಮಾನ ತೋರಿಸುತ್ತಿರುವ ತಮ್ಮೆಲ್ಲರಿಗೂ ನನ್ನ ಶುಭ ಕಾಮನೆಗಳನ್ನು ಸಲ್ಲಿಸುತ್ತೇನೆ. ಇದೊಂದು ಚರಿತ್ರಾರ್ಹ ಸಮ್ಮೇಳನವಾಗಲಿ ಎಂದು ಮನದಾಳದಿಂದ ಹಾರೈಸುತ್ತೇನೆ ಎಂದು ಹೇಳಿದರು.

ಕನ್ನಡ ಸಾರಸ್ವತ ಲೋಕದ ಪ್ರತಿಭಾ ಸಂಪನ್ನರು, ಸರಳ-ಸಜ್ಜನಿಕೆಗೆ ಹೆಸರಾದ, ಕ್ರಾಂತಿಗೀತೆಗಳ ಮೂಲಕ ಮನೆಮಾತಾದ ಡಾ ಸಿದ್ಧಲಿಂಗಯ್ಯ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿರುವುದು ಕನ್ನಡದ ಗೌರವ ಹೆಚ್ಚಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯಕ್ಕೆ ಶಕ್ತಿ ತುಂಬಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅಭಿನಂದನಾರ್ಹರು. ಡಾ ಸಿದ್ಧಲಿಂಗಯ್ಯ ಅವರ ಸಮಾಜಮುಖಿ ಭಾಷಣ ಕೇಳಲು ನಾನು ಉತ್ಸುಕನಾಗಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತು ನೂರರ ಹೊಸ್ತಿಲಿನಲ್ಲಿದೆ. ಇದೊಂದು ಐತಿಹಾಸಿಕ ಹಾಗೂ ಮಹತ್ವದ ಸಂದರ್ಭ. ಈ ಸಂದರ್ಭದಲ್ಲಿ ನೆನೆಯಲೇಬೇಕಾದ ವ್ಯಕ್ತಿಯೊಬ್ಬರಿದ್ದಾರೆ. ಅವರೇ ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್. ಅರಮನೆ ಗುರುಮನೆಗಳಲ್ಲಿದ್ದ ಸಾಹಿತ್ಯವನ್ನು ಜನಸಾಮಾನ್ಯರತ್ತ ತರುವ ಮಹೋದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

ಪ್ರಭುವಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಆಡಳಿತವನ್ನು ನಡೆಸಿದ ಜನಪರ ಕಾಳಜಿಯ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಆಗಿರುವ ಜನಪರ ಕಾಳಜಿಯ ಪ್ರಗತಿ ರಾಜ್ಯದ ಬದುಕನ್ನೇ ಬದಲಾಯಿಸಿದ ಬೆಳವಣಿಗೆ ಎಂದರೆ ಅತಿಶಯೋಕ್ತಿಯಲ್ಲ. ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರ ಮೂಲಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದರು. ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸುವುದರ ಮುಖೇನ ಆಡಳಿತದಲ್ಲಿ ಪ್ರಜಾಪ್ರಭುತ್ವದ ಆಶಯವನ್ನು ಅನುಷ್ಠಾನಗೊಳಿಸಿದರು. ಹಲವು ಕೈಗಾರಿಕೆಗಳನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು ಎಂದು ಸಿದ್ದರಾಮಯ್ಯ ಹೇಳಿದರು.

ಪರಿಷತ್ತಿನ ಸ್ವಾಯತ್ತತೆಗೆ ಕಂಟಕ ಇಲ್ಲ
ಕರ್ನಾಟಕದಲ್ಲಿ ಯಾವುದೇ ಆಡಳಿತ ಬಂದರೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಎಂದೂ ಕಂಟಕ ಬಂದಿಲ್ಲ. ಮುಂದೆಯೂ ಬರುವುದಿಲ್ಲ ಎಂಬ ವಿಶ್ವಾಸ ನನ್ನಲ್ಲಿದೆ. ಅದು ಇಡೀ ಕನ್ನಡಿಗರ ಕನ್ನಡ ಬದುಕಿನ ಸಾಕ್ಷಿಪ್ರಜ್ಞೆಯ ಪ್ರತೀಕವೆಂಬುದನ್ನು ಪ್ರತಿಯೊಬ್ಬ ಕನ್ನಡಿಗನೂ ವಿನಯದಿಂದ ಗೌರವಿಸಬೇಕು. ಅದು ಹಾಗೆಯೇ ಪ್ರಜಾಸತ್ತಾತ್ಮಕ ದೃಷ್ಟಿಯಲ್ಲಿ ನಡೆದುಕೊಂಡು ಹೋಗಲು ಸಹಕರಿಸಬೇಕು.

