ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯ ಭಾಷಣದ ಪೂರ್ಣಪಾಠ

ಕನ್ನಡದ ಆದಿ ಕವಿ ಪಂಪ ಹೇಳಿರುವ ’ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ವಾಕ್ಯವನ್ನು ಈ ಸಮ್ಮೇಳನದ ಧ್ಯೇಯವಾಕ್ಯವನ್ನಾಗಿ...
ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸಿದ್ಧಲಿಂಗಯ್ಯ ಭಾಷಣ
ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸಿದ್ಧಲಿಂಗಯ್ಯ ಭಾಷಣ

ಪರಮ ಜಿನೇಂದ್ರ ವಾಣಿಯೆ ಸರಸ್ವತಿ ಬೇರದು ಪೆಣ್ಣರೂಪಮಂ
ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ
ದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನದ
ಕರೆದಪೆನಾಸರಸ್ವತಿಯೆ ಮಾಳ್ಕೆಮಗೀಗಿಲ್ಲಿಯೆ ವಾಗ್ವಿಳಾಸಮಂ


ಕನ್ನಡದ ಆದಿಕವಿ ಪಂಪ ತನ್ನ ’ಆದಿಪುರಾಣ’ ಕಾವ್ಯದಲ್ಲಿ ”ಪರಮ ಜಿನೇಂದ್ರ ವಾಣಿಯೆ ಸರಸ್ವತಿ ಬೇರದು ಪೆಣ್ಣರೂಪಮಂ ಧರಿಯಿಸಿ ನಿಂದುದಲ್ತು…” ಎಂದು ವಾಗ್ದೇವಿಯನ್ನು ಸ್ತುತಿಸಿ ಕಾವ್ಯಾರಂಭ ಮಾಡುತ್ತಾನೆ. ಇಂತಹ ಕಾವ್ಯವನ್ನು ಭಾವಿಸಿ ಓದುವ, ಕೇಳುವ, ಪೂಜಿಸುವ ಭವ್ಯಕೋಟಿಗೆ ನಿರಂತರ ಸೌಖ್ಯವನ್ನು ನೀಡು ಎಂದು ವಾಗ್ದೇವಿಯನ್ನು ಪ್ರಾರ್ಥಿಸುತ್ತಾನೆ. ನಾನು ಈ ವಾಗ್ದೇವಿಯನ್ನು ಮತ್ತು ಕನ್ನಡದ ಅಧಿದೇವತೆ ಶ್ರೀ ಭುವನೇಶ್ವರಿ ತಾಯಿಗೆ ನಮನಗಳನ್ನು ಸಲ್ಲಿಸಿ ನನ್ನ ಭಾಷಣವನ್ನು ಆರಂಭಿಸುತ್ತಿದ್ದೇನೆ ;

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ, ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮತ್ತು ಸಮಸ್ತ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಪರಿಷತ್ತು ನೂರು ವರ್ಷಗಳ ಕಾಲ ನಿರಂತರವಾಗಿ ಕನ್ನಡದ ಸೇವೆ ಸಲ್ಲಿಸುತ್ತಾ ಬಂದಿದೆ. ಪರಿಷತ್ತಿನ ಸ್ಥಾಪನೆಗೆ ಕಾರಣರಾದ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ನೂರು ವರ್ಷಗಳ ಕಾಲ ಕನ್ನಡದ ಕೈಂಕರ್ಯವನ್ನು ಮಾಡಿದ ಎಲ್ಲ ಹಿರಿಯ ಚೇತನಗಳಿಗೆ ಈ ಮೂಲಕ ಅನಂತ ನಮನಗಳನ್ನು ಸಲ್ಲಿಸುತ್ತೇನೆ. 81ನೇ ಸಾಹಿತ್ಯ ಸಮ್ಮೇಳನಕ್ಕೆ ಹಾಸನ ಜಿಲ್ಲೆಯನ್ನು ಅದರಲ್ಲೂ ಜೈನಕಾಶಿ ಎಂದೇ ಹೆಸರಾದ ಪವಿತ್ರ ಶ್ರವಣಬೆಳಗೊಳವನ್ನು ಆಯ್ಕೆ ಮಾಡಿರುವುದು ಸಮಂಜಸವಾಗಿದೆ. ತ್ಯಾಗ ಮತ್ತು ಅಹಿಂಸೆಯ ಪ್ರತಿರೂಪವಾದ ಬಾಹುಬಲಿಸ್ವಾಮಿಯ ಸನ್ನಿಧಿಯಲ್ಲಿ ಈ ಬಾರಿಯ ಸಮ್ಮೇಳನ ನಡೆಯುತ್ತಿರುವುದು ವಿಶೇಷ ಸಂಗತಿಯಾಗಿದೆ. ಕನ್ನಡಕ್ಕೆ ಸಂಕಷ್ಟ ಒದಗಿರುವ ಈ ಕಾಲದಲ್ಲಿ ಬಾಹುಬಲಿಸ್ವಾಮಿಯ ಸ್ಫೂರ್ತಿಯಿಂದ ಕನ್ನಡದ ರಕ್ಷಣೆಗಾಗಿ ಕನ್ನಡ ಜನತೆ ಅಹಿಂಸಾತ್ಮಕವಾದ ಬೃಹತ್ ಆಂದೋಲನಕ್ಕೆ ಎಲ್ಲ ಬಗೆಯ ತ್ಯಾಗಕ್ಕೆ ಸಿದ್ಧರಾಗಲೆಂದು ಆಶಿಸುತ್ತೇನೆ.

ಹಾಸನ ಜಿಲ್ಲೆ ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯಗಳಿಂದ ಕೂಡಿದೆ. ಕನ್ನಡದ ಮೊದಲ ಶಾಸನ ಸಿಕ್ಕಿದ್ದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆಯನ್ನು ನೀಡುವ ಸಂದರ್ಭದಲ್ಲಿ ಈ ಶಾಸನವೇ ಪ್ರಥಮ ಆಕರವಾಯಿತೆಂದು ಹೇಳಲು ಸಂತೋಷವಾಗುತ್ತದೆ. ಮಹಾಕವಿಗಳಾದ ಜನ್ನ ಮತ್ತು ರಾಘವಾಂಕ ಈ ಜಿಲ್ಲೆಯವರು. ರಾಷ್ಟ್ರಕ್ಕೆ ಮೊಟ್ಟಮೊದಲ ಕನ್ನಡ ಪ್ರಧಾನಿಯನ್ನು ಕೊಟ್ಟ ಜಿಲ್ಲೆ ಹಾಸನ ಎಂದು ಹೇಳಲು ಹೆಮ್ಮೆಯಾಗುತ್ತದೆ. ಕನ್ನಡ ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾಯರ ತವರು ಹಾಸನ ಜಿಲ್ಲೆಯ ಅರಕಲಗೂಡು. ಕನ್ನಡದ ಹೆಮ್ಮೆಯ ಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕನ್ನಡದ ಪ್ರಸಿದ್ಧ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರು, ಖ್ಯಾತ ವಿಮರ್ಶಕರಾದ ಕಿ.ರಂ. ನಾಗರಾಜ, ಜಾನಪದ ಸಂಗ್ರಹಕಾರರಾದ ಶ್ರೀ ಮತಿಘಟ್ಟ ಕೃಷ್ಣಮೂರ್ತಿ, ಶ್ರೀ ಎಸ್.ಕೆ. ಕರೀಂಖಾನ್, ಇಂಗ್ಲೀಷಿನ ಪ್ರಸಿದ್ಧ ಕಾದಂಬರಿಕಾರರಾದ ರಾಜಾರಾವ್ ಹಾಸನ ಜಿಲ್ಲೆಯವರು. ಕನ್ನಡದ ಹಿರಿಯ ದಲಿತ ಲೇಖಕ ಶ್ರೀ ಡಿ.ಗೋವಿಂದದಾಸ್ ಅವರು ಶ್ರವಣಬೆಳಗೊಳದ ಸಮೀಪದ ದಮ್ಮನಿಂಗಳದವರು. ರೈತ ಮತ್ತು ದಲಿತ ಚಳುವಳಿಗೆ ಹಾಸನ ಜಿಲ್ಲೆ ನೀಡಿದ ಕೊಡುಗೆ ಅನನ್ಯವಾದದ್ದು. ದಲಿತ ಹೋರಾಟಗಾರ ಚಂದ್ರಪ್ರಸಾದ್ ತ್ಯಾಗಿ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.

ಕನ್ನಡ ನಾಡಿಗೆ ಹೊಯ್ಸಳರ ಕೊಡುಗೆ ಅಮೋಘ. ಕನ್ನಡ ರಾಜಮನೆತನವಾದ ಹೊಯ್ಸಳರ ವಿಷ್ಣುವರ್ಧನ, ನಾಟ್ಯರಾಣಿ ಶಾಂತಲೆ ಮತ್ತು ಶ್ರವಣಬೆಳಗೊಳದ ಬಾಹುಬಲಿಸ್ವಾಮಿಯನ್ನು ನಿಮರ್‌ಿಸಿದ ಚಾವುಂಡರಾಯನ ಶ್ರದ್ಧೆ ಈ ಎಲ್ಲಾ ಸಂಗತಿಗಳನ್ನು ಕನ್ನಡಿಗರು ಮರೆಯುವಂತಿಲ್ಲ. ಕನ್ನಡ ಸಾಹಿತ್ಯದ ಮೂಲಪುರುಷರು ಜೈನ ಕವಿಗಳೆಂಬುದನ್ನು ಅಭಿಮಾನದಿಂದ ಸ್ಮರಿಸುತ್ತೇನೆ. ಹಳೇಬೀಡು, ಬೇಲೂರಿನ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳು ಅದ್ಭುತ ಕಲಾನೈಪುಣ್ಯತೆಗೆ ವಿಶ್ವವಿಖ್ಯಾತವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗೆ ಹಾಸನ ಕಲೆಗೆ, ಸಾಹಿತ್ಯಕ್ಕೆ, ವಾಸ್ತುಶಿಲ್ಪಕ್ಕೆ ಶ್ರೀಮಂತವಾದ ಜಿಲ್ಲೆಯಾಗಿದೆ.

ಮನುಷ್ಯ ಜಾತಿ ತಾನೊಂದೆ ವಲಂ

ಕನ್ನಡದ ಆದಿ ಕವಿ ಪಂಪ ಹೇಳಿರುವ ’ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ವಾಕ್ಯವನ್ನು ಈ ಸಮ್ಮೇಳನದ ಧ್ಯೇಯವಾಕ್ಯವನ್ನಾಗಿ ತೆಗೆದುಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಕರ್ನಾಟಕವನ್ನು ಕುರಿತು ಕವಿರಾಜಮಾರ್ಗಕಾರ ’ಸರ್ವಧರ್ಮಧೇನುನಿವಕ್ಕೆ ಆಡೊಂಬಲಂ’ ಎಂದು ಹೇಳಿದ್ದಾನೆ. ಮತ್ತೊಂದು ಕಡೆ ಆತ ’ಕಸವರಂ ಎಂಬುದು ನೆರೆಸೈರಿಸಲ್ ಆರ್ಪೊಡೆ ಪರವಿಚಾರಮಂ ಪರಧರ್ಮಮಂ’ ಎಂದು ಹೇಳಿದ್ದಾನೆ. ಕರ್ನಾಟಕವು ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರಾಗಿದೆ. ಕನ್ನಡ ಭಾಷೆ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಸಹನೆ, ಕನ್ನಡ ಸಂಸ್ಕೃತಿಯ ಮೂಲಗುಣ. ಎಲ್ಲಾ ಜಾತಿ, ಧರ್ಮಗಳು, ಭಾಷೆ, ಉಪಭಾಷೆಗಳು, ಸಂಸ್ಕೃತಿ, ಉಪಸಂಸ್ಕೃತಿಗಳು ಶತಶತಮಾನಗಳ ಕಾಲ ಸಹಬಾಳ್ವೆ ಮಾಡಿದ್ದು ಈ ನಾಡಿನ ವಿಶೇಷ. ಹಂಪೆಯ ಶಾಸನವೊಂದರಲ್ಲಿ ಕವಿಯೊಬ್ಬನು ಕನ್ನಡಿಗರು ಸಾರ್ವಜನಿಕ ಬದುಕಿನಲ್ಲಿ ರೂಢಿಸಿಕೊಂಡಿದ್ದ ಪರೋಪಕಾರ ಬುದ್ಧಿಯನ್ನು ಬಹಳ ಚೆನ್ನಾಗಿ ನಿರೂಪಿಸಿದ್ದಾನೆ. ತಾಯೊಬ್ಬಳು ತನ್ನ ಪುಟ್ಟ ಕಂದನಿಗೆ ಹಾಲುಣಿಸುವ ಸಂದರ್ಭದಲ್ಲಿ ಅದರ ಕಿವಿಯಲ್ಲಿ ಮುಂದೆ ಅವನು ದೊಡ್ಡವನಾದ ಮೇಲೆ ಮಾಡಬೇಕಾದ ಕರ್ತವ್ಯಗಳನ್ನು ಹೀಗೆ ಹೇಳುತ್ತಾಳೆ; ’ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ನಿರ್ಮಿಸು, ಅಜ್ಜರೆಯೊಳ್ ಸಿಲ್ಕಿದ ಅನಾಥರಂ ಬಿಡಿಸು, ಮಿತ್ರರ್ಗೆ ಇಂಬುಕಯ್, ನಂಬಿದರ್ಗೆ ಎರವಟ್ಟಾಗಿರು, ಶಿಷ್ಟರಂಪೊರೆ’ಎಂಬ ಈ ಮಾತುಗಳು ಕನ್ನಡ ಸಂಸ್ಕೃತಿಯ ಪ್ರತೀಕವಾಗಿವೆ.

ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಕೀರ್ತಿ ಶಿವಶರಣರಿಗೆ ಸಲ್ಲುತ್ತದೆ. ಸಾಮಾನ್ಯರೂ ಸಾಮಾಜಿಕ ಚಳುವಳಿಯಲ್ಲಿ ಪಾಲ್ಗೊಂಡು ವಚನಸೃಷ್ಟಿಗೆ ತೊಡಗಿದ್ದು ಒಂದು ಮುಖ್ಯ ಸಂಗತಿಯಾಗಿದೆ. ದೈವವನ್ನು ಜನರ ಬಳಿಗೆ ಒಯ್ದ ಗೌರವ ಹರಿದಾಸರಿಗೆ ಸಲ್ಲುತ್ತದೆ. ಜನಬದುಕಲೆಂದು ನಮ್ಮ ಕವಿಗಳು ಕಾವ್ಯ ರಚನೆ ಮಾಡಿದರು. ಕನ್ನಡಾಭಿಮಾನದಲ್ಲಿ ನಮ್ಮ ಕವಿಗಳು ಹಿಂದೆ ಬಿದ್ದಿಲ್ಲ. ’ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ, ಸುಲಲಿತವಾಗಿರ್ಪ ಕನ್ನಡ’ಎಂದು ಮಹಲಿಂಗರಂಗನೆಂಬ ಕವಿ ಹೇಳಿದ್ದಾನೆ. ಹಾಗೆಯೇ ನಿಜಲಿಂಗ ಚಿಕ್ಕಯ್ಯನೆಂಬ ಶರಣ ’ನೋಡಿರೇ ಕನ್ನಡವ, ನುಡಿಸಿರೇ ಕನ್ನಡವ, ತಲೆಯೊಲೆಯುತ ಬಂದು ಕುಣಿವ ಕನ್ನಡವ’ ಎಂದು ಹೇಳಿ ಕನ್ನಡದ ಪ್ರೀತಿಯನ್ನು ಮೆರೆದಿದ್ದಾನೆ.

