ಬಾಡಿದ ಬೆಟ್ಟದ ಹೂ, ಕಮರಿದ ಹೊಸ ಬೆಳಕು: ಅಪ್ಪು ಜೊತೆಗೆ ಬಾಲ್ಯದ ನೆನಹುಗಳ ಮೆರವಣಿಗೆ 

ಚಿಕ್ಕಂದಿನಲ್ಲಿ ಮದ್ರಾಸಿಗೆ ಶಾಲಾ ಪ್ರವಾಸ ಹೋದಾಗ ನಮ್ಮನ್ನು ಅಣ್ಣಾವ್ರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅಣ್ಣಾವ್ರು ಇರಲಿಲ್ಲ ಅಂತ ಉಪಾಧ್ಯಾಯರು ನಿರಾಸೆಗೊಂಡಿದ್ದರು. ಲೋಹಿತ್ ಇದ್ದ. ಸುಮ್ಮನೇ ಹೊರಗೆ ಬಂದು ನಗುತ್ತಾ ಕೈ ಬೀಸಿ ಟಾಟಾ ಮಾಡಿ ಒಳಹೋದ. ಆ ಒಂದು ರಸನಿಮಿಷವನ್ನ ಕತೆ ಕಟ್ಟಿ ನಮ್ಮೂರಿನ ನೂರಾರು ಮಂದಿಗೆ ಹೇಳಿ ಹೊಟ್ಟೆ ಉರಿಸಿದ್ದೆವು.
ಪುನೀತ್ ರಾಜಕುಮಾರ್ ಬಾಲ್ಯದ ಫೋಟೊ
ಪುನೀತ್ ರಾಜಕುಮಾರ್ ಬಾಲ್ಯದ ಫೋಟೊ

ಲೇಖಕ: ಡಾ. ಮೃತ್ಯುಂಜಯ ಟಿ. ಡಿ

ನಂಗೆ ಅಪ್ಪು ಲೋಹಿತ್  ಆಗಿ ಇದ್ದಾಗಿನಿಂದ ಗೊತ್ತು. ನಂಗೂ ಆತನ ವಯಸ್ಸೆ ಆದ್ದರಿಂದ ಬೆಳದದ್ದು ಅವನೊಂದಿಗೆ. ಎಲ್ಲೋ ದೂರದ ಗದಗ್ ನಲ್ಲಿ, ತುಮಕೂರಿನಲ್ಲಿ ಅಚ್ಚ ಕನ್ನಡ ವಾತವರಣದಲ್ಲಿ ಬೆಳೆಯುತ್ತಿದ್ದ ನಾನ್ಯಾರು ಅಂತ specific ಆಗಿ ಅಪ್ಪುವಿಗೆ ಕೊನೆಗೂ ಗೊತ್ತಾಗಲಿಲ್ಲ. ಆತನ ಅಸಂಖ್ಯಾತ ಅಭಿಮಾನಿ ಕುಟುಂಬದ ಸದಸ್ಯ ಅಂತ ಗೋರಿಯಲ್ಲಿ ಮಲಗಿರುವ ಅಪ್ಪು ನಕ್ಕರೆ ನೆನಪಿಗೆ ಬಂದಿರುತ್ತೆ.

"ಅಮ್ಮಾ ಅಮ್ಮಾ ಯಾರೋ ಬಂದಿದಾರೆ."
"ಯಾರೂ ಇಲ್ಲ ಮರಿ . ನಾನು ನಿಮ್ಮವನೇ..'
ಚಿಕ್ಕಂದಿನಲ್ಲಿ ಹೊಸ ಬೆಳಕು ಚಿತ್ರದ ಈ ಸಂಭಾಷಣೆಯನ್ನು ಆಡಿಯೋ ಕ್ಯಾಸೆಟ್ ನಲ್ಲಿ ಅದಿನ್ನೆಷ್ಟು ಬಾರಿ ಕೇಳಿದಿನೋ ಗೊತ್ತಿಲ್ಲ. ಅದಿನ್ನೆಷ್ಟು ಅಪ್ಯಾಯಮಾನವಾಗಿ ಕೇಳಿಸುತ್ತಿತ್ತು ಆತನ ದನಿ. ಭಾಗ್ಯವಂತ ಸಿನಿಮಾದ ಗೋಳು, ಮಕ್ಕಳು ಸಹಿಸಲ್ಲ ಅಂತ ಅಮ್ಮ ಕರೆದುಕೊಂಡು ಹೋಗಿರಲಿಲ್ಲ. ಆದರೂ ಆ ಸಿನಿಮಾ ನೋಡಿಕೊಂಡು ಬಂದು ಕತೆ ಹೇಳುತ್ತಿದ್ದ ಗೆಳೆಯರ ವರ್ಣನೆಯಲ್ಲಿ ಸಿನಿಮಾ ಪೂರಾ ನೋಡಿದ್ದೆ. ಅಮ್ಮ ಸೀತಮ್ಮ, ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಹಾಡು ರೇಡಿಯೋದಲ್ಲಿ ಕೇಳಿ ಕೇಳಿ ಕಂಠ ಪಾಠವೇ ಆಗಿದ್ದವು.