ನಮ್ಮ ಹಿಂದಿನ ಸರ್ಕಾರಗಳು ಈ ಕಾರ್ಯವನ್ನು ಅಲ್ಪ-ಸ್ವಲ್ಪ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಸರಿದೂಗಿಸಿಕೊಂಡು ಬಂದಿದ್ದಾರೆ. ಅನುದಾನ ಕೊಡುವುದರಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಆಡಳಿತದೊಳಗೆ ಮಾತ್ರ ಎಂದೂ ಮೂಗು ತೂರಿಸಿಲ್ಲ ಎಂಬುದು ಮುಖ್ಯ ವಿಚಾರ. ನಮ್ಮ ಸರ್ಕಾರವೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಪರಂಪರೆಯನ್ನು ಗೌರವಿಸಿ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ನೀಡಿ ಸಹಕರಿಸುತ್ತಿದ್ದೇವೆ. ಸಾಂಸ್ಕೃತಿಕ ಲೋಕ ಆರೋಗ್ಯಕರವಾಗಿದ್ದರೆ ಪ್ರಜಾಸತ್ತೆ ಉಳಿಯುತ್ತದೆ ಬೆಳೆಯುತ್ತದೆ ಎಂಬುದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮತ್ತೊಂದು ವಿಶೇಷವೆಂದರೆ, ನಮ್ಮ ಸರ್ಕಾರದ ಭಾಗ್ಯವೆಂಬಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ತುಂಬುತ್ತಿದೆ. ಈ ನೂರು ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲು ಬೇಕಾಗುವ ಎಲ್ಲಾ ಧನಸಹಾಯವನ್ನೂ ನಮ್ಮ ಸರ್ಕಾರ ಪರಿಷತ್ತಿಗೆ ನೀಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸರ್ಕಾರ ತನ್ನ ಸಾಂಸ್ಕೃತಿಕ ಕರ್ತವ್ಯ ನೆರವೇರಿಸುವಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ಸಾಹಿತ್ಯ-ಸಾಂಸ್ಕೃತಿಕ ಸಂವರ್ಧನೆಗೆ ಪೂರಕವಾಗುವಂತಹ ಕಾರ್ಯಕ್ರಮಗಳಿಗೆ 250 ಕೋಟಿ ರೂ. ಗಳಿಗೂ ಹೆಚ್ಚು ವಾರ್ಷಿಕ ಆಯವ್ಯಯ ಅನುದಾನವನ್ನು ನಮ್ಮ ಸರ್ಕಾರ ನೀಡಿದೆ. ಇದು ಈ ದೇಶದಲ್ಲಿಯೇ ಇತರೆ ರಾಜ್ಯಗಳು ಕೊಡುವ ಅನುದಾನಕ್ಕಿಂತ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ಬೆಂಬಲವನ್ನು ನಮ್ಮ ಸರ್ಕಾರ ನೀಡಿದೆ. ಮುಂದೆಯೂ ಯಾವುದೇ ಲೋಪಕ್ಕೆ ಎಡೆಗೊಡದಂತೆ ನಡೆದುಕೊಳ್ಳುವ ಭರವಸೆ ನೀಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಿದ್ದು, ಸರ್ಕಾರ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತೇನೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ತಲಾ ಐದು ಲಕ್ಷದ ರೂಪಾಯಿಗಳ ಅನುದಾನವನ್ನು ಸರ್ಕಾರ ನೀಡುತ್ತಿದೆ. ಅಷ್ಟೇ ಅಲ್ಲದೆ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೂ ಅನುದಾನ ನೀಡಲಾಗುತ್ತಿದೆ. ಅದನ್ನೂ ಸರ್ಕಾರ ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುತ್ತಿದ್ದೇನೆ.

ಕನ್ನಡ ಭಾಷಾ ಮಾಧ್ಯಮಕ ಕಡ್ಡಾಯಕ್ಕೆ ಆಧ್ಯತೆ

ಇನ್ನು ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಾನು ಪ್ರಸ್ತಾಪಿಸಲೇಬೇಕಾದ ಕೆಲವು ಮುಖ್ಯ ಸಂಗತಿಗಳಿವೆ. ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯೊಳಗೆ ವಿದ್ಯಮಾನಗಳು ಬೆಳೆಯುತ್ತಿವೆ. ಇತ್ತೀಚೆಗೆ ಭಾರತ ಸರ್ವೋಚ್ಛ ನ್ಯಾಯಾಲಯವೂ ಕೂಡಾ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯ ಭಾಷೆಗಳಿಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮಾನ್ಯ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯಭಾಷೆ ಸಾರ್ವಭೌಮ ಭಾಷೆಯಾಗಬೇಕು. ಬೇರಾವುದೇ ಭಾಷೆ ಆ ನೆಲದ ಬದುಕಿನ ಮೇಲೆ ಅಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ, ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ, ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ.

