ಹ್ಯಾಂಗ ಮರೆಯಲಿ ನಿನ್ನ...: ಮತ್ತೆ ಮತ್ತೆ ಕಾಡುವ ಹಳೇ ಲವರ್
ಮನಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ, ಹಾಗೂ ಇಂಗ್ಲಿಶ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶುಭಾಶಯ ಹೊಂದಿದ್ದಾರೆ. ಟಿವಿ ಮಾಧ್ಯಮದಲ್ಲಿ ಸುದ್ದಿ ನಿರೂಪಕಿಯಾಗಿ ಹಾಗೂ ಕಾರ್ಯಕ್ರಮ ನಿರೂಪಕಿಯಾಗಿ ಅನುಭವವೂ ಬೆನ್ನಿಗಿದೆ. ಅಪ್ಪ ತರೋ ಚಾಕ್ಲೆಟ್ ಗೆ ಕಾಯೋದು, ಅಜ್ಜನ ಮೀಸೆ (ವಟ್ಟಕಾಕದ ಕೋಡಿನ ಹೂವು) ಹಿಡಿಯೋದು... ಫ್ರೆಂಡ್ಸ್ ಬೈಕ್ ಸಿಕ್ಕಿದ್ರೆ ಜಾಲಿ ರೈಡ್ ಹೋಗೋದು ತುಂಬಾ ಇಷ್ಟದ ಸಂಗತಿಗಳು.
ಈಗಿನ ಜೆನರೇಷನ್ ತುಂಬಾ ಫಾಸ್ಟ್. ಗಂಡು ಹೆಣ್ಣಿನ ನಡುವೆ ಲವ್ವೂ ಫಾಸ್ಟ್ ಆಗಿ ಶುರುವಾಗುತ್ತೆ, ಬ್ರೇಕ್ ಅಪ್ಪೂ ಅಷ್ಟೇ ಫಾಸ್ಟ್ ಆಗಿ ನಡೆದು ಬಿಡುತ್ತೆ. ಮುರಿದು ಬಿದ್ದ ಯಾವುದೇ ಸಂಬಂಧಗಳಿಗೂ ತೀರಾ ಪ್ರಾಮುಖ್ಯತೆ ನೀಡುವುದಿಲ್ಲ ಈಗಿನ ಕಾಲದ ಜನತೆ. ಹಳೇ ಪ್ರೀತಿಯನ್ನು ನೆನೆಸ್ಕೊಂಡು ಈ ಕ್ಷಣದ ಸುಖ ಹಾಳು ಮಾಡಿಕೊಳ್ಳುವವನು ಕೋಡಂಗಿಯಂತೆ ಕಾಣುತ್ತಾನೆ. ಅಡ್ವಾನ್ಸ್ ಡ್ ಆಗಿರೋ ಈಗಿನ ಜೆನೆರೇಷನ್ ಬ್ರೇಕ್ ಅಪ್ ಆದ ಕೆಲವೇ ಘಂಟೆಗಳಲ್ಲಿ ಹೊಸ ಸಂಬಂಧವನ್ನು ಅವರು ಶುರು ಮಾಡಿ ಬಿಡಬಲ್ಲರು. ವಿಷಾದ ಅಂದರೆ ಇವರಲ್ಲೇ ಹೆಚ್ಚು ಪ್ರೀತಿಯ ಭದ್ರತೆ ಇಲ್ಲದಿರುವುದು ಕಂಡು ಬರುತ್ತದೆ.
ಕಾಲ ಎಷ್ಟೇ ಬದಲಾದರೂ, ಜೆನೆರೇಷನ್ ಅದೆಷ್ಟೇ ಫಾರ್ ವಾರ್ಡ್ ಆಗಿ ಮುಂದುವರೀಲಿ, ಪ್ರೀತಿಯ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಮೊದಲ ಪ್ರೀತಿಯನ್ನು ಪಕ್ಕನೆ ಮರೆತು ಬಿಡೋದೂ ಸುಲಭವಲ್ಲ.. ಹಾಗಾಗಿಯೇ ಲವ್ ಫೈಲ್ಯೂರ್ ಆದವರು ಬೇರ್ಪಟ್ಟ ಪ್ರೀತಿಯ ನೆನಪಿನಿಂದ ಹೊರಬರಲಾರದವರು ಕಳೆದ ಪ್ರೀತಿಯ ನೆನಪಲ್ಲೇ ಒದ್ದಾಡುತ್ತಾರೆ.