ಕನ್ನಡಿಗರ ಹಿರಿಮೆ

ಕ್ರಿ,ಶ. 630ರಲ್ಲಿ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿ ಉತ್ತರದ ಹರ್ಷವರ್ಧನನನ್ನು ಸೋಲಿಸಿ ನರ್ಮದಾ ನದಿಯ ಆಚೆ ದಂಡೆಗೆ ಓಡಿಸಿದ್ದನ್ನು ಚೀನೀ ಯಾತ್ರಿಕ ಹ್ಯೂಯನತ್ತ್ಸಾಂಗ್ ದಾಖಲಿಸಿದ್ದಾನೆ. ಚಾಲುಕ್ಯರ ದೊರೆ ಆರನೆ ವಿಕ್ರಮಾದಿತ್ಯ ನೇಪಾಳದ ಕಠ್ಮಂಡು ಪ್ರದೇಶವನ್ನು ಗೆದ್ದು ಅದರ ಆಡಳಿತವನ್ನು ಕರ್ನಾಟ ವಂಶದ ನನ್ನಿದೇವನಿಗೆ ವಹಿಸಿಕೊಟ್ಟು ಕನ್ನಡಿಗರು ಕಠ್ಮಂಡು ಸುತ್ತಮುತ್ತಲ ಪ್ರದೇಶವನ್ನು 250 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದು ಚರಿತ್ರೆಯಲ್ಲಿ ದಾಖಲೆಯಾಗಿದೆ. ಕರ್ನಾಟಕದ ಗಂಗರು ಕಳಿಂಗವನ್ನು ಆಳಿದರು. ಕರ್ನಾಟಸೇನರು ಬಂಗಾಳವನ್ನು ಆಳಿದರಲ್ಲದೆ ಕನ್ನಡಿಗರಾದ ರಾಷ್ಟ್ರಕೂಟರು ಅಜಂತ, ಎಲ್ಲೋರ, ಎಲಿಫೆಂಟಾದ ಗುಹಾಂತರ ದೇವಾಲಯಗಳನ್ನೂ ನಿರ್ಮಿಸಿದರು. ಗುಜರಾತಿನ ಚಾಲುಕ್ಯರು ಮೂಲತಃ ಕನ್ನಡಿಗರು. ತಾಮ್ರಪಟಗಳಿಗೆ ಅವರು ಕನ್ನಡದಲ್ಲಿ ರುಜು ಹಾಕುತ್ತಿದ್ದುದು ದಾಖಲೆಯಾಗಿದೆ. ಈಗಿನ ಮುಂಬೈ ಒಂದು ಕಾಲದಲ್ಲಿ ಅಚ್ಚ ಕನ್ನಡ ಪ್ರದೇಶವಾಗಿತ್ತು. 1670ರಲ್ಲಿ ಮುಂಬೈ ದ್ವೀಪಗಳನ್ನು ಪೋಚರ್‌ುಗೀಸ್ ದೊರೆಯು ಇಂಗ್ಲೆಂಡಿನ ರಾಜಕುಮಾರನಿಗೆ ಬಳುವಳಿಯಾಗಿ ನೀಡಿದಾಗ, ಇಂಗ್ಲೆಂಡಿನ ಮಹಾರಾಣಿಯು ಇಂಗ್ಲೀಷ್ ಭಾಷೆಯ ಕಾನೂನುಗಳನ್ನು ಪೋರ್ಚುಗೀಸ್ ಮತ್ತು ಕನ್ನಡ ಭಾಷೆಗೆ ಅನುವಾದ ಮಾಡಬೇಕೆಂದು ನಿರೂಪ ಹೊರಡಿಸಿದಳು. 1818ರಲ್ಲಿ ಗವರ್ನರ್ ಎಲ್ಫಿನ್ಸ್ಟನ್ ಮುಂಬೈಗೆ ಬಂದಾಗ ಅವನಿಗೆ ಸಾರ್ವಜನಿಕರು ಅರ್ಪಿಸಿದ ಬಿನ್ನವತ್ತಳೆ ಕನ್ನಡದಲ್ಲಿತ್ತು ಎಂಬುದನ್ನು ಡಾ.ಎಂ.ಚಿದಾನಂದಮೂರ್ತಿಗಳು ಬಾಂಬೆ ಗೆಜೆಟಿಯರ್ಗಳ ಆಧಾರದಿಂದ ತಮ್ಮ ಕೃತಿಯಲ್ಲಿ ನಮೂದಿಸಿದ್ದಾರೆ.

ಜನವಾಣಿ ಬೇರು, ಕವಿವಾಣಿ ಹೂವು

ಆಧುನಿಕ ಕನ್ನಡ ಸಾಹಿತ್ಯ ತನ್ನ ವೈವಿಧ್ಯತೆ ಮತ್ತು ವಿಶಿಷ್ಟತೆಯಿಂದ ಶ್ರೀಮಂತವಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಸಾಹಿತ್ಯ ಒಂಬತ್ತರ ನಿರೀಕ್ಷೆಯಲ್ಲಿದೆ ಎಂದರೆ ತಪ್ಪಾಗಲಾರದು. ಕರ್ನಾಟಕವನ್ನು ಮಹಾಕವಿ ಕುವೆಂಪು, ’ಸರ್ವಜನಾಂಗದ ಶಾಂತಿಯ ತೋಟ’ ಎಂದಿದ್ದಾರೆ. ವರಕವಿ ಬೇಂದ್ರೆ, ’ಒಂದೇ ಒಂದೇ ಕರ್ನಾಟಕ ಒಂದೇ, ಜಗದೇಳಿಗೆಯಾಗುವುದು ಕರ್ನಾಟಕದಿಂದೆ’ ಎಂದು ಹೇಳಿದ್ದಾರೆ. ಇತ್ತೀಚೆಗೆ ಬರೆಯುತ್ತಿರುವ ಕನ್ನಡ ಬರಹಗಾರರು ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಇಲ್ಲಿಯವರೆಗು ಕನ್ನಡಕ್ಕೆ ಅಪರಿಚಿತವಾಗಿದ್ದ ಲೋಕವನ್ನು ಈ ಲೇಖಕರು ಅನಾವರಣಗೊಳಿಸಿದ್ದಾರೆ. ಹಲಸಂಗಿ ಸಹೋದರರು ಸಂಪಾದಿಸಿದ ’ಗರತಿಯ ಹಾಡಿ’ಗೆ ಮುನ್ನುಡಿ ಬರೆಯುತ್ತಾ ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರು ’ಜನವಾಣಿ ಬೇರು, ಕವಿವಾಣಿ ಹೂವು’ ಎಂದು ಹೇಳಿದ್ದಾರೆ. ಕನ್ನಡದ ಜಾನಪದ ಸಂಪತ್ತು ಅಗಾಧವಾದದ್ದು. ಅನಕ್ಷರಸ್ಥ ಮಹಿಳೆಯರು ಹಾಡಿರುವ ತ್ರಿಪದಿಯೊಂದು ನಮ್ಮ ಗ್ರಾಮೀಣರ ಬಡತನಕ್ಕೆ ಹಿಡಿದ ಕನ್ನಡಿಯಂತಿದೆ;

ಬಡವರು ಸತ್ತರೆ ಸುಡಲೀಕೆ ಸೌದಿಲ್ಲೊ
ಒಡಲ ಬೆಂಕೀಲಿ ಹೆಣಬೆಂದೊ ದೇವರೆ
ಬಡವರಿಗೆ ಸಾವ ಕೊಡಬ್ಯಾಡ


ಎನ್ನುವುದರ ಮೂಲಕ ನಮ್ಮ ತಾಯಂದಿರು, ಸಹೋದರಿಯರು ಜೀವನದಲ್ಲಿ ಅನುಭವಿಸಿದ ಬವಣೆ, ಸಂಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕುಮಾರವ್ಯಾಸ ಕವಿಯು ರಾಜಪ್ರಭುತ್ವದ ಕಾಲದಲ್ಲಿ ರಾಜನನ್ನು ಪ್ರತ್ಯಕ್ಷ ದೇವರು ಎಂದು ನಂಬಿದ್ದ ಜನಕ್ಕೆ ರಾಜನೇ ರಾಕ್ಷಸನಾದಾಗ, ಮಂತ್ರಿ ಮೊರೆವ ಹುಲಿಯಾದಾಗ, ಅವನ ಪರಿವಾರ ಕಿತ್ತು ತಿನ್ನುವ ಹದ್ದುಗಳಾದಾಗ ಜನ ಗುಳೇ ಹೋಗುವುದನ್ನು ಚಿತ್ರಿಸುತ್ತಾ, ಅಂತಹ ಬಡವರ ಬಿನ್ನಪವ ಕೇಳುವವರು ಯಾರು ಎಂದು ವಿಷಾದ ವ್ಯಕ್ತಪಡಿಸುತ್ತಾನೆ. ಕುಮಾರವ್ಯಾಸನ ಆ ಪದ್ಯವನ್ನು ಇಲ್ಲಿ ಉದಾಹರಿಸಬಹುದಾಗಿದೆ;

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನ್ನುತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ


ಕನ್ನಡ ಭಾಷೆ ಹಲವು ಆತಂಕಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಾವೆಲ್ಲ ಇಲ್ಲಿ ಸೇರಿದ್ದೇವೆ. ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಕುರಿತಂತೆ ಇತ್ತೀಚೆಗೆ ಬಂದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕನ್ನಡ ಭಾಷೆಯ ಬೆಳವಣಿಗೆಗೆ ಮಾರಕವಾಗಿದೆ. ಈ ಕುರಿತು ನಾವೆಲ್ಲ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.

ಕನ್ನಡದಲ್ಲಿ ಶಿಕ್ಷಣ ಮಾಧ್ಯಮ

ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು, ಶಿಕ್ಷಣದ ಎಲ್ಲ ಘಟ್ಟಗಳಲ್ಲೂ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು, ಅದು ರಾಜ್ಯದ ಆಡಳಿತ ಭಾಷೆಯೂ ಆಗಬೇಕು. ಈ ಸಂಕಲ್ಪಗಳು ಕೈಗೂಡಿದರೆ ಉಳಿದ ಎಲ್ಲಾ ಕೇಡುಗಳು ಕಣ್ಮರೆಯಾಗುತ್ತವೆಎಂದು ಮಹಾಕವಿ ಕುವೆಂಪು 1955ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್‌ಾಧ್ಯಕ್ಷ ಪೀಠದಿಂದ ಹೇಳಿದ ಮಾತುಗಳು ಇಲ್ಲಿ ಉಲ್ಲೇಖನೀಯ.

ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಆಯಾ ರಾಜ್ಯಗಳ ಭಾಷೆಗಳು ಆಡಳಿತ ಭಾಷೆಯಾಗುತ್ತವೆ, ಶಿಕ್ಷಣ ಮಾಧ್ಯಮವಾಗುತ್ತವೆ, ಜನರ ನಡುವಿನ ಸಂಪರ್ಕ ಭಾಷೆಯಾಗುತ್ತವೆ – ಎಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಅದು ನಿರೀಕ್ಷೆಯಾಗಿಯೇ ಉಳಿದಿದೆ. ರಾಜ್ಯ ಸರ್ಕಾರ ಮೊದಲಿಗೆ ರಚಿಸಿದ್ದ ಎ.ಜಿ. ರಾಮಚಂದ್ರರಾವ್, ಮಲ್ಲಾರಾಧ್ಯರ ಸಮಿತಿಯಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ವರದಿಗಳು ಕನ್ನಡ ಮಾಧ್ಯಮದ ಪರವಾಗಿಯೇ ಇವೆ. ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶಗಳೂ ಕನ್ನಡ ಪರವಾಗಿ0ೆು ಇವೆ. ಆದರೆ ಅನುಷ್ಠಾನ ಮಾತ್ರ ಸಾಧ್ಯವಾಗಿಲ್ಲ.

ರಾಜ್ಯ ಸರ್ಕಾರ 29-4-1994ರಂದು ಆದೇಶ ಹೊರಡಿಸಿ ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ 1ರಿಂದ 4ನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸಿತು. ಇದನ್ನು ಇಂಗ್ಲೀಷ್ ಶಾಲೆಗಳ ಒಕ್ಕೂಟ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾ ಬಂದಿತು. ಇದನ್ನು ರಾಜ್ಯದ ಉಚ್ಚನ್ಯಾಯಾಲಯವು ಪರಿಶೀಲಿಸಿ 8-7-2008ರಂದು ಭಾಷಾಮಾಧ್ಯಮದ ತೀರ್ಪನ್ನು ಇಂಗ್ಲೀಷ್ ಶಾಲೆಗಳ ಒಕ್ಕೂಟದ ಪರವಾಗಿ ನೀಡಿತು. ಈ ತೀರ್ಪನ್ನು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಸಂವಿಧಾನ ಪೀಠವು 6-5-2014 ರಂದು ಕರ್ನಾಟಕ ಉಚ್ಚನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿಯಿತು. ನಂತರ ಕರ್ನಾಟಕ ಸರ್ಕಾರವು ಅಕ್ಟೋಬರ್ 2014ರಲ್ಲಿ ಮತ್ತೊಮ್ಮೆ ಪರಿಶೀಲನೆಗಾಗಿ ಮೇಲ್ಮನವಿ ಸಲ್ಲಿಸಿದಾಗ ಇದರ ಪುನರ್ ಪರಿಶೀಲನೆ ಅಗತ್ಯವಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಕೈಬಿಟ್ಟಿತು. ರಾಜ್ಯ ಸರ್ಕಾರ ಸವರ್‌ೊಚ್ಚ ನ್ಯಾಯಾಲಯಕ್ಕೆ ಮೇಲಿನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು; ಕನ್ನಡದ ಭವಿಷ್ಯ

ಈಗ ಶಿಕ್ಷಣ ಮಾಧ್ಯಮದ ಗೊಂದಲ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶ ಭಾಷೆ ಉಳಿಸುವಲ್ಲಿ ಕರ್ನಾಟಕ ಸರ್ಕಾರದ ನಿಲುವು ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಕನ್ನಡಿಗರ ಹೊಣೆಗಾರಿಕೆ ಹೆಚ್ಚಿದೆ. ಕನ್ನಡಿಗರು ಒಂದು ದೀರ್ಘಕಾಲೀನ ಆಂದೋಲನಕ್ಕೆ ಸಿದ್ಧವಾಗಿ ತಾಕರ್‌ಿಕ ಅಂತ್ಯ ಕಾಣುವ ತನಕ ವಿಶ್ರಮಿಸಬಾರದು. ಇದಕ್ಕೆ ಇಡೀ ರಾಷ್ಟ್ರದ ಜನರ ಬೆಂಬಲ ಸಿಗುತ್ತದೆ. ಹಾಗಾಗಿ ನಾವು ಈ ರೀತಿ ಕಾರ್ಯಕ್ರಮ ರೂಪಿಸಬೇಕಾಗಿದೆ.

1. ಈ ತೀರ್ಪು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಆತಂಕ ಒಡ್ಡಿರುವುದರಿಂದ, ಸಂವಿಧಾನದ ಷೆಡ್ಯೂಲ್-8 ರಲ್ಲಿರುವ ಎಲ್ಲಾ ಭಾಷೆಗಳನ್ನು ಶಿಕ್ಷಣ ಮಾಧ್ಯಮದಲ್ಲಿ ಕಡ್ಡಾಯಗೊಳಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ದೇಶೀಯ ಭಾಷೆಗಳಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಈ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ದೇಶೀಯ ಭಾಷೆಗಳನ್ನು ಉಳಿಸಲು ನೆರವಾಗುವಂತೆ ಕೋರಬೇಕು. ಸಂವಿಧಾನದ 21ಎ, 29, 30, 43 ಕಲಂಗಳಿಗೆ ತಿದ್ದುಪಡಿ ಮಾಡಿ ಪ್ರಾದೇಶಿಕ/ರಾಜ್ಯ ಭಾಷೆ ಕಲಿಯುವುದು ಅಗತ್ಯ ಎಂಬುದನ್ನು ಸೇರಿಸಬೇಕು.

2. ಸಂವಿಧಾನ ತಿದ್ದುಪಡಿ ಮುಂತಾದ ಕ್ರಿಯೆಗಳು ಸಾಕಷ್ಟು ಸಮಯ ಹಿಡಿಯುವುದರಿಂದ 2010ರ ಶಿಕ್ಷಣ ಹಕ್ಕು ಕಾಯಿದೆಯಲ್ಲಿರುವ ಅಂಶವನ್ನು ಆಧರಿಸಿ ರಾಜ್ಯ ಸರ್ಕಾರ ಕೂಡಲೇ ಭಾಷಾ ನೀತಿಯೊಂದನ್ನು ರೂಪಿಸಬೇಕು. ಕಾಯ್ದೆಯ ಪ್ರಕರಣ 29(2)(ಎಫ್) ಅನ್ವಯ ಸಾಧ್ಯವಾದಷ್ಟು ಮಾತೃಭಾಷೆ ಎಂಬುದನ್ನು ಕಡ್ಡಾಯವಾಗಿ ಮಾತೃಭಾಷೆ ಅಥವಾ ರಾಜ್ಯ ಭಾಷೆ ಎಂದು ಬದಲಿಸಬೇಕು.