ನಿನ್ನಯ ನುಡಿಯಲಿ ಜೇನಿನ ಹೊಳೆ

ನಾಲ್ಕನೇ ಕ್ಲಾಸಿನಲ್ಲಿ. ಗದಗ್ ನಲ್ಲಿ ಇನ್ನೂ TV ಬಂದಿರಲಿಲ್ಲ. ಆಗ ಚಲಿಸುವ ಮೋಡಗಳು ಮತ್ತು ಭಕ್ತ ಪ್ರಹ್ಲಾದ ನೋಡಿದ್ದು. ಅಮ್ಮ ನಮಗೆ Surprise ನೀಡಿ ಶಾಲೆ (ತೋಂಟದಾರ್ಯ ) ಯಿಂದ ಮಧ್ಯಾಹ್ನ ರಜಾ ಹಾಕಿಸಿ ಶಾಂತಿ ಥಿಯೇಟರ್ ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹೆಂಗಸರಿಗೆ ಬೇರೆಯಾಗಿ ಟಿಕೇಟ್ ಕೊಡ್ತಾ ಇದ್ದರು. ಅದಕ್ಕೆ ಟಿಕೇಟ್ ಸಿಕ್ಕಿದ್ದು, ಚಲಿಸುವ ಮೋಡಗಳು ಅಷ್ಟೊತ್ತಿಗಾಗಲೇ ಲೋಹಿತ್ ಮಾನಸಿಕವಾಗಿ ಗೆಳೆಯನಾಗಿದ್ದ. ನಮ್ಮದೇ ತದ್ರೂಪು ಅನಿಸುತ್ತಿದ್ದ. 
ಕಾಣದಂತೆ ಮಾಯವಾದನು, ಜೇನಿನ ಹೊಳೆಯೋ ಹಾಡು, ಅಂಬಿಕಾ ಮಾತಾಡುತ್ತಿದ್ದ ಸಾಬರ ಭಾಷೆ, ಲೋಹಿತ್ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳೋದು, ನಿನ್ನೆ ಮೊನ್ನೆ ನೋಡಿದಷ್ಟು ನಿಚ್ಚಳವಾಗಿ ನೆನಪಿದೆ. ಆ ಹಾಡಿನಿಂದಾಗಿ ಲೋಹಿತ್ ಶಾಶ್ವತವಾಗಿ ಕನ್ನಡ ಮಕ್ಕಳ ಮಿತ್ರನಾಗಿ ಹೋಗಿದ್ದ. ನನ್ನ ಹೆಸರು ಲೋಹಿತ್ ಅಂತ ಬದಲಿಸಿ ಅಂತ ಅಮ್ಮಂಗೆ ದುಂಬಾಲು ಬಿದ್ದಿದ್ದೆ. ಭಕ್ತ ಪ್ರಹ್ಲಾದ ಕೂಡ ಅಲ್ಲೇ ನೋಡಿದ್ದು, ಪರ್ಲಾದ ಅಂತಲೇ ನಾಲಿಗೆ ತಿರುಗದೇ ಕರೆಯುತ್ತಿದುದು.. ಅಣ್ಣಾವ್ರು ಲೆಕ್ಕಕ್ಕೆ ಇರಲಿಲ್ಲ ಆ ಸಿನಿಮಾದಲ್ಲಿ, ಉಗ್ರ ನರಸಿಂಹನ ಹಾಡಿ  ಶಾಂತಗೊಳಿಸಿ ನಮ್ಮನ್ನ ಸಹ ಭಯ ಮುಕ್ತರನ್ನಾಗಿ ಮಾಡಿದ್ದು ಲೋಹಿತ್.