ಪ್ರೀತಿಸುವ ಇಬ್ಬರ ನಡುವೆಯೂ ಪ್ರೀತಿಯ ಸಮಾನಾಂತರ ಭಾವನೆಗಳು ಇರಬೇಕೆಂದೇನಿಲ್ಲ. ಒಬ್ಬ ಸಂಗಾತಿ ಪ್ರಾಮಾಣಿಕವಾಗಿ ಪ್ರೀತಿಸಿದರೆ ಮತ್ತೊಬ್ಬ ಸಂಗಾತಿಯ ಪ್ರೀತಿಯೂ ಪ್ರಾಮಾಣಿಕವಾಗಿರುತ್ತದೆಂದು ಹೇಳಲಾಗುವುದಿಲ್ಲ. ಆ ಸಂದರ್ಭ ಇಬ್ಬರಲ್ಲಿ ಉಂಟಾದ ಬಿರುಕು ಪ್ರಾಮಾಣಿಕವಾಗಿ ಪ್ರೀತಿಸಿದ ಸಂಗಾತಿಗೆ ಶಾಶ್ವತ ನೋವು ನೀಡಬಲ್ಲದು. ಭಾವನೆಗಳಿಲ್ಲದ ವ್ಯಕ್ತಿ ಹೆಳೆಯದನ್ನು ಮರೆತು ಹಾಯಾಗಿರಬಹುದು. ಆದರೆ ಪ್ರಾಮಾಣಿಕಾಗಿ ಪ್ರೀತಿಸಿದ ವ್ಯಕ್ತಿ ಆ ನೋವಿನಿಂದ ಹೊರಬರಲು ಸಾಧ್ಯವಾಗದೆಯೂ ಇರಬಹುದು..
ಹಳೇ ಪ್ರೇಮಿ ಕಾಡಲು ಕಾರಣಗಳಿವೆ
- ಭೂತದಂತೆ ಕಾಡುವ ನೆನಪು- ಸಂಗಾತಿಯೊಂದಿಗೆ ಕಳೆದ ಮಧುರ ಕ್ಷಣಗಳು ಹಾಗೂ ಕಹಿ ಘಟನೆಗಳೆರಡನ್ನೂ ಪದೇ ಪದೇ ಮೆಲುಕು ಹಾಕುವುದು
- ಹಿಂದಿನ ಸಂಗಾತಿ ನೀಡಿದ ಉಡುಗೊರೆಗಳು
- ತನ್ನ ಸಂಗಾತಿಗೆ ಹೊಸ ಸಂಗಾತಿಯ ಸ್ನೇಹ ದೊರಕಿರುವ ಕುರಿತು ಚಿಂತೆ
- ತನ್ನ ಬಗೆಗಿನ ಕೀಳರಿಮೆ
- ಯೋಚಿಸಲು ಸಮಯಾವಕಾಶ
- ಹೊಸ ಸ್ನೇಹಕ್ಕೆ ಮನಸು ತೆರೆದುಕೊಳ್ಳದೇ ಇರುವುದು
- ಹೊಸ ಸಂಗಾತಿಯೊಂದಿಗೆ ಬಾಂಧವ್ಯ ಚೆನ್ನಾಗಿಲ್ಲದೇ ಇರುವುದು, ಹೊಸ ಪ್ರೇಮಿಯೊಂದಿಗೂ ಕಹಿ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರೆ, ಹಳೆಯ ಸಂಗಾತಿಯನ್ನು ಮೀರಿಸುವಂತಹಾ ಮಾನಸಿಕ ತೃಪ್ತಿ ಹೊಸ ಸಂಗಾತಿಯೊಡನೆ ಸಿಗದೇ ಹೋದಾಗ ಹಳೆಯ ಪ್ರೇಮಿ ನೆನಪಿಗೆ ಬಂದು ಕಾಡುತ್ತಾನೆ.