3. 1966ರ ಡಿ.ಎಸ್. ಕೊಠಾರಿ ಆಯೋಗದ ಶಿಫಾರಸ್ಸಿನಂತೆ ಈ ಕಾರ್ಯ ಸಾಧ್ಯವಾದರೆ ಸಮಾನ ಶಾಲಾಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಬಡವರ ಮಕ್ಕಳ ಶಾಲೆ ಮತ್ತು ಶ್ರೀಮಂತರ ಮಕ್ಕಳ ಶಾಲೆ ಎಂಬ ಶೈಕ್ಷಣಿಕ ವರ್ಗಬೇಧವನ್ನು ತೊಡೆದು ಹಾಕಲು ಸಹಾಯವಾಗುತ್ತದೆ. ಈ ಬದಲಾವಣೆಯಿಂದ ಮಾಲಿಯ ಮಗ ಮತ್ತು ಮಂತ್ರಿಯ ಮಗ, ಕೂಲಿಯ ಮಗ ಮತ್ತು ಕೋಟ್ಯಾಧೀಶನ ಮಗ, ಭೂಮಾಲಿಕನ ಮಗ ಮತ್ತು ಜೀತಗಾರನ ಮಗ, ಪ್ರಧಾನಿಯ ಮಗ ಮತ್ತು ಪೌರಕಾಮರ್‌ಿಕನ ಮಗ ಇವರೆಲ್ಲರೂ ಒಂದೇ ಬೆಂಚಿನಲ್ಲಿ, ಒಂದೇ ತರಗತಿಯಲ್ಲಿ ಕುಳಿತು ಕಲಿಯುವ ವಾತಾವರಣ ನಿಮರ್‌ಾಣವಾಗುತ್ತದೆ. ಇದು ವರ್ಣರಹಿತ ಮತ್ತು ವರ್ಗರಹಿತ ನವಕರ್ನಾಟಕದ ನಿಮರ್‌ಾಣಕ್ಕೆ ನಾಂದಿಯಾಗುತ್ತದೆ.

ಕನ್ನಡ ಶಾಲೆಗಳ ಅಧೋಗತಿ

ಸರ್ಕಾರದ ಅಧಿಕೃತ ವರದಿಯ ಪ್ರಕಾರ 2012-13 ನೇ ಸಾಲಿನಲ್ಲಿದ್ದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ಕ್ರಮವಾಗಿ 22,105 ಮತ್ತು 22,567. 2013-14ನೇ ಸಾಲಿನಲ್ಲಿ ಈ ಸಂಖ್ಯೆ ಕ್ರಮವಾಗಿ 21,996 ಮತ್ತು 22,517ಕ್ಕೆ ಇಳಿದಿದೆ. ಇದನ್ನು ನೋಡಿದಾಗ ಒಂದು ವರ್ಷದಲ್ಲಿ ಒಟ್ಟು 159 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಇದೇ ಸಂದರ್ಭದಲ್ಲಿ 2012-13ನೇ ಸಾಲಿನಲ್ಲಿದ್ದ ಖಾಸಗಿ ಅನುದಾನರಹಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ಕ್ರಮವಾಗಿ 3,486 ಮತ್ತು 8,259. 2013-14ನೇ ಸಾಲಿನಲ್ಲಿ ಈ ಸಂಖ್ಯೆ ಕ್ರಮವಾಗಿ 3,702 ಮತ್ತು 8,557ಕ್ಕೆ ಏರಿದೆ. ಅಂದರೆ ಒಂದೇ ವರ್ಷದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಸಂಖ್ಯೆ 11,745ರಿಂದ 12,259ಕ್ಕೆ ಏರಿದೆ. ಒಂದು ವರ್ಷದಲ್ಲಿ ಮುಚ್ಚಿದ 159 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಜಾಗದಲ್ಲಿ 514 ಖಾಸಗಿ ಶಾಲೆಗಳು ತಲೆಯೆತ್ತಿ ನಿಂತಿವೆ. ಅಂದರೆ ಖಾಸಗಿ ಅನುದಾನರಹಿತ ಶಾಲೆಗಳು ವಾಷರ್‌ಿಕ ಮುಚ್ಚಿದ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಮೂರುಪಟ್ಟು ಆರಂಭವಾಗಿವೆ.

ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದಂತೆ 2012-13ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿದ್ದ ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳ ದಾಖಲಾತಿ 51 ಲಕ್ಷದಿಂದ 2013-14ನೇ ಸಾಲಿನಲ್ಲಿ 49.5 ಲಕ್ಷಕ್ಕೆ ಇಳಿದಿದೆ. ಇದೇ ವೇಳೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿದ್ದ ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳ ದಾಖಲಾತಿ 32.40 ಲಕ್ಷದಿಂದ 33.66 ಲಕ್ಷಕ್ಕೆ ಏರಿದೆ. ಅಂದರೆ, ಸರ್ಕಾರಿ ಶಾಲೆಗಳಲ್ಲಿ 1.5 ಲಕ್ಷ ಮಕ್ಕಳು ಕಡಿಮೆಯಾಗಿದ್ದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 1.26 ಲಕ್ಷ ಮಕ್ಕಳು ಜಾಸ್ತಿಯಾಗಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲೇ ದೂರದ ದುಬೈನಲ್ಲಿ ವಾಸಿಸುತ್ತಿರುವ ಕನ್ನಡಿಗರು ತಮ್ಮ ಮಕ್ಕಳಿಗಾಗಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ತೆರೆದಿದ್ದಾರೆ. ಇದಕ್ಕಾಗಿ ದುಬೈ ಕನ್ನಡಿಗರನ್ನು ಅಭಿನಂದಿಸುತ್ತೇನೆ.

ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಇದಾದರೆ, ಇನ್ನು ಶಿಕ್ಷಕರ ಸ್ಥಿತಿಗತಿ ಮತ್ತಷ್ಟು ಶೋಚನೀಯವಾಗಿದೆ. ಮಂಜೂರಾದ 24,981 ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ನಿವೃತ್ತಿಯ ಪ್ರಮಾಣಕ್ಕೆ ಅನುಗುಣವಾಗಿ ಹೊಸಬರನ್ನು ನೇಮಕ ಮಾಡುತ್ತಿಲ್ಲ. ಪರಿಣಾಮ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಾಗಿ, ಪೋಷಕರು ಮಕ್ಕಳನ್ನು ಅಂತಹ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಸ್ಥಳಾಂತರಿಸುತ್ತಿರುವುದು ಸಹಜ ಬೆಳವಣಿಗೆಯಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಶಿಕ್ಷಕರಿಗೆ ಉನ್ನತೀಕರಿಸಿದ ವೇತನ ಶ್ರೇಣಿ, ಉತ್ತಮ ತರಬೇತಿ, ನಿಯಮಿತ ಪುನರ್ ಮನನ ಶಿಬಿರ ಹಾಗು ಅವಶ್ಯಕ ಸವಲತ್ತುಗಳನ್ನು ಕಲ್ಪಿಸಬೇಕು. ಶಾಲೆಗೆ ಅವಶ್ಯಕವಾದ ಉತ್ತಮ ಕಟ್ಟಡ, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ, ವಿದ್ಯುತ್ತು, ಕುಡಿಯುವ ನೀರು, ಪಾಠೋಪಕರಣ, ಆಟೋಪಕರಣ ಮತ್ತು ಪೀಠೋಪಕರಣ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

ಗ್ರಾಮ ಪಂಚಾಯತಿ ಸಾರ್ವಜನಿಕ ಶಾಲೆಗಳ ಪ್ರಾರಂಭ

ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಈಗಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ’ಗ್ರಾಮ ಪಂಚಾಯತಿ ಸಾರ್ವಜನಿಕ ಶಾಲೆ’ಗಳೆಂದು ಪರಿವತರ್‌ಿಸಬೇಕು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಹ ಒಂದಾದರೂ ಶಾಲೆಯನ್ನು ಪ್ರಾರಂಭಿಸಬೇಕೆಂದು ಸರ್ಕಾರವನ್ನು ಸಮಸ್ತ ಕನ್ನಡಿಗರ ಪರವಾಗಿ ಒತ್ತಾಯಿಸುತ್ತೇನೆ. ಇಂತಹ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಅನ್ನು ಒಂದು ಭಾಷೆಯನ್ನಾಗಿ ಪರಿಣಾಮಕಾರಿಯಾಗಿ ಕಲಿಸಬೇಕು. ಇದು ನಮ್ಮ ಎಲ್ಲ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ನೆರವಾಗುತ್ತದೆ. ಮಾತೃಭಾಷೆಯ ಪ್ರೌಢಿಮೆ ಮತ್ತು ಸಂಪರ್ಕ ಭಾಷೆಯ ಅರಿವು ಯಾವುದೇ ಮಗುವಿನ ಮೂಲಭೂತ ಅಗತ್ಯ ಎನ್ನುವುದು ನನ್ನ ದೃಢವಾದ ನಂಬಿಕೆ.

ಶಾಸ್ತ್ರೀಯ ಭಾಷೆಯಾಗಿ ಕನ್ನಡ

ಕೇಂದ್ರ ಸರ್ಕಾರವು ಕನ್ನಡಿಗರ ನಿರಂತರ ಹಕ್ಕೊತ್ತಾಯಕ್ಕೆ ಮಣಿದು 2008ರಲ್ಲಿ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಆದರೆ ಅದಕ್ಕೆ ಸಿಗಬೇಕಾದ ಸವಲತ್ತುಗಳು ಇಂದಿಗೂ ಸಿಕ್ಕಿಲ್ಲ. ಕಾರಣಗಳು ಏನೇ ಇರಲಿ ಕನ್ನಡಕ್ಕೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆಯಲು ಕರ್ನಾಟಕ ಸರ್ಕಾರವು ತಮಿಳಿನಲ್ಲಿ ಆಗಿರುವ ಕೆಲಸಗಳನ್ನು ಗಮನಿಸಿ ಅದನ್ನು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು. ಮೈಸೂರಿನ ಭಾಷಾ ಸಂಸ್ಥಾನದ ಒಂದು ಯೋಜನೆ ಆಗಿರುವ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ತಮಿಳಿನಂತೆ ಪ್ರತ್ಯೇಕಿಸಿ ಒಂದು ಸ್ವತಂತ್ರ ಕೇಂದ್ರವಾಗಿ ಕನ್ನಡ ಶಾಸ್ತ್ರೀಯ ಉನ್ನತ ಅಧ್ಯಯನ ಕೇಂದ್ರವು ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು. ಅದಕ್ಕೆ ಅಗತ್ಯವಾದ ಸ್ಥಳವನ್ನು ರಾಜ್ಯ ಸರ್ಕಾರವು ಒದಗಿಸುವುದಾಗಿ ಹೇಳಿದೆ. ಇದು ಸ್ವಾಗತಾರ್ಹವಾದದ್ದು. ಅಲ್ಲಿ ಸುಸಜ್ಜಿತ ಕಟ್ಟಡ ನಿಮರ್‌ಾಣವಾಗಿ ಕನ್ನಡವು ವಿಶ್ವಮಟ್ಟದಲ್ಲಿ ಬೆಳಗುವ ರೀತಿಯಲ್ಲಿ ಯೋಜನೆಗಳು ರೂಪಿತಗೊಳ್ಳಬೇಕು. ಭಾರತದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮತ್ತು ವಿದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು.

ಆಡಳಿತದಲ್ಲಿ ಕನ್ನಡ

ಕನ್ನಡದ ಬಳಕೆ ನ್ಯಾಯಾಂಗ, ಶಾಸಕಾಂಗ, ಆಡಳಿತಾಂಗ, ಶಿಕ್ಷಣ ಕ್ಷೇತ್ರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಾಗಬೇಕು. ಅಧಿಕಾರಿಗಳು ಕನ್ನಡದ ಬಗ್ಗೆ ತೋರುವ ಅಸಡ್ಡೆಯನ್ನು ಖಂಡಿಸುತ್ತೇನೆ. ಕನ್ನಡದಲ್ಲಿ ಟಿಪ್ಪಣಿ ಬರೆಯದ ಕಡತಗಳನ್ನು ಮಂತ್ರಿಗಳು ತಿರಸ್ಕರಿಸಬೇಕು. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಕನ್ನಡದಲ್ಲಿ ಇಲ್ಲದ ಕಡತಗಳನ್ನು ಹಿಂದಿರುಗಿಸಿದ್ದಾರೆ. ಇದು ಅಭಿನಂದನೀಯ. ಉಳಿದವರೆಲ್ಲರಿಗೂ ಇದು ಮಾದರಿ ಆಗಬೇಕು.

ಆಡಳಿತಾಂಗದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಇಂಗ್ಲೀಷ್ ಭಾಷೆಯ ಬಳಕೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಈ ಅಧಿಕಾರಿಗಳು ಇಂಗ್ಲೀಷಿನಲ್ಲೇ ಯೋಚಿಸುತ್ತಾರೆ, ಇಂಗ್ಲೀಷಿನಲ್ಲೇ ಬರೆಯುತ್ತಾರೆ, ಕನ್ನಡದಲ್ಲಿ ತೊದಲುತ್ತಾರೆ. ಇಂತಹ ಅಧಿಕಾರಿಗಳನ್ನು ಸರ್ಕಾರ ಮೊದಲು ಬದಲಾಯಿಸಬೇಕು. ಕನ್ನಡ ಬಳಸದ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿಸಬೇಕು. ಕೆಲವು ಅಧಿಕಾರಿಗಳು ಕಡತ ಕನ್ನಡದಲ್ಲಿದ್ದರೂ ಅದನ್ನು ಬೇರೆಯವರಿಂದ ಓದಿಸಿ ಆ ಕಡತದಲ್ಲಿ ಆಗಬಹುದು ಅಥವಾ ಆಗುವುದಿಲ್ಲ ಎಂದು ಬರೆದರೆ ಅದೇ ಕನ್ನಡಿಗರ ಭಾಗ್ಯವಾಗಿದೆ. ಕನ್ನಡ ಪರವಾದ ಮುನ್ನೂರಕ್ಕೂ ಹೆಚ್ಚು ಆದೇಶಗಳನ್ನು ನಿತ್ಯವೂ ಉಲ್ಲಂಘಿಸುತ್ತಿರುವ ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.

ಕನ್ನಡದಲ್ಲಿ ನಾಮಫಲಕ

ಕರ್ನಾಟಕದಾದ್ಯಂತ ಅಂಗಡಿ ಮುಂಗಟ್ಟುಗಳ ಮತ್ತು ಮಾಲ್ಗಳ ನಾಮಫಲಕಗಳು ಪ್ರಧಾನವಾಗಿ ಕನ್ನಡದಲ್ಲಿ ಇರಬೇಕು. ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ, ಪಾಸ್ಪೋರ್ಟ್ರ್ ಕಛೇರಿಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯವಾಗಿ ಇರಬೇಕು. ಹೀಗೆ ಕನ್ನಡದಲ್ಲಿ ನಾಮಫಲಕವನ್ನು ಹಾಕದವರಿಗೆ ರೂ. 250/- ದಂಡವಿಧಿಸಲಾಗುತ್ತಿತ್ತು. ಈ ದಂಡದ ಮೊತ್ತವನ್ನು ಅಂಗಡಿ ಮಾಲೀಕರು ಪಾವತಿಸಿ ಕೈತೊಳೆದುಕೊಳ್ಳುತ್ತಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸಿನಂತೆ 2006ರಲ್ಲಿ ಸರ್ಕಾರ ಈ ದಂಡವನ್ನು ಹತ್ತು ಸಾವಿರ ರೂಪಾಯಿಗೆ ಏರಿಸಿತು. ಇದಕ್ಕೆ ಖಾಸಗಿ ಕಂಪನಿಯೊಂದು ತಡೆಯಾಜ್ಞೆ ತಂದು ಸುಮಾರು ಆರು ವರ್ಷಗಳ ಮೇಲಾದರೂ ತಡೆಯಾಜ್ಞೆ ತೆರವಾಗಿಲ್ಲ. ಈ ಬಗ್ಗೆ ಸರ್ಕಾರ ತೀವ್ರವಾಗಿ ಗಮನಹರಿಸಬೇಕೆಂದು ಕೋರುತ್ತೇನೆ.

ಕನ್ನಡ ತಂತ್ರಾಂಶ

ಕನ್ನಡ ತಂತ್ರಾಂಶದ ಪ್ರಗತಿ ಇನ್ನೂ ಆಗಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿ ಕನ್ನಡ ಬಳಕೆಯಾಗದ ಹೊರತು ಕನ್ನಡಕ್ಕೆ ಉಳಿಗಾಲವಿಲ್ಲ. ಕರ್ನಾಟಕ ಸರ್ಕಾರವು ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಇದರ ಪ್ರಗತಿಯಾಗಿಲ್ಲ. ಕನ್ನಡದಲ್ಲಿ ಒಂದು ತಂತ್ರಾಂಶದಿಂದ ಮತ್ತೊಂದು ತಂತ್ರಾಂಶಕ್ಕೆ ಪರಿವರ್ತನೆ (ಕನ್ವರ್ಟಬಲಿಟಿ) ಸಾಧ್ಯವಾಗುವ ರೀತಿಯಲ್ಲಿ ತಂತ್ರಾಂಶವನ್ನು ರೂಪಿಸಬೇಕು. ಅಕ್ಷರ ಜಾಣ, ನುಡಿ ಜಾಣ, ವ್ಯಾಕರಣ ಪರೀಕ್ಷೆ, ಪದಪರೀಕ್ಷೆ ಸಾಧ್ಯವಾಗಬೇಕು.