ಭೂಮಿಗೆ ಬಂದ ದೇವಕಿ ಕಂದ

ಈ ಮಧ್ಯದಲ್ಲಿ ಭೂಮಿಗೆ ಬಂದ ಭಗವಂತ ಚಿತ್ರದ "ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನಾ ಕಾಪಾಡಲು" ಹಾಡು ಕೂಡ ಬಾಯಿಪಾಠವಾಗಿತ್ತು. ಕೃಷ್ಣ ವೇಷಧಾರಿಯಾದ ಲೋಹಿತ್ ಪೇಪರ್ ಕಟಿಂಗ್ ಸಿಕ್ಕಿ ವರುಷಗಟ್ಟಲೇ ನನ್ನ ಪುಸ್ತಕದ ಪುಟಗಳ ಮಧ್ಯೆ ಭದ್ರವಾಗಿ  ಕೊತಿತ್ತು. "ಈ ಪಾದವೂ ಮೈ ಸೋಕಲು ನನ್ನಲ್ಲಿ ಎಂಥ ಆನಂದವೋ" ಹಾಡಿನ ಸಾಲು ನೆನಸಿಕೊಂಡು ವಿನಾಕಾರಣ ಕೃಷ್ಣ ಭಕ್ತಿ ಹೆಚ್ಚಿಸಿಕೊಂಡಿದ್ದೆ. ಅಷ್ಟರಲ್ಲಿ ಅಪ್ಪನಿಗೆ ವರ್ಗವಾಗಿ ತುಮಕೂರಿಗೆ ಬಂದೆವು. ಮೊದಲ ಬಾರಿ TV ನೋಡಿದ್ದು ಅಲ್ಲೇ. ಅದಾಗಿಯೂ ಹೊಸ ಸಿನಿಮಾ ನೋಡಲು ಥಿಯೇಟರ್ ಗೆ ಬರಲೇಬೇಕಿತ್ತು.
ತುಮಕೂರಿನ ಗಾಯತ್ರಿ ಥಿಯೇಟರ್ ನಲ್ಲಿ "ಎರಡು ನಕ್ಷತ್ರಗಳು" ಇಬ್ಬಿಬ್ಬರು ಲೋಹಿತ್ ರನ್ನ ನೋಡಿ ರೋಮಾಂಚನಗೊಂಡು ಬಂದು ಶಾಲೆಯಲ್ಲಿ ಕತೆ ಹೇಳುತ್ತಿದ್ದ ಗೆಳೆಯರನ್ನ ನೋಡಿ ಅಮ್ಮನಿಗೆ ದುಂಬಾಲು ಬಿದ್ದು ಕರೆದುಕೊಂಡು ಹೋಗಿದ್ದು,
ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು
ಹಾಡು, ಫ್ಯಾಂಟಸಿ, ಲೋಹಿತನ ಕತ್ತಿವರಸೆ ಇನೇನು ಬೇಕಿತ್ತು.