- ನಕಾರಾತ್ಮಕ ಚಿಂತನೆ
- ಒಂಟಿತನದ ಭಯ
- ಹಳೆಯ ನೆನಪುಗಳಿಂದ ಮುಕ್ತರಾಗಲು ಪ್ರಯತ್ನಿಸದೇ ಇರುವುದು - ಸೋಶಿಯಲ್ ಮೀಡಿಯ, ಹಳೆಯ ಫೋಟೋ ಸಂದೇಶಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು, ಹಳೆಯ ಸಂಗಾತಿಯ ಚಲನ ವಲಗಳ ಬಗ್ಗೆ ಗಮನವಿರಿಸುವುದು, ಇತರರಿಂದ ಅವರ ವಿಷಯಗಳನ್ನು ಕೇಳಿ ತಿಳಿದುಕೊಳ್ಳುವುದು
ಅದರಿಂದ ಪಾರಾಗುವ ಮಾರ್ಗ
ಒಂದೇ ವಿಚಾರಕ್ಕೆ ಅಂಟಿಕೊಳ್ಳುವ ಅಭ್ಯಾಸವನ್ನು ನಿಧಾನಕ್ಕೆ ಕಡಿಮೆ ಮಾಡಿಕೊಳ್ಳಿ. ಒಂದೇ ನೋವಿಗೆ ಅದೆಷ್ಟು ಬಾರಿ ಅಳಲು ಸಾಧ್ಯ ಹೇಳಿ? ಸಂಬಂಧ ಹಳಸಿದಾಗ ದೂರಾಗುವ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಲ್ಲದೆ ಆ ನೋವಿನ ಪರಿಸ್ಥಿತಿಯನ್ನು ಸ್ವೀಕರಿಸುವುದೂ ಅನಿವಾರ್ಯ.
- ಭಾವನೆಗಳನ್ನು ಯಾವುದೇ ಕಾರಣಕ್ಕೂ ನಿಗ್ರಹಿಸುವತ್ತ ಚಿತ್ತ ಮಾಡದಿರಿ. ಪ್ರೀತಿ, ಪ್ರೀತಿಯಿಂದ ಆನಂದ, ಬೇರ್ಪಡುವಿಕೆ, ವಿರಸ, ನೋವು, ಅದರಿಂದ ಉದ್ವೇಗ, ಈ ಭಾವನೆಗಳು ಸಾಮಾನ್ಯವೆಂದು ಅರ್ಥ ಮಾಡಿಕೊಳ್ಳಿ.
- ತಿರಸ್ಕರಿಸಿ ಹೋದ ಆ ವ್ಯಕ್ತಿಯನ್ನು ಅಪ್ಪಿಕೊಳ್ಳಲು ಬಯಸಬೇಡಿ. ಹೃದಯದಲ್ಲಿ ಅವರನ್ನು ಕ್ಷಮಿಸಲು ಯತ್ನಿಸಿ.
- ನಿಮ್ಮ ಭಾವನೆಗಳನ್ನು ಗೌರವಿಸುವ, ಮಾತುಗಳನ್ನು ತಾಳ್ಮೆಯಿಂದ ಆಲಿಸಬಲ್ಲ, ಬೆಂಬಲಿಸಬಲ್ಲ, ಆಶಾವಾದಿ ಸ್ನೇಹಿತರ ಜೊತೆ ಹೆಚ್ಚು ಕಾಲ ಕಳೆಯುವುದು ಸೂಕ್ತ.
- ಇಂತಹ ಸಂದರ್ಭಗಳನ್ನು ಸ್ವತಃ ಅನುಭವಿಸಿ ಯಶಸ್ವಿಯಾಗಿ ಹೊರಬಂದ ಜನರ ಒಡನಾಟ ಈ ಸಂದರ್ಭ ನಮಗೆ ಸ್ಫೂರ್ತಿಯಾಗುತ್ತದೆ.
- ಪ್ರೀತಿಸಿದ ವ್ಯಕ್ತಿಯನ್ನು ಮರೆತು ಬಿಡುವ ಯೋಚನೆ ಆರಂಭದಲ್ಲಿ ತುಂಬಾ ನೋವು ನೀಡಬಹುದು. ಆದರೆ ಈ ಘಟನೆ ಮುಂದೆ ಸಂಗಾತಿಯ ಆಯ್ಕೆ ಹೇಗಿರಬೇಕು ಎಂಬುದರ ಸ್ಪಷ್ಟ ಕಲ್ಪನೆ ನೀಡುತ್ತದೆ. ಇದನ್ನು ಜೀವನದ ಪಾಠವಾಗಿ ಸ್ವೀಕರಿಸುವುದೇ ಒಳಿತು.