ಆದರೆ ಇಂದು ಇಂಗ್ಲೀಷ್ ಭಾಷೆಯ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಹಲ್ಲೆ, ರಾಜ್ಯ ಭಾಷೆಗಳ ಅಳಿವಿಗೆ ಬೀಸಿದ ಪ್ರಹಾರವಾಗಿದೆ. ಕರ್ನಾಟಕದೊಳಗೆ ಈ ಎಲ್ಲಾ ಭಾಷೆಗಳನ್ನಾಡುವ ಭಾಷಿಕ ಸಮುದಾಯಗಳಿವೆ. ಇಂಗ್ಲೀಷ್ ಈ ನೆಲದ ಮಾತೃಭಾಷೆಯಲ್ಲ. ಅಕಸ್ಮಾತ್ ಮಾತೃ ಭಾಷೆಯನ್ನಾಗಿ ಇರುವವರು ಯಾರಾದರೂ ಇದ್ದರೆ, ಅವರು ಆಂಗ್ಲೊಇಂಡಿಯನ್ನರು. ಶೇಕಡಾ 0.5 ರಷ್ಟಕ್ಕೂ ಕಡಿಮೆ ಇರುವವರು. ಆದರೆ ಇಂಗ್ಲೀಷನ್ನೇ ಮಾತೃ ಭಾಷೆ ಎಂದು ಘೋಷಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಸಂಖ್ಯಾ ಪ್ರಮಾಣವನ್ನು ನೋಡಿದರೆ ಈ ಮಹಾಸುಳ್ಳನ್ನೇ ಸತ್ಯವೆಂದು ಒಪ್ಪಿ ಅಂಗೀಕರಿಸುವುದನ್ನು ನೋಡಿದಾಗ ನ್ಯಾಯ ಎಲ್ಲಿದೆ ? ಎಂದು ಯೋಚಿಸಬೇಕಾಗಿದೆ.

ಶಿಕ್ಷಣದ ವ್ಯಾಪಾರೀಕರಣ ಸಲ್ಲ

ಶಿಕ್ಷಣದ ವ್ಯಾಪಾರೀಕರಣದ ದಂಧೆಯಿಂದ ಪ್ರಾದೇಶಿಕ ಭಾಷೆಗಳನ್ನು ರಕ್ಷಿಸಬೇಕಾಗಿದೆ. ಅದಕ್ಕಾಗಿ ಶಾಸನಬದ್ಧವಾಗಿ ಹೊಸ ಕಾನೂನನ್ನು ತರಬೇಕಾಗಿದೆ. ಅಗತ್ಯವಾದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗಬಹುದು. ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಈ ಬಗ್ಗೆ ದೇಶದ ಎಲ್ಲಾ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ.

ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ಕ್ಕೆ ತಿದ್ದುಪಡಿ ತರುವ ದಿಟ್ಟ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಇಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಕ್ಕಳ ಮಾತೃ ಭಾಷೆಯಲ್ಲಿಯೇ ಇರಬೇಕು ಎಂಬ ಒಕ್ಕಣಿಕೆ ಇತ್ತು. ಅದನ್ನು ಒಂದನೆ ತರಗತಿಯಿಂದ ಐದನೇ ತರಗತಿವರೆಗಿನ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರತಕ್ಕದ್ದು ಎಂದು ತಿದ್ದುಪಡಿ ಮಾಡಲಾಗಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸಿರುವ ಆದೇಶವನ್ನು ರದ್ದುಮಾಡಿರುವ ತೀರ್ಪು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪರಿಹಾರತ್ಮಕ ಅರ್ಜಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಗಳನ್ನು ಎದುರಿಸುವುದಕ್ಕಾಗಿ ಈ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ತಮಿಳುನಾಡು ಸರ್ಕಾರ ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವ ಮಾದರಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಪ್ರತಿಯೊಂದು ಸಾಹಿತ್ಯ ಸಮ್ಮೇಳನಕ್ಕೂ ನಾಡು, ನುಡಿ ಕುರಿತಾದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ಸೂಕ್ತವಾಗಿದೆ.

ಸಮ್ಮೇಳದಲ್ಲಿ ಕೈಗೊಂಡ ನಿರ್ಣಯ ಜಾರಿಗೆ ಕ್ರಮ

ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳನ್ನೆಲ್ಲಾ ಅನುಷ್ಠಾನಕ್ಕೆ ತರಲು ನಿರ್ಣಯವನ್ನು ಕೈಗೊಳ್ಳುವುದಾಗಿ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಸಾಧ್ಯವಾದಷ್ಟು ಈ ನಿರ್ಣಯಗಳನ್ನು ಪುನರ್ ಪರಿಶೀಲಿಸಿ ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಜರುಗಿಸುವುದು. ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿ ವಿಧಾನಗಳನ್ನು ಕಾರ್ಯಗತಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲು ಇಚ್ಛಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com