ನಾಯಕರ ಅಭಿಮಾನಿಗಳೆಲ್ಲರಿಗೂ ಅಪ್ಪು ಅಚ್ಚುಮೆಚ್ಚು 

ಆಗೆಲ್ಲ ಗೆಳೆಯರಲ್ಲಿ ರಾಜ್ ಅಭಿಮಾನಿ, ವಿಷ್ಣು ಅಭಿಮಾನಿ' .ಅಂಬಿ ಅಭಿಮಾನಿ ಅಂತ ಮೂರು ಗುಂಪುಗಳಿದ್ದವು. (ಕನ್ನಡ ಮಾತ್ರ ಜಾಗತಿಕ ಭಾಷೆ ಅಂತ ನಂಬಿದ್ದ ಅಚ್ಚ ಕನ್ನಡದ ದಿನಗಳವು) ಸಣ್ಣ ಪುಟ್ಟ ಜಿದ್ದಾಜಿದ್ದಿ ಗೆಳೆಯರಲ್ಲಿ, ನಾಯಕನ ಚಿತ್ರವನ್ನ ಅಂಗಿ ಮೇಲೆ ಇಸ್ತ್ರಿ ಮಾಡಿ ಶಾಲೆಯಲ್ಲಿ ಒದೆ ತಿಂದರೂ ಬೀಗುತ್ತಿದ್ದೆವು. ಐದು ಮತ್ತು ಆರನೇ ಕ್ಲಾಸಿನ ಪುಟ್ಟ ಅಭಿಮಾನಿ ಸಂಘಗಳ ಚಿಕ್ಕ ಜಗಳಗಳು ದೊಡ್ಡದಾಗಿ ವರ್ಣಿಸಲ್ಪಡುತ್ತಿದ್ದವು.

ಲೋಹಿತ್ ಮಾತ್ರ ಮೂರೂ ಅಭಿಮಾನಿ ಸಂಘಗಳಿಂದ ಪ್ರೀತಿಸಲ್ಪಡುತ್ತಿದ್ದ. ಲೋಹಿತ್ ಗೂ ಅಣ್ಣಾವ್ರು ಗೂ ಸಂಭಂದ ಇಲ್ಲಿ ತರಬೇಡಿ ಅಂತ ಅಂಬಿ ವಿಷ್ಣು ಅಭಿಮಾನಿ ಮಕ್ಕಳು ಜಗಳವಾಡಿ ಅವನನ್ನ ಎಲ್ಲರವನನ್ನಾಗಿ ಮಾಡಿದ್ದರು. ನಾವೆಲ್ಲ ಒಮ್ಮತಕ್ಕೆ ಬರುತ್ತಿದುದು ಲೋಹಿತ್ ವಿಷಯದಲ್ಲಿ ಮಾತ್ರ. ಮಿಕ್ಕೆಲ್ಲಾ ಭಯಂಕರ ಜಗಳಗಳೇ.

ಆ ವರುಷ ಶಾಲಾ ಪ್ರವಾಸದಲ್ಲಿ ಮದ್ರಾಸ್ ಗೇ ಹೋದಾಗ ನಮ್ಮನ್ನು ಅಣ್ಣಾವ್ರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅಣ್ಣಾವ್ರು ಇರಲಿಲ್ಲ ಅಂತ ಉಪಾಧ್ಯಾಯರು ನಿರಾಸೆಗೊಂಡಿದ್ದರು. ಲೋಹಿತ್ ಇದ್ದ. ಸುಮ್ಮನೇ ಹೊರಗೆ ಬಂದು ನಗುತ್ತಾ ಕೈ ಬೀಸಿ ಟಾಟಾ ಮಾಡಿ ಒಳಹೋದ. ಆ ಒಂದು ರಸನಿಮಿಷವನ್ನ ಕತೆ ಕಟ್ಟಿ ಹೈಸ್ಕೂಲಿಗೆ ಬಂದರೂ ಹೇಳಿ ಧನ್ಯರಾಗುತ್ತಿದ್ದೆವು. ಆ ಮೂಲಕ ಪ್ರವಾಸಕ್ಕೆ ಬರದಿರುವವರ ಹೊಟ್ಟೆ ಉರಿಸಿದ್ದೆವು.


ನಂತರ ಬಂದಿದ್ದು ಯಾರಿವನು?