ಪುಸ್ತಕ ನೀತಿ

ಕನ್ನಡ ಪುಸ್ತಕೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಗ್ರಂಥಾಲಯ ಇಲಾಖೆ ಪ್ರತಿ ವರ್ಷ ತಪ್ಪದೆ ಪುಸ್ತಕಗಳನ್ನು ಖರೀದಿಸಬೇಕು. ಪುಸ್ತಕಗಳು ಸಂಸ್ಕೃತಿಯ ಉತ್ಪನ್ನಗಳು ಮತ್ತು ಸಾರ್ವಜನಿಕರ ಆಸ್ತಿ ಎಂಬುದನ್ನು ಸರ್ಕಾರ ತಿಳಿಯಬೇಕು. ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಪುಸ್ತಕಗಳ ಪ್ರಕಟಣೆ, ಪ್ರಸಾರ, ಖರೀದಿ, ಸಹಾಯ ಧನ ಮುಂತಾದ ಹಲವಾರು ವಿಷಯಗಳ ಬಗ್ಗೆ ತಜ್ಞರ ಸಮಿತಿಯಿಂದ ’ಪುಸ್ತಕ ನೀತಿ’ ಎಂಬ ಕಾಯ್ದೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅದನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸುತ್ತೇನೆ. ಇದರಿಂದ ಸಾಹಿತಿಗಳಿಗೆ, ಪ್ರಕಾಶಕರಿಗೆ, ಪುಸ್ತಕೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಸರ್ಕಾರವು ಪುಸ್ತಕ ನೀತಿಯನ್ನು ಅಂಗೀಕರಿಸಿ ಕನ್ನಡದ ಅತ್ಯುತ್ತಮ ಪ್ರಕಾಶಕರಿಗೆ ಸಬ್ಸಿಡಿ ದರದಲ್ಲಿ ಮುದ್ರಣ ಕಾಗದವನ್ನು ಒದಗಿಸಬೇಕೆಂದು ಕೋರುತ್ತೇನೆ.

ಗಡಿ ಸಮಸ್ಯೆ

ಕರ್ನಾಟಕ ಏಕೀಕರಣವಾದರೂ ಗಡಿ ಸಮಸ್ಯೆ ಮಾತ್ರ ಹಾಗೆಯೇ ಉಳಿದಿರುವುದು ವಿಷಾದಕರ. ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಉಳಿದಿರುವ ಅನೇಕ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಲು ಇನ್ನೂ ಆಗಿಲ್ಲ. ಕಾಸರಗೋಡಿನ ಚಂದ್ರಗಿರಿ ನದಿಯ ಉತ್ತರ ಭಾಗ ಕರ್ನಾಟಕಕ್ಕೆ ಸೇರಬೇಕೆಂದು ಮಹಾಜನ್ ಆಯೋಗ ಶಿಫಾರಸ್ಸು ಮಾಡಿದೆ. ಇದು ಕಾರ್ಯಗತವಾಗಬೇಕು. ರಾಷ್ಟ್ರಕವಿ ಎಂ.ಗೋವಿಂದ ಪೈ ಅವರ ಮತ್ತು ಹಿರಿಯ ಕನ್ನಡದ ಕವಿ ಕೈಯ್ಯಾರ ಕಿಂಞಣ್ಣ ರೈ ಅವರ ಹಂಬಲ ಈಡೇರಲೆಂದು ಆಶಿಸುತ್ತೇನೆ. ಕೇರಳದ ಕಾಸರಗೋಡು, ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ ಮತ್ತು ಆಂಧ್ರದ ಕರ್ನೂಲ್, ಮೆಹಬೂಬ್ನಗರ ಜಿಲ್ಲೆಗಳ ಕನ್ನಡ ಪ್ರದೇಶಗಳು ಹಾಗೂ ತಮಿಳುನಾಡಿನ ತಾಳವಾಡಿ ಕರ್ನಾಟಕಕ್ಕೆ ಸೇರಬೇಕಾಗಿದೆ. ಈ ಸ್ಥಳಗಳಲ್ಲಿ ಐಚ್ಛಿಕ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಲಯಾಳಂ, ಮರಾಠಿ, ತೆಲುಗು, ತಮಿಳು ಭಾಷೆಗಳಲ್ಲಿ ಬೋಧನೆ ಮಾಡಲಾಗುತ್ತಿದೆ. ಈ ವಿದ್ಯಾರ್ಥಿಗಳಿಗೆ ಐಚ್ಛಿಕ ಪಠ್ಯಗಳನ್ನು ಕನ್ನಡದಲ್ಲಿ ತಯಾರಿಸಿ, ಮುದ್ರಿಸಿ ಕರ್ನಾಟಕ ಸರ್ಕಾರ ಉಚಿತವಾಗಿ ವಿತರಣೆ ಮಾಡಬೇಕೆಂದು ವಿನಂತಿಸುತ್ತೇನೆ. ಗಡಿ ಭಾಗದಲ್ಲಿ ಕನ್ನಡದ ರಕ್ಷಣೆಗೆ ಶ್ರಮಿಸುತ್ತಿರುವ ಕನ್ನಡ ಪತ್ರಿಕೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಜಾಹಿರಾತು ನೀಡುವುದರ ಮೂಲಕ ಉತ್ತೇಜನ ನೀಡಬೇಕು.

ಗೋವಾ ಕನ್ನಡಿಗರ ಸಮಸ್ಯೆ

ಗೋವಾದ ಬೈನಾ ಕಡಲ ತೀರದಲ್ಲಿ ಹಲವು ವರ್ಷಗಳಿಂದ 350ಕ್ಕೂ ಹೆಚ್ಚು ಕನ್ನಡಿಗರ ಕುಟುಂಬಗಳು ವಾಸವಾಗಿದ್ದವು. ಸುರಕ್ಷತೆ ವಿಷಯವನ್ನು ಮುಂದಿಟ್ಟುಕೊಂಡು ಗೋವಾ ಸರ್ಕಾರ ಈ ಕನ್ನಡಿಗರ ಮನೆಗಳನ್ನು ತೆರವುಗೊಳಿಸುತ್ತಿರುವುದು ವಿಷಾದಕರ. ಈಗಾಗಲೇ ಕನ್ನಡಿಗರ 75 ಮನೆಗಳನ್ನು ನೆಲಸಮ ಮಾಡಿರುವುದನ್ನು ಖಂಡಿಸುತ್ತೇನೆ. ಹೀಗೆ ಮನೆ ಕಳೆದುಕೊಂಡ ಕನ್ನಡದ ಕುಟುಂಬಗಳಿಗೆ ಇನ್ನೂ ಪುನರ್ವಸತಿ ಕಲ್ಪಿಸಿಲ್ಲ. ಅಲ್ಲಿಯ ಕನ್ನಡಿಗರು ಬೀದಿಪಾಲಾಗಿದ್ದಾರೆ. ಗೋವಾ ಕನ್ನಡಿಗರು ತಬ್ಬಲಿಗಳಲ್ಲ, ಕರ್ನಾಟಕದ ಸಮಸ್ತ ಜನತೆ ಗೋವಾ ಕನ್ನಡಿಗರ ಜೊತೆಗಿದ್ದೇವೆ ಎಂದು ಹೇಳಲು ಬಯಸುತ್ತೇನೆ. ಮಾನ್ಯ ಮುಖ್ಯಮಂತ್ರಿಗಳು ಸಚಿವರೊಬ್ಬರನ್ನು ಪಣಜಿಗೆ ಕಳಿಸಿ ಅಲ್ಲಿಯ ಸರ್ಕಾರದ ಜೊತೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೋರುತ್ತೇನೆ.

ವಿಶ್ವವಿದ್ಯಾಲಯಗಳಲ್ಲಿ ಕನ್ನಡ

ಕರ್ನಾಟಕದ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಕನ್ನಡ ಸರಿಯಾಗಿ ಬಳಕೆಯಾಗುತ್ತಿಲ್ಲ. ಇನ್ನು ಶಿಕ್ಷಣದಲ್ಲಂತು ಕನ್ನಡ ದಿನೇ ದಿನೇ ಅವಜ್ಞೆಗೆ ಒಳಗಾಗುತ್ತಿದೆ. ಕೆಲವು ಪದವಿ ತರಗತಿಗಳಲ್ಲಿ ಎರಡು ವರ್ಷವಿದ್ದ ಕನ್ನಡ ವಿಷಯವನ್ನು ಒಂದು ವರ್ಷಕ್ಕೆ ಇಳಿಸಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಇದು ಮಾಯವಾದರೂ ಆಶ್ಚರ್ಯಪಡಬೇಕಿಲ್ಲ. ಹಳಗನ್ನಡ ಸಾಹಿತ್ಯದ ಓದು ಮತ್ತು ಅಧ್ಯಯನವಂತು ಮರೆತು ಹೋದಂತೆ ಕಾಣುತ್ತಿದೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಹಳಗನ್ನಡ ಕಾವ್ಯಗಳ ಗದ್ಯಾನುವಾದದ ನೆರವನ್ನು ಪಡೆದು ಗಮಕಿಗಳ ಮೂಲಕ ಹಾಡಿಸುವ, ವ್ಯಾಖ್ಯಾನಿಸುವ ಪದ್ಧತಿಯನ್ನು ಕೂಡಲೇ ವಿಶ್ವವಿದ್ಯಾಲಯಗಳು ಆರಂಭಿಸಬೇಕು. ಈ ಕ್ರಮದಿಂದ ಹಳಗನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ದಾಟಿಸಿದಂತಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವ ಆಚರಣೆಯ ಈ ಸಂದರ್ಭದಲ್ಲಿ 100 ಮೌಲಿಕ ಪುಸ್ತಕಗಳನ್ನು ಮತ್ತು 17 ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಪ್ರಕಟಿಸುತ್ತಿರುವುದು ಅಭಿನಂದನೀಯ. ವಿಶ್ವದ ಎಲ್ಲಾ ಬಗೆಯ ಜ್ಞಾನ ಕನ್ನಡದಲ್ಲಿ ಬರಲು ವಿವಿಧ ಪ್ರಾಧಿಕಾರಗಳು ಮತ್ತು ವಿಶ್ವವಿದ್ಯಾಲಯಗಳು ಶ್ರಮಿಸಬೇಕು. ಜಗತ್ತಿನ ಮತ್ತು ಭಾರತೀಯ ಎಲ್ಲ ಭಾಷೆಗಳ ಅತ್ಯುತ್ತಮ ಕೃತಿಗಳು, ವೈಜ್ಞಾನಿಕ ಸಂಶೋಧನೆಗಳು ಹಾಗು ಸಮಾಜ ವಿಜ್ಞಾನದ ಚಿಂತನೆಗಳು ಕನ್ನಡಕ್ಕೆ ಭಾಷಾಂತರವಾಗಬೇಕು.

ಕನ್ನಡಿಗರಿಗೆ ಉದ್ಯೋಗ

ಕನ್ನಡಿಗರನ್ನು ದಶಕಗಳಿಂದ ಕಾಡುತ್ತಿರುವ ಅತಿಮುಖ್ಯವಾದ ಸಮಸ್ಯೆ ಎಂದರೆ ನಿರುದ್ಯೋಗ. ಕರ್ನಾಟಕದಲ್ಲಿರುವ ಖಾಸಗೀ ಉದ್ಯಮಗಳು, ಕೇಂದ್ರ ಸರ್ಕಾರದ ಉದ್ಯಮಗಳು ಮತ್ತು ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ನಿರಂತರವಾಗಿ ಕನ್ನಡಿಗರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಕನ್ನಡ ಹೋರಾಟಗಳಿಗೆ ಹೊಸ ಆಯಾಮ ನೀಡಿದ ಗೋಕಾಕ್ ಚಳುವಳಿ ನಂತರ ಅಸ್ತಿತ್ವಕ್ಕೆ ಬಂದ ಶ್ರೀ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಸೂಕ್ತ ಅವಕಾಶಗಳನ್ನು ದೊರಕಿಸಿಕೊಡುವ ಮಾಗರ್‌ೊಪಾಯಗಳನ್ನು ಸೂಚಿಸಲು ಡಾ. ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಕನ್ನಡಿಗರ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ 58 ಅಂಶಗಳುಳ್ಳ ಅತ್ಯುತ್ತಮ ವರದಿಯನ್ನು ನೀಡಿತು. ದುರಂತವೆಂದರೆ ಆ ವರದಿಯನ್ನು ಎರಡು ದಶಕಗಳ ಮೇಲಾದರೂ ಅನುಷ್ಠಾನಕ್ಕೆ ತಂದಿಲ್ಲ. ಆ ವರದಿ ನೀಡಿದಾಗ ಇದ್ದ ಪರಿಸ್ಥಿತಿ ಈಗಿಲ್ಲ. ಜಾಗತೀಕರಣ ಮತ್ತು ಖಾಸಗೀಕರಣಗಳ ಈ ಕಾಲಮಾನದಲ್ಲಿ ಮಹಿಷಿ ವರದಿಗೆ ಕೆಲವು ಮಾಪರ್‌ಾಡುಗಳು ಆಗಬೇಕಾಗಿದೆ. ವರದಿಯ ಆಶಯ ಇಂದಿಗೂ ಪ್ರಸ್ತುತ. ಈ ವರದಿಯನ್ನು ಕೇಂದ್ರ ಸರ್ಕಾರವು ಒಪ್ಪಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆೆ ಎನ್ನುವುದು ರಾಷ್ಟ್ರೀಯ ನೀತಿ ಆಗಬೇಕು. ಹಾಗೆಯೇ ಕೇಂದ್ರ ಸರ್ಕಾರದ ಬ್ಯಾಂಕ್, ಕಛೇರಿ, ಉದ್ಯಮಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆ (ಕನ್ನಡ)ಯ ಪ್ರಶ್ನೆಪತ್ರಿಕೆಯನ್ನು ಕಡ್ಡಾಯಗೊಳಿಸುವ ಮೂಲಕ ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯ ಒದಗಿಸಿಕೊಡುವ ಕೆಲಸ ಆಗಬೇಕು. ಇಂದು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದರೆ ರಾಜ್ಯದಲ್ಲಿರುವ ವೃತ್ತಿಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಕ್ಯಾಂಪಸ್ ಆಯ್ಕೆ ನಡೆಸಿ ನೇಮಕ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಬೇಕು; ಮತ್ತು ಕನ್ನಡ ವ್ಯಾವಹಾರಿಕ ಜ್ಞಾನಕ್ಕೆ ಸಂಬಂಧಿಸಿದ ಒಂದು ಕನ್ನಡ ಪ್ರಶ್ನೆಪತ್ರಿಕೆಯನ್ನು ಕಡ್ಡಾಯವಾಗಿ ಸೇರಿಸಬೇಕು.

ಕೇಂದ್ರ ಸರ್ಕಾರದ ಕಛೇರಿಗಳು ಮತ್ತು ಉದ್ಯಮಗಳಲ್ಲಿ ಕನ್ನಡಿಗರ ನೇಮಕಾತಿ

ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಎಸ್.ಎಸ್.ಸಿ)ವು ಕೇಂದ್ರ ಸರ್ಕಾರದ ಕಚೇರಿಗಳಿಗೆ ಸಿಬ್ಬಂದಿಗಳನ್ನು ಆಯ್ಕೆ ಮಾಡುತ್ತದೆ. ಈ ಆಯ್ಕೆ ಸಮಿತಿಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯೊಬ್ಬರು ಕಡ್ಡಾಯವಾಗಿ ಇರಬೇಕು. ಕೇಂದ್ರ ಕಛೇರಿಯ ಖಾಲಿ ಹುದ್ದೆಗಳಿಗೆ ಅಂತಜರ್‌ಾಲದಲ್ಲಿ ಪ್ರಕಟಣೆ ಕೊಡುವುದಷ್ಟೇ ಅಲ್ಲದೆ ಸ್ಥಳೀಯ ಕನ್ನಡ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕು. ಈ ಎಲ್ಲಾ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳಿಂದ ಪಟ್ಟಿಯನ್ನು ತರಿಸಿಕೊಳ್ಳಬೇಕು. ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಉದ್ಯೋಗದ ಆಕಾಂಕ್ಷಿಗಳಿಗೆ ಪರೀಕ್ಷೆಯಲ್ಲಿ ಸ್ಥಳೀಯ ಭಾಷೆಯಲ್ಲಿ ತರಬೇತಿ ನೀಡುವ 52 ರೈಲ್ವೆ ಪರೀಕ್ಷಾ ತರಬೇತಿ ಕೇಂದ್ರಗಳು ಬಿಹಾರದಲ್ಲಿವೆ. ಈ ತರಬೇತಿ ಕೇಂದ್ರಗಳಿಗೆ ಬಿಹಾರ ಸರ್ಕಾರವು ಉತ್ತೇಜನ ನೀಡುತ್ತಿದೆ. ಆದರೆ ಕರ್ನಾಟಕದಲ್ಲಿ ಇಂತಹ ಒಂದು ಪರೀಕ್ಷಾ ತರಬೇತಿ ಕೇಂದ್ರವೂ ಇಲ್ಲದಿರುವುದು ದುರಂತ. ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕು. ಗ್ರಾಮೀಣ ಅಭ್ಯರ್ಥಿಗಳಿಗೆ ಈ ಕ್ರಮದಿಂದ ಬಹಳ ಅನುಕೂಲವಾಗುತ್ತದೆ.