- ಹಳೆಯ ಸ್ನೇಹಿತರು, ಸಂಬಂಧಿಕರನ್ನು ಭೇಟಿಯಾಗಿ.
- ಹಳೆಯ ಹವ್ಯಾಸಗಳನ್ನು ಮುಂದುವರೆಸಿ.
- ನಮ್ಮ ಬೆಳವಣಿಗೆಯ ಮೇಲೆ ನಾವು ತೊಡಗಿಸಿಕೊಳ್ಳುವುದರಿಂದ ನೋವಿನ ನೆನಪುಗಳು ಮಸುಕಾಗುತ್ತವೆ. ಜೀವನವೆಂಬ ಸುಲಭ ರಸ್ತೆಯಲ್ಲಿ ವಿಘಟನೆ ಕೇವಲ ಒಂದು ಹಂಪ್ ಎಂದು ಅರ್ಥವಾಗಿ ಬಿಡುತ್ತದೆ.
ತಡೆಯಾಗದಿರಲಿ ಪ್ರೇಮ ವೈಫಲ್ಯ
ಆಹಾರಾಭ್ಯಾಸ ಉತ್ತಮಗೊಳಿಸಿ. ಚೆನ್ನಾಗಿ ನಿದ್ರೆ ಮಾಡಿ. ವ್ಯಾಯಾಮ ನೃತ್ಯ ಯೋಗ ಏರೋಬಿಕ್ಸ್ ಮೊದಲಾದುವುದಗಳನ್ನು ರೂಢಿಸಿಕೊಳ್ಳಿ. ಹೊಸ ಸ್ಥಳಗಳಿಗೆ ಭೇಟಿ ನೀಡಿ. ನಿಮ್ಮ ಸ್ವಂತ ಜೀವನದಲ್ಲಿ ಹೊಸ ದೃಷ್ಠಿಕೋನಗಳನ್ನು ಬೆಳೆಸಿಕೊಳ್ಳಿ. ನೀವು ಕಳೆದುಕೊಂಡಿದ್ದನ್ನು ಸಂಭ್ರಮಿಸುವ ಬದಲು ನಿಮ್ಮಲ್ಲಿರುವುದಕ್ಕೆ ಕೃತಜ್ಞರಾಗಿರಬೇಕು.
ಕಳೆದ ಪ್ರೀತಿಯ ಎಲ್ಲಾ ನೆನಪುಗಳನ್ನು ಮನೆ, ಮನಸು, ಮುಖ್ಯವಾಗಿ ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕಿ. ಪ್ರೀತಿ ಎಂಬುದು ಅದ್ಭುತ ಭಾವನೆ. ಅದನ್ನು ಬಿಡಬೇಡಿ. ಒಂದು ಕೆಟ್ಟ ಅನುಭವ ಪ್ರೀತಿ ಮಾಡುವುದಕ್ಕೇ ತಡೆಯಾಗಬಾರದು. ಈ ನೋವಿನ ಅನುಭವದಿಂದ ಮತ್ತೊಬ್ಬ ನಿಜವಾದ ಸಂಗಾತಿ ದೊರಕಿದರೆ ಆ ಸಮಯದಲ್ಲಿ ನೀವು ಮತ್ತಷ್ಟು ಬಲಶಾಲಿಗಳಾಗಿ ಬುದ್ಧಿವಂತಿಕೆಯಿಂದ ಸಂಬಂಧವನ್ನು ನಿಭಾಯಿಸಬಲ್ಲವರಾಗಿರುತ್ತೀರಿ. ಜೀವನ ಸಂಪೂರ್ಣತೆ ಇರುವುದು ಪ್ರೀತಿಯಿಂದ ಬದುಕುವಲ್ಲಿ ಹಾಗೂ ನಿಜವಾದ ಪ್ರೀತಿಯನ್ನು ಕಂಡುಕೊಂಡು ಸಂಬಂಧಗಳನ್ನು ಭದ್ರಗೊಳಿಸುವಲ್ಲಿ. ಭದ್ರ ಪ್ರೀತಿ ಸಿಕ್ಕಿದ್ರೆ ಜೀವನವೂ ಭದ್ರ. ಸಂಬಂಧಗಳೂ ಭದ್ರ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