ಈ ಚಿತ್ರದ ಅಂತ್ಯವನ್ನ ಯಾರಿಗೂ ಹೇಳಬೇಡಿ ಅಂತ ಕೊನೆಯಲ್ಲಿ ತೋರಿಸಿದ್ದನ್ನ ಬಂದು ಶಾಲೆಯಲ್ಲಿ ಹೇಳಿ ಕುತೂಹಲ ಹೆಚ್ಚಿಸಿದ್ದರು.. ಗುಸು ಗುಸು ಅಂತ ಗುಟ್ಟು ಬಿಟ್ಟು ಕೊಟ್ಟಿದ್ದರು. ಆದರೇನು? ನನ್ನ ಉತ್ಸಾಹಕ್ಕೆ ಕಿಂಚಿತ್ ಭಂಗವಿರಲಿಲ್ಲ. ಮಾಮೂಲಿನಂತೆ ಅಮ್ಮನ ದುಂಬಾಲು. ಗಾಯತ್ರಿ ಟಾಕೀಸ್. ಮಿಡಲ್ ಕ್ಲಾಸ್ ಟಿಕೇಟ್. ಲೋಹಿತ್ ಕುದುರೆ ಸವಾರಿ, "ಕಣ್ಣಿಗೆ ಕಾಣುವ ದೇವರು ಎಂದರೇ ಅಮ್ಮನು ತಾನೇ' ಹಾಡು, ತೆರೆದ ಜೀಪಿನಲ್ಲಿ ಅಣ್ಣಾವ್ರ ಜೊತೆ 
"ಆಕಾಶದೇ ಹಾರಾಡುವ ಆನಂದದೇ ತೇಲಾಡುವ
ಆಸೆ ಇಂದು ನನಗಾಗಿದೆ
ಹೇಳು ನಿನಗೆ ಏನಾಗಿದೆ: ?" ಹಾಡು, ಸ್ವರ್ಗ ಅಲ್ಲೇ ಕಂಡಿತ್ತು.. 
ನಮ್ಮೊಳಗಿನ ಆಸೆಗಳ ಮೂರ್ತ ರೂಪವಾಗಿ ಲೋಹಿತ್ ಕಂಡಿದ್ದ. ಕುದುರೆ ಸವಾರಿ ಮಾಡಿದ್ದು ಲೋಹಿತ್ ಅಂದ್ರೇ ನಾನು ಎಂಬ ಸ್ಥಾಯಿ ಭಾವಕ್ಕೆ ಕಾರಣನಾಗಿದ್ದ. ಬಾಲ್ಯದ ಸಂತೋಷವನ್ನ.. ಮುಗ್ಧತೆಯನ್ನ 'ಸಾಹಸೀ ಭಾವವನ್ನ ನಮ್ಮೆಲ್ಲರಲ್ಲಿ ಉದ್ದೀಪಿಸಿದ್ದ ಲೋಹಿತ್. ಈ ಮಧ್ಯ ಬೆಟ್ಟದ ಹೂ ವಿನ ಕತೆಯೇ ಬೇರೆ.

ಶಾಂತಿ ಸಮಯದಲ್ಲಿ ನಮ್ಮ ಸಿನಿಮಾ ಕೋಟಾ ಇದ್ದಿದ್ದೇ ತಿಂಗಳಿಗೆ ಒಂದು. ಪರೀಕ್ಷೆಯ ಸಮಯದಲ್ಲಿ ಎಲ್ಲಕ್ಕೂ ಬ್ರೇಕ್. ಬೆಟ್ಟದ ಹೂ ಸಮಯದಲ್ಲಿ ಬೇರೆ ಉತ್ತಮ ಕಮರ್ಶಿಯಲ್ ಸಿನಿಮಾಗಳಿದ್ದವು. ಬೆಟ್ಟದ ಹೂ ನೋಡಿ ಬಂದ ಗೆಳೆಯರು ಫೈಟ್ ಇಲ್ಲ, ಸಾಹಸ ಇಲ್ಲ. ಸ್ವಲ್ಪ ಬೇಜಾರಾಗುತ್ತೆ ಅಂತ ಹುಮ್ಮಸ್ಸನ್ನ ಟುಸ್ ಗೊಳಿಸಿದ್ದರು. ಮನೆಯ ಇತರರು (ಹೆಸರು ನೆನಪಿಲ್ಲ) ಆ ಇನ್ನೊಂದು ಸಿನಿಮಾಗೆ ಹೊರಟಿದ್ದರು. ನಾನು ಮಾತ್ರ ಒಬ್ಬನೇ ಬೆಟ್ಟದ ಹೂ ಗೇ ಹೋಗ್ತಿನಿ ಅಂತ ಹಠ. ಅಮ್ಮ ಕೊನೆಗೂ ಒಬ್ಬನನ್ನೇ ಕಳಿಸಲು ಒಪ್ಪಿದ್ದರು.