ನ್ಯಾಯಾಂಗದಲ್ಲಿ ಕನ್ನಡ

ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀಪರ್‌ು ನೀಡಬೇಕೆಂಬ ಉಚ್ಚ ನ್ಯಾಯಾಲಯದ 01-11-2003ರ ಸುತ್ತೋಲೆಯನ್ನು ಅಧೀನ ನ್ಯಾಯಾಲಯಗಳು ಕಡ್ಡಾಯವಾಗಿ ಪಾಲಿಸಬೇಕು. 21-03.2008 ರಂದು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಕನ್ನಡದಲ್ಲಿ ತೀಪರ್‌ು ನೀಡಿದ ಶ್ರೀ ಅರಳಿ ನಾಗರಾಜು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ನ್ಯಾಯಾಧೀಶರು ಕನ್ನಡದಲ್ಲಿ ಬರೆದಿರುವ ಕಾನೂನಿಗೆ ಸಂಬಂಧಿಸಿದ ಪುಸ್ತಕಗಳ ಪ್ರಕಟಣೆಗೆ ಉಚ್ಚ ನ್ಯಾಯಾಲಯ ವಿಳಂಬ ಮಾಡದೆ ಶೀಘ್ರವಾಗಿ ಅನುಮತಿ ನೀಡಬೇಕು. ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನದ ಪರಿಶೀಲನೆಗಾಗಿ ಉಚ್ಚ ನ್ಯಾಯಾಲಯವು ಸಮಿತಿಯೊಂದನ್ನು ರಚಿಸಬೇಕು. ಆ ಸಮಿತಿಯು ಕಾಲಕಾಲಕ್ಕೆ ಸೇರಿ ಕನ್ನಡ ಬಳಕೆಯನ್ನು ಪರಿಶೀಲಿಸಿ ಶ್ರೇಷ್ಠ ನ್ಯಾಯಾಧೀಶರಿಗೆ ವರದಿ ಸಲ್ಲಿಸಬೇಕು.

ಹಿಂದಿ ಭಾಷಾ ಹೇರಿಕೆ

ಹಿಂದಿ ಭಾಷೆಯನ್ನು ಹೆಚ್ಚು ಬಳಸುವಂತೆ ಕೇಂದ್ರ ಸರ್ಕಾರದಿಂದ ಕೇಂದ್ರ ಸ್ವಾಮ್ಯದ ಬ್ಯಾಂಕು, ಕಛೇರಿಗಳಿಗೆ, ಕಾಖರ್‌ಾನೆಗಳಿಗೆ, ಕೇಂದ್ರೀಯ ಶಾಲೆಗಳಿಗೆ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಆದೇಶಗಳು ಬರುತ್ತಿವೆ. ಎಲ್ಲಾ ಕಡೆ ಹಿಂದಿ ಅನುಷ್ಠಾನಕ್ಕೆ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಲಾಗಿದೆ. ಇದು ಅಪಾಯಕಾರಿ. ನಾವು ಹಿಂದಿಯ ವಿರೋಧಿಗಳಲ್ಲ. ಆದರೆ ಹಿಂದಿ ಕನ್ನಡವನ್ನು ನುಂಗಬಾರದು. ಪ್ರಾಂತೀಯ ಶ್ರೀಮಂತ ಭಾಷೆಗಳನ್ನು ಹಿಂದಿ ತುಳಿಯಬಾರದು. ಕರ್ನಾಟಕದಲ್ಲಿರುವ ಎಲ್ಲಾ ಕೇಂದ್ರ ಸ್ವಾಮ್ಯದ ಕಛೇರಿ, ಬ್ಯಾಂಕು ಉದ್ಯಮಗಳಲ್ಲಿ ಕನ್ನಡಕ್ಕೆ ಆದ್ಯತೆ ಹಾಗೂ ಅಗ್ರಸ್ಥಾನ ಇರಬೇಕು; ಮತ್ತು ಕನ್ನಡವನ್ನು ವ್ಯಾಪಕವಾಗಿ ಬಳಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕನ್ನಡ ಘಟಕಗಳನ್ನು ಸ್ಥಾಪಿಸಬೇಕು. ಭಾರತ ಸಂವಿಧಾನದ 8ನೇ ಅನುಚ್ಛೇದದಲ್ಲಿ ಸೇರಿರುವ ಎಲ್ಲಾ ಭಾಷೆಗಳನ್ನೂ ರಾಷ್ಟ್ರಭಾಷೆಗಳೆಂದು ಕೇಂದ್ರಸರ್ಕಾರ ಘೋಷಿಸಬೇಕು ಮತ್ತು ಕೇಂದ್ರಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯಾ ಪ್ರಾಂತೀಯ ಭಾಷೆಗಳಲ್ಲೂ ಬರೆಯುವ ಅವಕಾಶಗಳಿರಬೇಕು. ಬರೆದದ್ದನ್ನು ಪ್ರಾಂತೀಯ ಭಾಷಾ ವಿದ್ವಾಂಸರೇ ಮೌಲ್ಯಮಾಪನ ಮಾಡುವ ಪದ್ಧತಿಯೂ ಇರಬೇಕು. ಕೇಂದ್ರೀಯ ಶಾಲೆಗಳಲ್ಲಿ 100 ಅಂಕಗಳ ಕನ್ನಡ ಪತ್ರಿಕೆ ಕಡ್ಡಾಯವಾಗಬೇಕು.

ಕರ್ನಾಟಕ : ಇಬ್ಭಾಗದ ಮಾತು

ಕರ್ನಾಟಕದ ವಿಭಜನೆಯ ಬಗ್ಗೆ ಕೆಲವರು ಮಾತನಾಡುತ್ತಿರುವುದು ವಿಷಾದನೀಯ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಹಲವು ದಶಕಗಳ ಹೋರಾಟದಿಂದ ಒಂದಾಗಿರುವುದು ಚಾರಿತ್ರಿಕ ಸತ್ಯ. ಆಳುವವರು ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸದೆ ಇರುವುದು ಈ ಒಡಕಿನ ಅಪಸ್ವರಕ್ಕೆ ಕಾರಣ. ಆದರೆ ಇದಕ್ಕೆ ಪ್ರತ್ಯೇಕತೆಯ ಕೂಗು ಪರಿಹಾರವಲ್ಲ. ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಒಂದು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ನೀಡಿದ ಶಿಫಾರಸ್ಸುಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಬೇಕಾಗಿದೆ. ಭೌಗೋಳಿಕವಾಗಿ ಒಂದಾಗಿರುವ ಕನ್ನಡಿಗರು ಭಾವನಾತ್ಮಕವಾಗಿಯೂ ಒಂದಾಗಬೇಕು. ರಾಜ್ಯ ಇಬ್ಭಾಗವಾದರೆ ನಾವು ಇನ್ನಷ್ಟು ದುರ್ಬಲರಾಗುತ್ತೇವೆ. ಇದು ಕನ್ನಡದ ಅಭಿವೃದ್ಧಿಗೆ ಇನ್ನಷ್ಟು ಸಂಚಕಾರ ತರುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ಅನ್ವಯವಾಗುವಂತೆ ಸಂವಿಧಾನದ ಕಲಂ 371ಜೆ ಮಾನ್ಯತೆಯನ್ನೂ ನೀಡಿದೆ. ಇದರಿಂದ ಈ ಭಾಗದ ಸವರ್‌ಾಂಗೀಣ ಅಭಿವೃದ್ಧಿಗೆ ಅನುಕೂಲವಾಗುವುದೆಂಬ ವಿಶ್ವಾಸ ನನಗಿದೆ.

ಕನ್ನಡ ವರ್ಷ-2015

ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಶತಮಾನ ತುಂಬುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ 2015ನೇ ವರ್ಷವನ್ನು ’ಕನ್ನಡ ವರ್ಷ-2015′ ಎಂದು ಘೋಷಿಸಬೇಕು. ಈ ವರ್ಷದುದ್ದಕ್ಕೂ ವಾರದಲ್ಲಿ ಒಂದು ದಿನವನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಛೇರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಕನ್ನಡ ವರ್ಷದ ಆಚರಣೆಗಾಗಿ ಮೀಸಲಿಡಬೇಕು. ಆ ದಿನವನ್ನು ’ಕನ್ನಡ ದಿನ’ ಎಂದು ಕರೆಯಬೇಕು. ಆ ದಿನದಂದು ಕನ್ನಡ ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ ಮುಂತಾದ ಕ್ಷೇತ್ರಗಳ ಸಂಬಂಧವಾಗಿ ಚಚರ್‌ೆ, ಉಪನ್ಯಾಸ, ವಿಚಾರ ಸಂಕಿರಣ ಮುಂತಾದ ಸಾಂಸ್ಕೃತಿಕ ಹಾಗು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಬೇಕು.

’ಕನ್ನಡ ಮಾತಾಡಿ’ ಆಂದೋಲನ

ಸರ್ಕಾರಿ ಹಾಗು ಅರೆಸರ್ಕಾರಿ ಕಛೇರಿಗಳು, ವಿಶ್ವವಿದ್ಯಾಲಯಗಳು, ಕಾಖರ್‌ಾನೆಗಳು, ಬ್ಯಾಂಕುಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗು ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಮಾತನಾಡಲು ಉತ್ತೇಜಿಸುವ ಸಲುವಾಗಿ ’ಕನ್ನಡ ಮಾತಾಡಿ’ ಎಂಬ ಚಳುವಳಿಯನ್ನು ಕೂಡಲೇ ಪ್ರಾರಂಭಿಸಬೇಕು. ಈ ಚಳುವಳಿಯಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಕನ್ನಡ ಪರ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಈಗಾಗಲೇ ಬೆಂಗಳೂರಿನಲ್ಲಿ ’ಕನ್ನಡ ಮಾತಾಡಿ’ ಎಂಬ ಚಳುವಳಿಯನ್ನು ಆರಂಭಿಸಿರುವ ’ಕಂಕಣ’ ಮುಂತಾದ ಸಂಸ್ಥೆಗಳನ್ನು ಅಭಿನಂದಿಸುತ್ತೇನೆ. ಕೆಲವು ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ಹಾಕಲಾಗುತ್ತಿದೆ. ಇಂತಹ ಶಾಲೆಗಳನ್ನು ಗುರುತಿಸಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.

ಕನ್ನಡ ಕ್ರೈಸ್ತರ ಸಮಸ್ಯೆ

ಕಳೆದ ಐದು ದಶಕಗಳಂದ ಕನ್ನಡ ಕ್ರೈಸ್ತರು ಕರ್ನಾಟಕದ ಚಚರ್‌ುಗಳಲ್ಲಿ ಆಡಳಿತ ಮತ್ತು ಆರಾಧನೆಯಲ್ಲಿ ಕನ್ನಡ ಬಳಸಬೇಕೆಂದು ಹೋರಾಡುತ್ತ ಬಂದಿದ್ದಾರೆ. ಚಚರ್‌ುಗಳಲ್ಲಿ ಕನ್ನಡ ಅಧಿಕೃತ ಭಾಷೆಯಾಗಬೇಕು. ಕರ್ನಾಟಕದಲ್ಲಿ ಗುರುಗಳ ತರಬೇತಿಗಾಗಿ ಒಂದು ಪ್ರಾದೇಶಿಕ ಗುರುಮಠ ಆಗಬೇಕು. ಕನ್ನಡ ಕ್ರೈಸ್ತ ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸುತ್ತೇನೆ.

ಇದೇ ಸಂದರ್ಭದಲ್ಲಿ ಕನ್ನಡದ ನೆಲ, ಜಲ ಮತ್ತು ಭಾಷೆಗಾಗಿ ಹೋರಾಟ ನಡೆಸುತ್ತಿರುವ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಹೂಡಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.

ವಲಸೆ ಸಮಸ್ಯೆ

ಸಂವಿಧಾನದಲ್ಲಿ ಭಾರತದ ಪ್ರಜೆ ದೇಶದ ಯಾವುದೇ ಪ್ರದೇಶಕ್ಕೆ ಹೋಗಿ ನೆಲೆಸಲು ಅವಕಾಶವಿರುವುದರಿಂದ ವಲಸೆಗಾರರನ್ನು ತಡೆಯುವಂತಿಲ್ಲ. ಆದರೆ ವಲಸೆ ಬಂದ ಜನ ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಆದರೆ ವಲಸೆ ಬಂದವರು ಹಲವಾರು ವರ್ಷಗಳಿಂದ ಇಲ್ಲಿ ನೆಲೆಸಿದ್ದರೂ ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಅರಿಯದಿರುವುದು ದುರದೃಷ್ಟಕರ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗಿದ್ದಾರೆ. ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿ ಮೆರೆಯಬೇಕಾಗಿದ್ದ ಕನ್ನಡ ಇಂದು ತಾಯ್ನಾಡಿನಲ್ಲಿಯೇ ತಬ್ಬಲಿಯಾಗಿದೆ. ಪರಭಾಷಿಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು. ನಾಡಿನ ಎಲ್ಲೆಡೆ ಕನ್ನಡ ರಾರಾಜಿಸಬೇಕು. ಕಣ್ಣಿಗೆ ಕಾಣಲಿ ಕನ್ನಡ, ಕಿವಿಗೆ ಕೇಳಲಿ ಕನ್ನಡ ಎಂಬ ಘೋಷಣೆ ನಿಜವಾಗಬೇಕು. ಸಂವಿಧಾನ ಕತರ್‌ೃ ಡಾ. ಬಿ.ಆರ್. ಅಂಬೇಡ್ಕರ್ ಅವರು ವಲಸೆಯ ಬಗ್ಗೆ ಹೇಳಿರುವ ಮಾತು ಗಮನಾರ್ಹವಾಗಿದೆ; ’ಭಾರತದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಉದ್ಯೋಗ, ಶಿಕ್ಷಣ, ವ್ಯಾಪಾರ ಇತ್ಯಾದಿ ಕಾರಣಗಳಿಂದ ಹೋಗುವುದಕ್ಕೆ ಮತ್ತು ನೆಲಸುವುದಕ್ಕೆ ಎಲ್ಲರಿಗೂ ಅವಕಾಶವಿದೆ. ಹೀಗೆ ಬಂದವರು ಆ ಸ್ಥಳದ ಸಾಮಾಜಿಕ, ಸಾಂಸ್ಕೃತಿಕ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗಬೇಕು’ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ನಗರಗಳಲ್ಲಿ ಕನ್ನಡಿಗರು ಹೃದಯ ಭಾಗದಿಂದ ಅಂಚಿಗೆ ಸರಿಯುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನ್ನಡಿಗರ ಫಲವತ್ತಾದ ಜಮೀನುಗಳನ್ನು ಕೇರಳ ಮತ್ತು ಆಂಧ್ರದಿಂದ ಬಂದವರು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಭೂಮಾಲೀಕರಾಗಿದ್ದ ಕನ್ನಡಿಗರು ತಮ್ಮ ನೆಲದಲ್ಲೇ ಕೃಷಿಕಾಮರ್‌ಿಕರಾಗಿ ದುಡಿಯುತ್ತಿದ್ದಾರೆ. ದಿನೇ ದಿನೇ ಈ ವಲಸೆಯು ಸೃಷ್ಟಿಸುತ್ತಿರುವ ಆತಂಕಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಸರ್ಕಾರ ಒಂದು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚನೆ ಮಾಡುವುದು ಸೂಕ್ತ.