ಬೆಟ್ಟದ ಹೂವಿನಿಂದ ಬೆಟ್ಟದಷ್ಟು ಕನಸು

ಸ್ಥಳ ಪ್ರಶಾಂತ್ ಥಿಯೇಟರ್ ತುಮಕೂರು. ಸಾಹಸ. ರೋಚಕತೆ ನಿರೀಕ್ಷೆಗಳಿಲ್ಲದೇ ಹೋಗಿ ನೋಡಿದ ಚಿತ್ರ. ಚಿತ್ರ ಕೂಡ ಸಣ್ಣ ಅವಧಿಯದು
"ದೇವಿ ಶಾರದೇ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ "
ಲೋಹಿತ್ ನಿಧಾನವಾಗಿ ಆ ಹಳ್ಳಿಯ ಶಾಲೆಗೆ ನನ್ನ ಕರೆದುಕೊಂಡು ಹೋಗಿದ್ದ. ಹಳ್ಳಿ ನನಗೆ ಹೊಸತಲ್ಲವಾದರೂ ಹಳ್ಳಿಯ ಶಾಲೆ ಹೊಸತು.
ಬಾಲಣ್ಣ "ಪಟ್ಟೆ ಹುಲಿ ಬಲು ಕೆಟ್ಟ ಹುಲಿ
ಕಾಡಲಿ ಬರುತಿತ್ತು. "
ಎಂದು ಹಾಡು ಹೇಳುವಾಗ ಲೋಹಿತ್ ಕಣ್ಣಲ್ಲಿ ಕಂಡ ಭಯ, ಒಂದು ಮಗು ಹೆದರಿ ಉಚ್ಚೆ ಮಾಡುವುದು. ಹುಲಿ ಬಂದೇ ಬಿಡ್ತೇನೋ ಅಂತ ಭಾವ ತಂದಿತು.. ಮುಂದೆ ಕೆನೆತ್ ಅಂಡರ್ಸನ್ ಹಾಗು ಕಾರ್ಬೆಟ್ ಶಿಕಾರಿ ಕತೆ ಓದುವಾಗ ನೆನಪಿಗೆ ಮೊದಲು ಬರುತ್ತಿದುದೇ ಆ ಹಾಡು ಮತ್ತು ಭಯ ಮಿಶ್ರಿತ ಕುತೂಹಲದ ಲೋಹಿತ್ ಮುಖ. orchid ಹೂ ಮೊದಲ ಬಾರಿ ಕೇಳಿದ್ದು, ರಾಮಾಯಣ ದರ್ಶನಂ ಪುಸ್ತಕ ಓದುವ ಲೋಹಿತ್ ಆಸೆ', ಅದಕ್ಕಾಗಿ ಹೂ ತರಲು ಕಾಡಿಗೆ ಹೋಗುವ ಛಾತಿ ಯಾವ ಸಾಹಸಕ್ಕೂ ಕಡಿಮೆ ಅಂತ ನನಗೆ ಅನಿಸಲಿಲ್ಲ.
"ಬಿಸಿಲೆ ಇರಲಿ... ಮಳೆಯೇ ಬರಲಿ
ಕಾಡಲ್ಲಿ ಮೇಡಲ್ಲಿ ಅಲೆವೇ "


ಅದರಲ್ಲಿಯ ಇಂಗ್ಲೀಶ್ ಸಾಲು ಕಷ್ಟ ಪಟ್ಟು ಗಟ್ ಮಾಡಿದ್ದು ಅಚ್ಚ ಹಸಿರು. ಕೊನೆಯಲ್ಲಿ ಹೂ ತರಲು ಹೋದಾಗ ಪೊದೆಯೊಳಗಿನ ಪ್ರಾಣ ಅಟ್ಟಿಸಿಕೊಂಡು ಬರುವುದು. ಅದು ಹುಲಿ ಅಂತ ಲೋಹಿತ್ ಓಡಿ ಮರ ಹತ್ತುವದು. ಅಲ್ಲೇ ಹೂ ಸಿಗೋದು ಒಂದು Fairy tale ಆಗಿಯೇ ನೆನಪು. ಪುಸ್ತಕ ಕೊಳ್ಳದೇ ಕಂಬಳಿ ಕೊಂಡು ಮನೆಗೆ ಹಿಂದಿರುಗುವ ಲೋಹಿತ್ ಕಣ್ಣ ಹನಿ ಮೊನ್ನೆ ನೀ ಮಲಗಿದಾಗ ನಮ್ ಕಣ್ಣಲ್ಲಿ ಬಂದ ಹನಿ ಎರಡರ ನೋವು ಒಂದೇನಾ ಲೋಹಿತ್? ಅಲ್ಲಿ ನೀ ಮತ್ತೆ ಆ ಪುಸ್ತಕ ಕೊಳ್ತಿಯಾ ಅಂತ ಭರವಸೆ ನಾದ್ರೂ ಇತ್ತು. ಈಗ ನಮಗೆ ಬರೀ ಶೂನ್ಯ. ನನ್ನ ಹಲವು ಗೆಳೆಯರು ಬೆಟ್ಟದ ಹೊ ನೋಡಿ ಪ್ರಭಾವಿತರಾದದ್ದು 'ಅವರ ಪುಸ್ತಕ ಓದುವ ಗೀಳು ಹತ್ತಿಸಿದ್ದು ನೀನೇ ಲೋಹಿತ್.


ಪುನೀತ್ ಆಗಿ ರೂಪಾಂತರ

ಬೆಳ್ಳಿಪರದೆಯಿಂದ ಕೆಲಕಾಲ ಮಾಯವಾದ ಲೋಹಿತ್ ನಂತರ ಪುನೀತ್ ಆಗಿ ರೂಪಾಂತರವಾಗಲಿದ್ದ. ನಮ್ಮ ಬಾಲ್ಯದ ಅಂಗವಾಗಿದ್ದ ಲೋಹಿತ್, ಪುನೀತ್ ಆಗಿ ಹೆಸರು ಬದಲಿಸಿಕೊಂಡಿದ್ದು ನನ್ನಂಥ ಅನೇಕರಿಗೆ ರುಚಿಸಲಿಲ್ಲ. 
ಮಧ್ಯ ಪರಶುರಾಂ ಚಿತ್ರದಲ್ಲಿ ಬಂದು ಕೈಲಾಸಂ ಗೀತೆ ಹಾಡಿದ್ದರೂ ಅಷ್ಟೊಂದು ಇಷ್ಟವಾಗಿರಲಿಲ್ಲ. ಲೋಹಿತ್ ಇಷ್ಟವಾಗಿದ್ದ. ನನ್ನೊಳಗೇ ಭದ್ರವಾಗಿದ್ದ. ಪುನೀತ್ ನನಗೆ ಅಪರಿಚಿತನಾಗಿದ್ದ ನಿಜ, ಆದರೆ ಅಪ್ಪು ಆಗಿ ಬರುವ ವರೆಗೆ.
ಲೋಹಿತನದ್ದೇ ಒಂದು ತೂಕವಾದರೆ, ಅಪ್ಪುವಿನದ್ದು ಮತ್ತೊಂದು ವರಸೆ.

ಇಪ್ಪತ್ತು ವರುಷದ ನಂತರ ಅದೇ ಲೋಹಿತ್ ಸಿ.ಡಿ. ರೂಪದಲ್ಲಿ ಬಂದಿದ್ದ. ನಾ ನೋಡಿ ಬೆಳೆದಿದ್ದ ಸಿನಿಮಾಗಳನ್ನು ನನ್ನ ಮಕ್ಕಳಿಗೆ ತೋರಿಸುವಂತಾಗಿ ಅವರ ಕನ್ನಡ ಪ್ರೀತಿ ಹೆಚ್ಚಿಸಿದ್ದು, ಮತ್ತೆ ಬಾಲ್ಯಕ್ಕೆ ನನ್ನನ್ನು ಮರಳುವ ಹಾಗೆ ಮಾಡಿದ್ದು ಎಲ್ಲವೂ ಈಗ ನೆನಪು. 
ತೇವಗೊಂಡ ಕಣ್ಣು ಆರಿಲ್ಲ ಲೋಹಿತ್. ನೀನೂ ನೆನಪು...
ನಮನ ಲೋಹಿತ್..... ಪುನೀತ್ .... ಅಪ್ಪು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com