ಮೌಢ್ಯ ವಿರೋಧ

ಬೆತ್ತಲೆಸೇವೆ ಮಾಡುವುದು, ಜೀವಂತ ವ್ಯಕ್ತಿಯ ಬೆನ್ನಿಗೆ ಕಬ್ಬಿಣದ ಕೊಂಡಿಯನ್ನು ಸಿಕ್ಕಿಸಿ ಅವನ ದೇಹವನ್ನು ಸುಮಾರು ಹದಿನೈದು ಅಡಿ ಮೇಲಕ್ಕೇರಿಸಿ ಸಿಡಿ ಎಂದು ನೇತಾಡಿಸುವ ಮೌಢ್ಯ ಸಂಪೂರ್ಣವಾಗಿ ಇಲ್ಲವಾಗಬೇಕಾಗಿದೆ. ಕೆಲವು ಗ್ರಾಮಗಳಲ್ಲಿ, ಸ್ತ್ರೀಯರನ್ನು ಅವರ ಮಾಸಿಕ ದೈಹಿಕ ಬದಲಾವಣೆಯ ಕಾರಣಕ್ಕಾಗಿ ಮತ್ತು ಗಭರ್‌ಿಣಿಯರು, ಬಾಣಂತಿಯರನ್ನು ಸೂತಕವೆಂಬ ನೆಪವೊಡ್ಡಿ ಊರಹೊರಗೆ ಇರಿಸುವ ಪದ್ಧತಿ ಇನ್ನೂ ರೂಢಿಯಲ್ಲಿದೆ. ಇದನ್ನು ತಪ್ಪಿಸಲು ಈ ಬುಡಕಟ್ಟು ಮಹಿಳೆಯರು ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯವನ್ನು ಪಡೆಯುವಂತೆ ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಇದಲ್ಲದೆ ಒಂದು ಜಾತಿಯ ಜನರು ತಿಂದುಬಿಟ್ಟ ಎಂಜಲಿನ ಮೇಲೆ ಇನ್ನೊಂದು ಜಾತಿಯವರು ಹೊರಳಾಡುವುದು ಧರ್ಮವೂ ಅಲ್ಲ, ಆರೋಗ್ಯಕರವೂ ಅಲ್ಲ. ಈ ಬಗೆಯ ಅಂಧಶ್ರದ್ಧೆ, ಮೂಢನಂಬಿಕೆಗಳು ಎಲ್ಲಾ ಜಾತಿ, ಧರ್ಮಗಳಲ್ಲೂ ಇವೆ. ಮಾನವನಿಗೆ ನೈತಿಕಶಕ್ತಿ ಮತ್ತು ಮನೋಬಲ ಕೊಡುವ, ಧಾಮರ್‌ಿಕ ನಂಬಿಕೆ ಮತ್ತು ಆಚರಣೆಗಳನ್ನು ನಾನು ವಿರೋಧಿಸುವುದಿಲ್ಲ. ಮನುಷ್ಯನ ಘನತೆಯನ್ನು ಕುಗ್ಗಿಸುವ ಮೌಢ್ಯಾಚರಣೆಗಳನ್ನು ವಿರೋಧಿಸುತ್ತೇನೆ. ನನ್ನ ಆಕ್ಷೇಪಣೆ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮಗಳಲ್ಲಿರುವ ಮೌಢ್ಯತೆ ಅಳಿದು ಅಲ್ಲಿ ಮಾನವೀಯತೆ ನೆಲೆಗೊಳ್ಳಲೆಂದು ಆಶಿಸುತ್ತೇನೆ. ಇಂಥ ಕಂದಾಚಾರಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮೌಢ್ಯವಿರೋಧಿ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇನೆ.

ಅಸ್ಪೃಶ್ಯತೆ ಸಮಸ್ಯೆ

ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆಯ ಆಚರಣೆ, ಸುದ್ದಿಮಾಧ್ಯಮಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಮಾನವ, ಮಂಗಳಗ್ರಹವನ್ನು ತಲುಪುವ ಈ ಸಂದರ್ಭದಲ್ಲೂ ಸಾವಿರಾರು ಕುಗ್ರಾಮಗಳಲ್ಲಿ ಅಸ್ಪೃಶ್ಯತೆಯು ಆಚರಣೆಯಲ್ಲಿದ್ದು, ದಲಿತವರ್ಗದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದಂತಾಗಿದೆ. ಈ ವರ್ಗದವರನ್ನು ದೇವಾಲಯ, ಉಪಹಾರಗೃಹ, ಸಾರ್ವಜನಿಕ ಬಾವಿಗಳಿಂದ ದೂರ ಇಡಲಾಗಿದೆ. ಇವರಿಗೆ ಕ್ಷೌರವನ್ನು ನಿರಾಕರಿಸಿದ ಘಟನೆಗಳೂ ವರದಿಯಾಗುತ್ತಿವೆ. ಅಸ್ಪೃಶ್ಯತೆ ಅಳಿಯಬೇಕೆನ್ನುವ ಗಾಂಧಿ, ಅಂಬೇಡ್ಕರ್ ಅವರುಗಳ ಕನಸು ನನಸಾಗಬೇಕಾಗಿದೆ. ಊರಿನ ಶಾನುಭೋಗ, ಪಟೇಲ, ಗೌಡ, ತೋಟಿ, ನೀರುಗಂಟಿ, ತಳವಾರರ ಮಕ್ಕಳು ಮೇಲು ಕೀಳೆನ್ನದೆ ಒಂದೇ ಪಂಕ್ತಿಯಲ್ಲಿ ಕುಳಿತು ದಲಿತ ತಾಯಿಯೊಬ್ಬಳು ತಯಾರಿಸಿದ ಬಿಸಿಯೂಟವನ್ನು ಸಂತೋಷದಿಂದ ಊಟ ಮಾಡುವ ಸನ್ನಿವೇಶ ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಉಂಟಾಗಲಿ ಎಂದು ಆಶಿಸುತ್ತೇನೆ. ಆ ಸುದಿನ ಬಹುದೂರ ಇಲ್ಲವೆಂಬ ಆತ್ಮವಿಶ್ವಾಸ ನನಗಿದೆ. ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ದಲಿತವರ್ಗದವರು ಜಾಗೃತವಾಗುವುದರ ಜೊತೆಗೆ ಅಸ್ಪೃಶ್ಯತಾ ನಿವಾರಣಾ ಚಳುವಳಿಗೆ ಮೇಲ್ವರ್ಗದ ಯುವಕರೂ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ. ಕನ್ನಡವೇ ನಮ್ಮ ಜಾತಿ, ಕನ್ನಡವೇ ನಮ್ಮ ಧರ್ಮ, ಕನ್ನಡವೇ ನಮ್ಮ ದೇವರು ಎಂಬ ಉದಾತ್ತ ಭಾವನೆ ಜನಮನದಲ್ಲಿ ಮೂಡಲೆಂದು ಹಾರೈಸುತ್ತೇನೆ.

ಮಹಿಳೆಯರ ಮೇಲೆ ದೌರ್ಜನ್ಯ

ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ದುರದೃಷ್ಟಕರ. ಘನತೆ ಗೌರವದಿಂದ ಸಮಾಜದಲ್ಲಿ ತಲೆ ಎತ್ತಿ ಬಾಳಬೇಕಾದ ನಮ್ಮ ಸಹೋದರಿಯರು ನಿತ್ಯವೂ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಸ್ತ್ರೀಭ್ರೂಣಹತ್ಯೆ ಅನಾಗರೀಕ ಕೃತ್ಯ. ಇದರಿಂದ ಹೆಣ್ಣುಗಂಡಿನ ಜನಸಂಖ್ಯೆಯ ಅನುಪಾತದಲ್ಲಿ ಏರುಪೇರಾಗಿ ಸ್ತ್ರೀಕುಲ ಕಡಿಮೆಯಾಗುತ್ತಿರುವುದು ಅಪಮಾನಕರ ಸಂಗತಿಯಾಗಿದೆ. ನೋವನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳ ಗೋಳನ್ನು ಕೇಳುವವರೆ ಇಲ್ಲವಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ತಾಯಂದಿರು ಹಾಡಿದ ಒಂದು ತ್ರಿಪದಿ ನೆನಪಾಗುತ್ತಿದೆ;

ಹೆಣ್ಣಿನ ಗೋಳಟ್ಟಿ ಬನ್ನೀಯ ಮರಬೆಂದೊ
ಅಲ್ಲಿ ಸನ್ಯಾಸಿ ಮಠಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೊ


ಈ ತ್ರಿಪದಿ ಈಗಲೂ ಪ್ರಸ್ತುತವೆಂದು ನನ್ನ ಭಾವನೆ. ಈ ಅತ್ಯಾಚಾರಿಗಳು ಎಷ್ಟೇ ಶ್ರೀಮಂತರಾಗಿರಲಿ, ಪ್ರಭಾವಶಾಲಿಗಳಾಗಿರಲಿ ನ್ಯಾಯಾಂಗ ಅವರಿಗೆ ಉಗ್ರಶಿಕ್ಷೆ ವಿಧಿಸಬೇಕೆಂದು ಕೋರುತ್ತೇನೆ.

ಕರ್ನಾಟಕ ಮತ್ತು ರೈಲ್ವೆ

ರೈಲು ಮತ್ತು ರಸ್ತೆಗಳು ನಾಡಿನ ಜೀವನಾಡಿಯಿದ್ದಂತೆ. ಸಾರಿಗೆ ಕ್ಷೇತ್ರದಲ್ಲಿ ಪ್ರಗತಿ ಇದೆ ಎಂದಾದರೆ ನಾಡು ಪ್ರಗತಿ ಪಥದಲ್ಲಿದೆ ಎಂದರ್ಥ. ಅದರಲ್ಲೂ ರೈಲುಗಳು ಬೃಹತ್ ಪ್ರಮಾಣದಲ್ಲಿ ಸರಕು, ಸಾಮಗ್ರಿಗಳನ್ನು ಕಮ್ಮಿ ಖಚರ್‌ಿನಲ್ಲಿ ಒಟ್ಟಿಗೆ ಸಾಗಿಸುವ ಸಾಧನಗಳಾಗಿವೆ. ಹಾಗೇ ಹೆಚ್ಚು ಜನರನ್ನು ಕಡಿಮೆ ಪ್ರಯಾಣ ದರದಲ್ಲಿ ಕೊಂಡೊಯ್ಯುತ್ತದೆ. ಒಂದು ರಾಜ್ಯದ ಪ್ರಗತಿಯು ಅದರ ರೈಲು ಮಾರ್ಗದ ಬಳಕೆಯಲ್ಲಿ ಅಡಗಿದೆ. ರೈಲ್ವೆಯಲ್ಲಿ ಕರ್ನಾಟಕವು ಅತೀ ಹಿಂದುಳಿದ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದೆ. ರಾಷ್ಟ್ರದಲ್ಲಿ 68008 ಕಿ.ಮೀ.ರೈಲು ಇದ್ದು ಕರ್ನಾಟಕದಲ್ಲಿ 3072 ಕಿ.ಮೀ. ರೈಲು ಮಾರ್ಗವಿದೆ.ಅಂದರೆ ಶೇ. 5.3% ಭೌಗೋಳಿಕ ಪ್ರದೇಶ ಹೊಂದಿರುವ ಕರ್ನಾಟಕವು ಶೇ. 3.95 ರಷ್ಟು ರೈಲು ಮಾರ್ಗವನ್ನು ಮಾತ್ರ ಹೊಂದಿದೆ. ಕೆಲವು ಜಿಲ್ಲಾ ಕೇಂದ್ರಗಳಿಗೆ, 80 ತಾಲ್ಲೂಕು ಕೇಂದ್ರಗಳಿಗೆ ರೈಲ್ವೆ ಸಂಪರ್ಕವಿಲ್ಲ. ಕೊಡಗು ಜಿಲ್ಲೆಯಲ್ಲಿ 1.ಕಿ.ಮೀ. ರೈಲು ಮಾರ್ಗವೂ ಇಲ್ಲ.

ದೇಶದಲ್ಲಿ ಪ್ರತಿ ಸಾವಿರ ಚ.ಕಿ.ಮೀ.ಗೆ 19.27 ಕಿ.ಮೀ. ರೈಲು ಹಳಿಗಳಿದ್ದರೆ, ಕರ್ನಾಟಕದಲ್ಲಿ 15.96 ಮಾತ್ರ. ಪಕ್ಕದ ತಮಿಳುನಾಡಿನಲ್ಲಿ 32.30, ಕೇರಳದಲ್ಲಿ 27, ಆಂಧ್ರಪ್ರದೇಶದಲ್ಲಿ 19.97 ರೈಲ್ವೆ ಹಳಿಗಳಿವೆ. ಪಕ್ಕದ ಎಲ್ಲಾ ರಾಜ್ಯಗಳು ರಾಷ್ಟ್ರದ ಸರಾಸರಿಗಿಂತ ಮೇಲಿವೆ. ರೈಲ್ವೆ ವಿದ್ಯುತ್ತೀಕರಣ ವಿಚಾರದಲ್ಲೂ ಅಷ್ಟೆ. ರಾಷ್ಟ್ರದ ಸರಾಸರಿ ಶೇ. 29.94 ಮಾರ್ಗ ವಿದ್ಯುತ್ತೀಕರಣಗೊಂಡಿದ್ದರೆ, ಕರ್ನಾಟಕದಲ್ಲಿ ಕೇವಲ ಶೇ. 4.59 ಆಗಿದ್ದು ರಾಷ್ಟ್ರದಲ್ಲೇ ಕೊನೆ ಸ್ಥಾನದಲ್ಲಿದೆ. 1914ರಲ್ಲಿ ಸರ್ವೇಕ್ಷಣ ಆದ ಚಿಕ್ಕಮಗಳೂರು, ಹಾಸನ ಮಾರ್ಗ ಇನ್ನೂ ಕಾಗದದ ಮೇಲೆ ಉಳಿದಿದೆ. ರಾಜ್ಯ ಸರ್ಕಾರ ರೈಲ್ವೆ ವಿಚಾರದಲ್ಲಿ ಏನಾಗಬೇಕು ಎಂಬ ಬಗ್ಗೆ ಒಂದು ನೀಲನಕಾಶೆಯನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು. ರಾಜಧಾನಿಯಿಂದ ವಿಶ್ವವಿಖ್ಯಾತ ಶ್ರವಣಬೆಳಗೊಳಕ್ಕೆ ರೈಲು ಮಾರ್ಗ ಇಲ್ಲ ಎಂಬುದು ಅಪಮಾನದ ಸಂಗತಿ. ಎರಡು ದಶಕದಿಂದ ಈ ಮಾರ್ಗದ ಕಾಮಗಾರಿ ನಡೆಯುತ್ತಲೇ ಇದೆ. ಈ ಇತಿಮಿತಿಗಳ ನಡುವೆಯೂ ಶ್ರೀ ಜಾಫರ್ ಷರೀಫ್ ಮತ್ತು ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಆಗಿರುವ ಕೆಲಸ ಶ್ಲಾಘನೀಯ.

ಅಂಚೆ ಚೀಟಿ

ಭಾಷೆ, ಸಂಸ್ಕೃತಿ, ರಾಷ್ಟ್ರ, ಜನಾಂಗಗಳನ್ನು ಸಮರ್ಥವಾಗಿ ಪರಿಚಯಿಸುವಲ್ಲಿ ಅಂಚೆ ಚೀಟಿಗಳು ಅತೀ ಮಹತ್ವದ ಪಾತ್ರವನ್ನು ವಹಿಸುತ್ತವೆ. ದುರಂತವೆಂದರೆ ಎಲ್ಲಾ ಕ್ಷೇತ್ರಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವಂತೆ ಕರ್ನಾಟಕ ಅಂಚೆ ಚೀಟಿ ಪ್ರಕಟಣೆಯಲ್ಲಿಯೂ ಕಡೆಗಣಿಸಲ್ಪಟ್ಟಿದೆ. ಭಾರತವು ಸ್ವಾತಂತ್ರ್ಯ ಬಂದ ನಂತರ 2300ಕ್ಕೂ ಹೆಚ್ಚು ಅಂಚೆ ಚೀಟಿಗಳನ್ನು ಹೊರತಂದಿದೆ. ಅದರಲ್ಲಿ ಕರ್ನಾಟಕದ ಅಂಚೆ ಚೀಟಿಗಳು 40ಕ್ಕಿಂತ ಕಡಿಮೆ. ಅಂದರೆ ವರ್ಷಕ್ಕೆ ಒಂದು ಅಂಚೆ ಚೀಟಿಯೂ ಹೊರಬಂದಿಲ್ಲ. ಪಕ್ಕದ ತಮಿಳುನಾಡಿಗೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಅಂಚೆ ಚೀಟಿಗಳು ಹೊರ ಬಂದಿವೆ. ದಯಾನಿಧಿ ಮಾರನ್ ಅವರು ಕೇಂದ್ರದಲ್ಲಿ ಸಂಪರ್ಕ ಖಾತೆ ಸಚಿವರಾಗಿದ್ದಾಗ ಒಂದೇ ವರ್ಷದಲ್ಲಿ 22 ಅಂಚೆ ಚೀಟಿಗಳು ಹೊರಬಂದವು. ಈ ಅಂಚೆ ಚೀಟಿಯ ಪ್ರಕಟಣೆಯಲ್ಲಿ ಹೇಗೆ ತಾರತಮ್ಯ ನಡೆಯುತ್ತಿದೆ ಎಂಬುದಕ್ಕೆ ಇದು ಒಂದು ನಿದರ್ಶನ. ಜ್ಞಾನಪೀಠ ಪುರಸ್ಕೃತರ ಅಂಚೆ ಚೀಟಿಗಳು ಪ್ರಕಟಣೆಯಾದಾಗ ಕನ್ನಡದ ಆರು ಸಾಹಿತಿಗಳನ್ನು ಒಂದೇ ಅಂಚೆ ಚೀಟಿಯಲ್ಲಿ ಸೇರಿಸಲಾಗಿತ್ತು. ಆದರೆ ಮಲಯಾಳಂನ ಜ್ಞಾನಪೀಠ ಪ್ರಶಸ್ತಿ ಪುರಸ್ಕ ೃತರ ಸಾಹಿತಿಗಳ ಅಂಚೆ ಚೀಟಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪ್ರಕಟಿಸಲಾಗಿತ್ತು. ವಿವಿಧ ಸ್ಮಾರಕಗಳು ಮತ್ತು ಶತಮಾನೋತ್ಸವ ಸಂದರ್ಭದ ಅಂಚೆ ಚೀಟಿಗಳನ್ನು ಹೊರತರುವಾಗ ಕರ್ನಾಟಕವನ್ನು ಕಡೆಗಣಿಸಲಾಗಿದೆ. ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಬೇಕೆಂದು ಕೋರುತ್ತೇನೆ.

ಆರೋಗ್ಯ

ಶಿಕ್ಷಣದಂತೆ ಆರೋಗ್ಯವೂ ಬಡವರ ಕೈಗೆ ಎಟುಕದ ವಸ್ತುವಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಉದ್ಭವಗೊಂಡಿರುವ ಹೈಟೆಕ್ ಆಸ್ಪತ್ರೆಗಳು ವಿಧಿಸುವ ಮೊತ್ತವನ್ನು ಭರಿಸುವ ಶಕ್ತಿ ಜನಸಾಮಾನ್ಯರಿಗೆ ಇಲ್ಲವಾಗಿದೆ. ಮಧ್ಯಮವರ್ಗದವರು, ಕೆಳಮಧ್ಯಮವರ್ಗದವರು ಮತ್ತು ಬಡವರು ಈ ಆಸ್ಪತ್ರೆಗಳಿಗೆ ಹೋಗಲು ಹೆದರುತ್ತಾರೆ. ಈ ಆಸ್ಪತ್ರೆಗಳ ಮೇಲೆ ಸರ್ಕಾರದ ಯಾವುದೇ ನಿಯಂತ್ರಣ ಇಲ್ಲ. ಯಮನು ಪ್ರಾಣವನ್ನು ಮಾತ್ರ ಹರಣ ಮಾಡಿದರೆ, ಈ ಆಸ್ಪತ್ರೆಗಳು ಪ್ರಾಣ ಮತ್ತು ಹಣ ಎರಡನ್ನೂ ಹರಣ ಮಾಡುತ್ತವೆ. ಹಿಂದೆ ಬಡಜನರು ಮದುವೆ, ಹಬ್ಬಗಳಿಗಾಗಿ ಸಾಲ ಮಾಡಿ ಜೀವನ ಪೂತರ್‌ಿ ಸಾಲ ತೀರಿಸಲು ಹೆಣಗಾಡುತ್ತಿದ್ದರು. ಇಂದು ಜನಸಾಮಾನ್ಯರು ಆಸ್ಪತ್ರೆಗಳ ವೆಚ್ಚವನ್ನು ಭರಿಸಲು ಸಾಲಮಾಡುವ ಪರಿಸ್ಥಿತಿ ಉಂಟಾಗಿದೆ. ಇಂತಹ ಈ ಹೈಟೆಕ್ ಆಸ್ಪತ್ರೆಗಳ ಮೇಲೆ ಸರ್ಕಾರ ನಿಗಾ ವಹಿಸಬೇಕೆಂದು ವಿನಂತಿಸುತ್ತೇನೆ.

ರೈತರ ಗೋಳು

ಗ್ರಾಮೀಣ ಪ್ರದೇಶದಲ್ಲಿ ವ್ಯವಸಾಯ ಮಾಡುವ ರೈತನ ಬಾಳು ಗೋಳಾಗಿದೆ. ಅವನು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ದಕ್ಕುತ್ತಿಲ್ಲ. ರೈತರು ತಾವು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಲೋಡುಗಟ್ಟಲೆ ಬೀದಿಗೆ ತಂದು ಚೆಲ್ಲಿ ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕೃಷಿಗಾಗಿ ವಿವಿಧ ಬ್ಯಾಂಕುಗಳಲ್ಲಿ ತನ್ನ ಜಮೀನನ್ನು ಅಡವಿಟ್ಟ ರೈತ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಗಂಭೀರ ಸಂಗತಿಯಾಗಿದೆ. ರೈತನು ದೇಶದ ಬೆನ್ನೆಲುಬು ಎಂದು ಪ್ರಾಜ್ಞರು ಹೇಳಿದ್ದರೂ, ರೈತನ ಬೆನ್ನೆಲುಬು ಮುರಿದು ಹೋಗಿರುವುದನ್ನು ಕಂಡು ವಿಷಾದವಾಗುತ್ತದೆ. ಇಂದು ರೈತರ ಮಕ್ಕಳು ರೈತರಾಗಲು ಇಷ್ಟಪಡುತ್ತಿಲ್ಲ. ಇಂದು ಹಳ್ಳಿಗಳಲ್ಲಿ ಕೃಷಿಕಾಮರ್‌ಿಕರೂ ಸಿಗುತ್ತಿಲ್ಲ. ಕೃಷಿಯೋಗ್ಯ ಭೂಮಿಯಲ್ಲೂ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಹೊಲಗದ್ದೆಗಳಲ್ಲಿ ದುಡಿಯುವುದಕ್ಕಿಂತ, ನಗರಗಳಿಗೆ ವಲಸೆ ಹೋಗುವುದೆ ಲೇಸೆಂದು ಗ್ರಾಮೀಣ ಯುವಕರು ಪಟ್ಟಣ ಸೇರುತ್ತಿದ್ದಾರೆ. ಒಂದೊಂದು ಹಳ್ಳಿಯೂ ಕ್ರಮೇಣ ಒಂದೊಂದು ವೃದ್ಧಾಶ್ರಮವಾಗುತ್ತಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಆಹಾರದ ಕ್ಷಾಮ ಉಂಟಾಗಿ, ತುತ್ತು ಅನ್ನಕ್ಕಾಗಿ ಜನ ಪರದಾಡುವ ಕಾಲ ಬಂದರೆ ಆಶ್ಚರ್ಯವಿಲ್ಲ. ರಾಜ್ಯದಲ್ಲಿ ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬನ್ನು ಸಕ್ಕರೆ ಕಾಖರ್‌ಾನೆಗಳಿಗೆ ಸರಬರಾಜು ಮಾಡಿ ಅದರಿಂದ ಬರಬೇಕಾದ ಹಣಕ್ಕೆ ಭಿಕ್ಷುಕರ ರೀತಿಯಲ್ಲಿ ನಿತ್ಯ ಕೈಯೊಡ್ಡಿ ಧರಣಿ, ಚಳುವಳಿಯ ಮೂಲಕ ಬೇಡುತ್ತಿರುವ ಸ್ಥಿತಿ ಕಂಡರೆ ಹೃದಯ ಕರಗುತ್ತದೆ. ಕಹಿಯಾಗಿರುವ ಕಬ್ಬು ಬೆಳೆಗಾರರ ಬದುಕು ಸಿಹಿಯಾಗಲೆಂದು ಆಶಿಸುತ್ತೇನೆ.

ರೈತರಿಗೆ ಕೊಡಲಾಗುವ ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುತ್ತಿವೆ. ಇವುಗಳನ್ನು ಆ ಕಂಪನಿಗಳು ಉತ್ಪಾದನಾ ವೆಚ್ಚಕ್ಕಿಂತ ನೂರು ಪಟ್ಟು ಹೆಚ್ಚು ಬೆಲೆಗೆ ಮಾರುತ್ತಿವೆ. ಈ ಬಾಬ್ತುಗಳಿಗೆ ಸರ್ಕಾರ ನೀಡುವ ಸಬ್ಸಿಡಿ ಹಣ ಪರೋಕ್ಷವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಹೋಗುತ್ತಿದೆ. ಕೃಷಿಯನ್ನು ಕೈಗಾರಿಕೆ ಎಂದು ಭಾವಿಸಿ, ರೈತನು ಬೆಳೆದ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಲೆಯನ್ನು ನಿಗದಿ ಪಡಿಸುವ ತನಕ ಅನ್ನದಾತನ ಕಷ್ಟಕ್ಕೆ ಕೊನೆಯೇ ಇಲ್ಲ. ಕೃಷಿಯನ್ನು ಪ್ರೋತ್ಸಾಹಿಸಲು ರೈತನಿಗೆ ಬೇಕಾದ ನೀರು, ಗೊಬ್ಬರ ಮತ್ತು ವಿದ್ಯುತ್ತನ್ನು ಸರ್ಕಾರ ಒದಗಿಸಲು ಕೂಡಲೇ ಕ್ರಮ ಜರುಗಿಸಬೇಕು. ಸರ್ಕಾರ ಆಧುನಿಕ ತಂತ್ರಜ್ಞಾನವುಳ್ಳ ಶೈತ್ಯಾಗಾರಗಳನ್ನು ನಿಮರ್‌ಿಸಬೇಕು. ರೈತನ ಉತ್ಪನ್ನಗಳು ಹಾಳಾಗದಂತೆ ಅವುಗಳಿಗೆ ರಕ್ಷಣೆ ಸಿಗಬೇಕು. ಈ ವಿಷಯದಲ್ಲಿ ಸರ್ಕಾರಕ್ಕೆ ಹಾಲು ಉತ್ಪಾದಕರ ಮಹಾಮಂಡಲ ಮಾದರಿಯಾಗಬೇಕು.

ನೀರಾವರಿ

ಕರ್ನಾಟಕ ಏಕೀಕರಣವಾಗಿ ಆರು ದಶಕಗಳು ಸಮೀಪಿಸುತ್ತಿದ್ದರೂ ಇಂದಿಗೂ ನೀರಾವರಿ ಕ್ಷೇತ್ರದಲ್ಲಿನ ನಮ್ಮ ಸಾಧನೆ ತೀರಾ ನಗಣ್ಯವಾದದ್ದು. ಭಾರತದಲ್ಲಿ ರಾಜಸ್ಥಾನವನ್ನು ಬಿಟ್ಟರೆ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಬಂಜರು ಪ್ರದೇಶ ಇದೆ ಎನ್ನುವುದು ವಾಸ್ತವದ ಸಂಗತಿ. ರಾಷ್ಟ್ರದ ಸರಾಸರಿ ನೀರಾವರಿ ಶೇ.48 ರಷ್ಟಿದ್ದರೆ ಕರ್ನಾಟಕದಲ್ಲಿ ಶೇ.23 ಎನ್ನುವುದನ್ನು ನಾವು ಗಮನಿಸಿದಾಗ ನಮ್ಮ ಸಾಧನೆ ಸಾಲದು ಎನಿಸುತ್ತದೆ. ನಮ್ಮ ಈ ಹಿನ್ನೆಡೆಗೆ ಅಂತರರಾಜ್ಯ ಜಲವಿವಾದಗಳು ಸ್ವಲ್ಪ ಮಟ್ಟಿಗೆ ಕಾರಣವಾದರೂ ಆಳುವವರು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ತೋರಿಸಿದ ವಿಳಂಬ ನೀತಿ ಮುಖ್ಯ ಕಾರಣವೆಂದರೆ ತಪ್ಪಾಗಲಾರದು. ರಾಜ್ಯದಲ್ಲಿ ಕೃಷಿಗೆ ಯೋಗ್ಯವಾದ 107 ಲಕ್ಷ ಹೆಕ್ಟೇರ್ ಜಮೀನಿದೆ. ಅದರಲ್ಲಿ 55 ಲಕ್ಷ ಹೆಕ್ಟೇರ್ಗಳಿಗೆ ಮಾತ್ರ ನೀರಾವರಿ ಒದಗಿಸುವ ಜಲಸಂಪತ್ತಿದೆ. ದುರಂತವೆಂದರೆ ನಾವು ಕೇವಲ 24.91 ಲಕ್ಷ ಹೆಕ್ಟೇರುಗಳಿಗೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ದೇಶದ ಒಟ್ಟು ಬರ ಪೀಡಿತ ಪ್ರದೇಶದಲ್ಲಿ ಕರ್ನಾಟಕದ ಪಾಲು ಶೇ.23. ನಾವು ಕಟ್ಟಿದ ಜಲಾಶಯಗಳಲ್ಲಿ ನಿಂತಿರುವ ನೀರನ್ನು ಸರಿಯಾಗಿ ಬಳಸದೆ ಇರುವುದರಿಂದ ಈ ನೀರು ಅನ್ಯರ ಪಾಲಾಗುತ್ತಿದೆ.

ಕರ್ನಾಟಕದಲ್ಲಿ ಹರಿಯುವ ಪಶ್ಚಿಮವಾಹಿನಿಯ ನದಿಗಳ ನೀರನ್ನು ಬರಪೀಡಿತ ಪ್ರದೇಶಗಳಿಗೆ, ವ್ಯವಸಾಯಕ್ಕೆ, ಕುಡಿಯುವುದಕ್ಕೆ ಬಳಸಲು ನದಿಗಳ ಜೋಡಣೆ ಕೆಲಸವನ್ನು ತ್ವರಿತವಾಗಿ ಮಾಡಬೇಕಾಗಿದೆ. ನೆಲದ ಮೇಲಿರುವ ಜೀವಸಂಕುಲಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ ಪರಿಸರವನ್ನೂ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ. ನೆಹರು ಅವರು ಅಣೆಕಟ್ಟುಗಳನ್ನು ’ಆಧುನಿಕ ದೇವಾಲಯ’ ಗಳೆಂದು ಕರೆದರು. ಆದರೆ ಈಗ ಕಟ್ಟಿರುವ ಅಣೆಕಟ್ಟುಗಳಲ್ಲಿ ನಿಂತಿರುವ ನೀರನ್ನು ರೈತರ ಭೂಮಿಗೆ ಹರಿಸುವ ಉಪಕಾಲುವೆಗಳ ಕೆಲಸ ತ್ವರಿತಗತಿಯಲ್ಲಿ ಆಗಿ ರೈತರಿಗೆ ಅದು ಆತ್ಮಸ್ಥೈರ್ಯವನ್ನು, ಆಥರ್‌ಿಕ ಬಲವನ್ನು ತಂದುಕೊಡಬೇಕಾಗಿದೆ. ಆ ದಿಕ್ಕಿನಲ್ಲಿ ಕೂಡಲೇ ಕೆಲಸ ಮಾಡಬೇಕಾಗುತ್ತದೆ.

ಕೆರೆಕಟ್ಟೆಗಳ ಸಂರಕ್ಷಣೆ

ಕರ್ನಾಟಕದ ಹಲವಾರು ಪ್ರದೇಶ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿದೆ. ಕೆರೆಕಟ್ಟೆಗಳ ಸಂರಕ್ಷಣೆ ಮತ್ತು ಸಂವರ್ಧನೆ ಅನಿವಾರ್ಯವಾಗಿದೆ. ಮಳೆಗಾಲದಲ್ಲಿ ಬಿದ್ದ ಮಳೆಯ ನೀರನ್ನು ಕೃಷಿಗೆ, ಕುಡಿಯುವುದಕ್ಕೆ, ಜಾನುವಾರುಗಳಿಗೆ ದಕ್ಕಲು ಕೆರೆಕಟ್ಟೆಗಳು ಅತ್ಯವಶ್ಯಕವಾಗಿವೆ. ಆದರೆ ಕರ್ನಾಟಕದಲ್ಲಿ ಕೆರೆಕಟ್ಟೆಗಳು ಒತ್ತುವರಿಯಿಂದಾಗಿ ಮತ್ತು ಹೂಳು ತುಂಬಿಕೊಂಡು ಅವನತಿಯ ಹಾದಿ ಹಿಡಿದಿವೆ. ಹೂಳೆತ್ತುವ ಮತ್ತು ಒತ್ತುವರಿ ತೆರವುಗೊಳಿಸುವ ಕಾರ್ಯ ಸರ್ಕಾರದಿಂದ ಶೀಘ್ರವಾಗಿ ಆಗಬೇಕಾಗಿದೆ. ಇದು ಅಂತರ್ಜಲ ವೃದ್ಧಿಗೆ ಮುಖ್ಯ ಕಾರಣವೂ ಆಗುತ್ತದೆ. ನದಿಗಳಿಂದ, ಅಣೆಕಟ್ಟುಗಳಿಂದ ಕೆರೆಕಟ್ಟೆಗಳಿಗೆ, ಕಾಲುವೆಗಳಿಗೆ ನೀರು ಹರಿಸಿ ತುಂಬಿಸುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಇದನ್ನು ಕಾರ್ಯಗತಗೊಳಿಸಬೇಕು. ಇಲ್ಲದಿದ್ದರೆ ರೈತಕಾರ್ಮಿಕರು ಗುಳೇ ಹೋಗುವುದನ್ನು ನಿಲ್ಲಿಸಲಾಗುವುದಿಲ್ಲ. ಆದ್ದರಿಂದ ಗೋಕಟ್ಟೆಗಳು, ಗೋಮಾಳಗಳು ಮತ್ತು ಕೆರೆಕಟ್ಟೆಗಳ ರಕ್ಷಣೆಯ ಮೂಲಕ ನೀರಾವರಿ ಸೌಲಭ್ಯವನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಇದರ ಜೊತೆಗೆ ಪಶುಸಂಗೋಪನೆ, ಹೈನುಗಾರಿಕೆ, ರೇಷ್ಮೆಗಾರಿಕೆ ಮತ್ತು ತೋಟಗಾರಿಕೆಯನ್ನು ಪ್ರೋತ್ಸಾಹಿಸಬೇಕು. ಇದರಿಂದ ರೈತರ ಬದುಕಿಗೆ ಪಯರ್‌ಾಯ ಆಥರ್‌ಿಕ ಸಂಪನ್ಮೂಲಗಳನ್ನು ಕಲ್ಪಿಸಿದಂತಾಗುತ್ತದೆ. ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ಕ್ರಿಯಾಶೀಲವಾಗಿ ಕೃಷಿಕರು ಎದುರಿಸುತ್ತಿರುವ ಹಲವಾರು ಬಿಕ್ಕಟ್ಟುಗಳಿಗೆ ಪರಿಹಾರ ಕಂಡು ಹಿಡಿಯಬೇಕು.

ಶಾಲಾ ಜಮೀನು ಗೇಣಿದಾರರು

ಕರ್ನಾಟಕ ರಾಜ್ಯದಲ್ಲಿ ಕಳೆದ ಶತಮಾನದ 1954-55ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆಂಗಲ್ ಹನುಮಂತಯ್ಯನವರು ಪ್ರಾರಂಭಿಸಿದ ಭೂ-ವಿದ್ಯಾದಾನದ ಚಳುವಳಿಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಿಗೆ ದಾನವಾಗಿ ಬಂದಿದ್ದ ಸುಮಾರು ಹತ್ತುಸಾವಿರ ಎಕರೆ ಶಾಲಾಜಮೀನುಗಳನ್ನು ಸುಮಾರು ಮೂರೂವರೆ ಸಾವಿರ ಕುಟುಂಬಗಳು ಗೇಣಿಸಾಗುವಳಿ ಮಾಡುತ್ತಿವೆ. ಈ ಶಾಲಾಜಮೀನುಗಳ ಖಾತೆ ಸಂವಿಧಾನಬಾಹಿರವಾಗಿ ರಾಜಪ್ರಮುಖರ ಹೆಸರಿನಲ್ಲಿವೆ. ಈ ಶಾಲಾಜಮೀನಿನ ಗೇಣಿದಾರರು ಆಯಾ ಸರ್ಕಾರಿ ಶಾಲೆಗಳಿಗೆ ಅಲ್ಪಸ್ವಲ್ಪ ಗೇಣಿ ಹಣವನ್ನು ಈಗಲೂ ಕಟ್ಟುತ್ತಿದ್ದಾರೆ. ಈ ಎಲ್ಲಾ ಗೇಣಿಸಾಗುವಳಿಯಲ್ಲಿರುವ ಶಾಲಾಜಮೀನುಗಳು ಶಾಲೆಗಳಿಂದ 4-5 ಕಿ.ಮೀ. ದೂರದಲ್ಲಿದ್ದು, ಶಾಲೆಗಳ ಬಳಕೆಗೆ ಸಾಧ್ಯವಾಗದ ಜಮೀನುಗಳಾಗಿವೆ. ಈ ಶಾಲೆಗಳಿಗೆ ಸರ್ಕಾರ, ಆಟದಮೈದಾನ, ಪೀಠೋಪಕರಣಗಳು ಮತ್ತು ಶಿಕ್ಷಕರಿಗೆ ವೇತನವನ್ನು ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾಜಮೀನುಗಳ ಗೇಣಿದಾರರಿಂದ ಬರುವ ಗೇಣಿ ಹಣದ ಅಗತ್ಯ ಈಗ ಯಾವ ಶಾಲೆಗಳಿಗೂ ಇಲ್ಲ. ಉಳುವವನೆ ಹೊಲದ ಒಡೆಯ ಎಂಬ ಐತಿಹಾಸಿಕ ಕಾಗೋಡು ಸತ್ಯಾಗ್ರಹದ ಸಿದ್ಧಾಂತದ ಅಡಿಯಲ್ಲಿ 1974ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಅವರು ಜಾರಿಗೆ ತಂದ ಕರ್ನಾಟಕ ಭೂಸುಧಾರಣಾ ಕಾನೂನಿನ ಅಡಿಯಲ್ಲಿ ಈ ಶಾಲಾ ಜಮೀನಿನ ಗೇಣಿದಾರರಿಗೆ ಭೂಒಡೆತನದ ಹಕ್ಕುಪತ್ರ ನೀಡದೆ ಅನ್ಯಾಯ ಮಾಡಲಾಗಿದೆ.

ರಾಜ್ಯದಲ್ಲಿ ಕಳೆದ ಹಲವಾರು ದಶಕಗಳಿಂದ ಜಾರಿಯಲ್ಲಿರುವ ಅವೈಜ್ಞಾನಿಕ ಹಾಗು ಅಮಾನವೀಯ ಶಾಲಾಜಮೀನು ಗೇಣಿಪದ್ಧತಿಯನ್ನು ರದ್ದುಪಡಿಸಿ, ಈ ಶಾಲಾಜಮೀನು ಗೇಣಿದಾರರಿಗೆ ಕೂಡಲೇ ಈ ಜಮೀನುಗಳ ಹಕ್ಕುಪತ್ರವನ್ನು ನೀಡಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಹೆಚ್.ಎಸ್. ದೊರೆಸ್ವಾಮಿಯವರು, ಕಾಗೋಡು ಹೋರಾಟದ ರೂವಾರಿ ಶ್ರೀ ಗಣಪತಿಯಪ್ಪನವರು, ಹಿರಿಯ ಸಾಹಿತಿ ಡಾ. ಯು.ಆರ್. ಅನಂತಮೂತರ್‌ಿಯವರು, ನಿವೃತ್ತ ಹೈಕೋಟರ್್ ನ್ಯಾಯಮೂತರ್‌ಿ ಶ್ರೀ ಎನ್.ಡಿ. ವೆಂಕಟೇಶ್ರವರು, ರೈತ ಮುಖಂಡರಾದ ಶ್ರೀ ಕಡಿದಾಳ್ ಶಾಮಣ್ಣನವರು, ಹೋರಾಟಗಾರರಾದ ಶ್ರೀ ಕಲ್ಲೂರುಮೇಘರಾಜ್ ಮುಂತಾದವರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಸರ್ಕಾರ ಶಾಲಾಜಮೀನು ಗೇಣಿದಾರರ ವಿಚಾರದಲ್ಲಿ ಮೀನಾಮೇಷ ಎಣಿಸದೆ ಕೂಡಲೇ 1974ರ ಕರ್ನಾಟಕ ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ತಂದು ಅರ್ಹ ಶಾಲಾಜಮೀನು ಗೇಣಿದಾರರಿಗೆ ಹಕ್ಕುಪತ್ರ ನೀಡಿ ಅದಿಭೋಗದಾರಿಕೆಯನ್ನು ಮಂಜೂರು ಮಾಡಲು ಮನವಿಮಾಡುತ್ತೇನೆ.

ಅರಣ್ಯವಾಸಿ ಗಿರಿಜನರು

ನಮ್ಮ ರಾಜ್ಯದ ಅರಣ್ಯಗಳಲ್ಲಿ ಹಲವು ಶತಮಾನಗಳಿಂದ ವಾಸವಾಗಿರುವ ಅರಣ್ಯವಾಸಿ ಗಿರಿಜನರ ಬದುಕು ದುಸ್ತರವಾಗಿದೆ. ಅರಣ್ಯಕಾಯ್ದೆಯ ನೆಪದಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಂಡು ಕಾಡಿನ ಮೂಲನಿವಾಸಿಗಳನ್ನು ಅಲ್ಲಿಂದ ಎತ್ತಂಗಡಿಮಾಡುವ ಕಾರ್ಯ ನಡೆಯುತ್ತಿದೆ. ಕಾಡಿನಲ್ಲೇ ಇರಲು ಇಷ್ಟಪಟ್ಟವರ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಅವರು ಕಾಡಿನಲ್ಲಿ ಇರಬಹುದು, ಆದರೆ ಅವರು ಜೀವನಾಧಾರವಾದ ಅರಣ್ಯದ ಸಂಪನ್ಮೂಲಗಳನ್ನು ಬಳಸುವಂತಿಲ್ಲ. ಹಣ್ಣುಗಳನ್ನು ಬಿಟ್ಟ ಮರವನ್ನು ಅವರು ದೂರನಿಂತು ಕಣ್ತುಂಬ ನೋಡಬಹುದೆ ಹೊರತು ಹಣ್ಣುಗಳನ್ನು ಕೀಳುವಂತಿಲ್ಲ. ಕೊಳದಲ್ಲಾಡುವ ಮೀನುಗಳನ್ನು ನೋಡಬಹುದೆ ಹೊರತು ಅವುಗಳನ್ನು ಹಿಡಿದು ಆಹಾರವಾಗಿ ಬಳಸುವಂತಿಲ್ಲ. ಜೇನನ್ನು ನೋಡಬಹುದೆ ಹೊರತು ಇವರಿಗೆ ಅದನ್ನು ಕಿತ್ತು ಸವಿಯುವ ಸೌಭಾಗ್ಯ ಇಲ್ಲ. ಅರಣ್ಯಕಾಯ್ದೆ ಬಡಗಿರಿಜನರ ಮೇಲೆ ಅರಣ್ಯನ್ಯಾಯವನ್ನು ಹೇರಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಈ ಅರಣ್ಯ ಕಾಯ್ದೆಯಲ್ಲಿ ಸರ್ಕಾರವು ಬದಲಾವಣೆ ತರುವ ಬಗ್ಗೆ ಚಿಂತಿಸಬೇಕಾಗಿದೆ. ಅರಣ್ಯವಾಸಿಗಳನ್ನು ಮುಖ್ಯವಾಹಿನಿಗೆ ತರುವ ಹೆಸರಿನಲ್ಲಿ ನಡೆಯುತ್ತಿರುವ ಪರಿಕಲ್ಪನೆಯಲ್ಲೂ ಬದಲಾವಣೆಯಾಗಬೇಕಾಗಿದೆ.

ವಿಶೇಷ ಆರ್ಥಿಕ ವಲಯ

ರಾಜ್ಯದಲ್ಲಿ ವಿಶೇಷ ಆಥರ್‌ಿಕ ವಲಯದ ಹೆಸರಿನಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಬೃಹತ್ ಕೈಗಾರಿಕೆಗಳ ಪಾಲಾಗುತ್ತಿದೆ. ಇದಕ್ಕೆ ಕೊಟ್ಟ ಪರಿಹಾರವೂ ಅಲ್ಪ. ಈ ವಿಶೇಷ ಆಥರ್‌ಿಕ ವಲಯಕ್ಕೆ ಬಲಿಯಾಗಿ ಭೂಮಿಯನ್ನು ಕಳೆದುಕೊಂಡು ಬೀದಿಪಾಲಾದವರ ಗೋಳು ಹೇಳತೀರದು. ಕೈಗಾರಿಕೆ ಬರಬೇಕೆನ್ನುವುದು ನಿಜ; ಆದರೆ ಕೃಷಿಭೂಮಿ ಕೈಗಾರಿಕೆಗಳ ಪಾಲಾಗುವ ಭರದಲ್ಲಿ ಧ್ವನಿ ಇಲ್ಲದವರ ಮತ್ತು ರೈತರ ತುಂಡುಭೂಮಿಯನ್ನು ಸರ್ಕಾರ ಕಸಿದುಕೊಳ್ಳುತ್ತಿರುವುದು ಖಂಡನೀಯ. ಸಾಮಾಜಿಕವಾಗಿ ಹಿಂದುಳಿದ, ಧ್ವನಿಯೂ ಇಲ್ಲದ ರೈತ ಕುಟುಂಬಗಳಿಂದ ಭೂಮಿ ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸಿ ಅವರು ಗುಳೇ ಹೋಗುವುದಕ್ಕೆ ಕಾರಣವಾಗಿರುವುದು ವಿಪರ್ಯಾಸ.

ಸಮಗ್ರ ಕರ್ನಾಟಕ ದರ್ಶನ

ಕರ್ನಾಟಕವು ದೇಶದಲ್ಲೇ ಕಲೆ, ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಶ್ರೀಮಂತವಾದ ರಾಜ್ಯ. ಇದರ ರಾಜಧಾನಿ ಬೆಂಗಳೂರು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ವಾಣಿಜ್ಯ ನಗರವಾಗಿ ಐತಿಹಾಸಿಕ ನೆನಪುಗಳನ್ನು ಇಟ್ಟುಕೊಂಡಿದೆ. ಈ ನಗರ ವ್ಯಾಪಾರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಶಿಕ್ಷಣ ಮತ್ತು ವಾಸ್ತುಶಿಲ್ಪ ಮುಂತಾದ ಕ್ಷೇತ್ರಗಳಲ್ಲಿ ವಿಶ್ವದ ಗಮನವನ್ನು ಸೆಳೆದಿದೆ. ದೇಶವಿದೇಶಗಳಿಂದ ಬರುವ ಪ್ರವಾಸಿಗರನ್ನು ಆಕಷರ್‌ಿಸಿದೆ. ಇಂತಹ ಬೆಂಗಳೂರು ಅತ್ಯಗತ್ಯವಾಗಿ ಕನ್ನಡೀಕರಣಗೊಳ್ಳಬೇಕಾಗಿದೆ. ಆದ್ದರಿಂದ ಬೆಂಗಳೂರು ಸಮಗ್ರ ಕರ್ನಾಟಕದ ಅನನ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೇಂದ್ರವಾಗಬೇಕಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಸಮಗ್ರ ಕರ್ನಾಟಕವನ್ನು ಬಿಂಬಿಸುವ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಬೇಕೆಂದು ಒತ್ತಾಯಿಸುತ್ತೇನೆ.

ಈ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಕುರಿತಂತೆ ಅನೇಕ ಮಹತ್ವದ ಸಂಗತಿಗಳನ್ನು ವಿದ್ವಾಂಸರು ಚರ್ಚಿಸಲಿದ್ದಾರೆ. ಅವರ ಚಿಂತನೆಗಳನ್ನು ಕೇಳುವ ಕುತೂಹಲ ತಮ್ಮಂತೆ ನನಗೂ ಇದೆ. ಆದ್ದರಿಂದ ತಮ್ಮೆಲ್ಲರಿಗೂ ವಂದಿಸಿ ನನ್ನ ಈ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

ಜೈ ಭಾರತ್! ಜಯ ಕರ್ನಾಟಕ
1 ಫೆಬ್ರವರಿ 2015 – ಡಾ. ಸಿದ್ಧಲಿಂಗಯ್ಯ
ಶ್ರವಣಬೆಳಗೊಳ, ಹಾಸನ ಜಿಲ್ಲೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com