
ಮೊನ್ನೆಯಷ್ಟೇ ಕಳೆದ ಹೋಳಿ ಹಬ್ಬದ ರಂಗು ಆರುವುದರೊಳಗೆ ಯುಗಾದಿ ಬಂದಿದೆ. ಇದು ಹಿಂದೂಗಳಿಗೆ ಹೊಸ ವರ್ಷದ ಆರಂಭದ ದಿನ.
'ಯುಗಾದಿ'ಯು ಸಂಸ್ಕೃತದ ಪದವಾಗಿದೆ. ಯುಗ ಎಂದರೆ ವಯಸ್ಸು, ಆದಿ ಎಂದರೆ ಆರಂಭ, ಒಟ್ಟಾರೆ ಯುಗಾದಿ ಎಂದರೆ ಚೈತ್ರಮಾಸದ ಆರಂಭ ಎಂಬುದಾಗಿದೆ. ಈ ಸಮಯದಲ್ಲಿ ಚಂದ್ರನು ತನ್ನ ಕಕ್ಷೆ ಬದಲಿಸುವುದರಿಂದ ಇದನ್ನು ಚಾಂದ್ರಮಾನ ಯುಗಾದಿ ಎಂದು ಕರೆಯುತ್ತಾರೆ.
ಯುಗಾದಿಯನ್ನು ಕೋಗಿಲೆ ಕುಹೂ ಕುಹೂ….. ಎಂದು ಇಂಪಾಗಿ ಹಾಡಿ ಸ್ವಾಗತಿಸಿದರೆ, ರತ್ನಪಕ್ಷಿಯು ದರುಶನ ನೀಡಿ ಶುಭ ಕೋರುತ್ತದೆ. ಯುಗಾದಿ ಪಾಡ್ಯದ ದಿನ ರತ್ನಪಕ್ಷಿಯನ್ನು ನೋಡಿದರೆ ಶುಭವಾಗುತ್ತದೆ ಎಂಬ ವಾಡಿಕೆ ಇದೆ.
ಸಂತೋಷ, ದುಃಖ, ಸಿಟ್ಟು, ಹೆದರಿಕೆ, ಜಿಗುಪ್ಸೆ, ಆಶ್ಚರ್ಯ ಇವೆಲ್ಲ ಜೀವನದ ನಿಜ ಸಂಕೇತಗಳಾಗಿವೆ. ಅದೇ ರೀತಿ ನಾವು ಬಳಸುವ ಬೇವು ಕಹಿಯನ್ನೂ, ಬೆಲ್ಲ ಸಿಹಿಯನ್ನು, ಮೆಣಸಿನಕಾಯಿ ಕೋಪ, ಉಪ್ಪು ಹೆದರಿಕೆ, ಹುಣಸೆ ಜಿಗುಪ್ಸೆ ಮತ್ತು ಮಾವು ಆಶ್ಚರ್ಯವನ್ನು ಸೂಚಿಸುತ್ತದೆ. ಈ ಆರೂ ರುಚಿಗಳ ಸಮ್ಮಿಲನವನ್ನು ಸೇವಿಸುವುದು ಯುಗಾದಿ ಆಚರಣೆಯ ಪದ್ಧತಿಯಾಗಿದೆ.
ಯುಗಾದಿಯಂದು ಮನೆಯ ಬಾಗಿಲನ್ನು ಮಾವಿನ ತಳಿರಿನಿಂದ ಸಿಂಗರಿಸುವುದರ ಉದ್ದೇಶ ಹೊಸ ವರ್ಷವು ಸಮೃದ್ಧ ಬೆಳೆಯೊಂದಿಗೆ ಕ್ಷೇಮವನ್ನು ಉಂಟುಮಾಡಲಿ ಎಂಬುದನ್ನು ಸೂಚಿಸುವುದು.
ಗೋಮಯ-ಗೋಮೂತ್ರವನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸುವುದು. ಎಲ್ಲಾ ಕೊಳೆಗಳು ತೊಲಗಲಿ ಎಂದು. ಬಣ್ಣ ಬಣ್ಣದ ರಂಗೋಲಿ ಸಹ ಹೊಸತನ್ನು ಸ್ವಾಗತಿಸಿ ಹಷ೯ ಹೆಚ್ಚಿಸುವುದರ ಸಂಕೇತ. ಹೋಳಿಗೆ, ತುಪ್ಪ,ಶಾವಿಗೆ, ಬೇವು ಬೆಲ್ಲಗಳ ಮಿಶ್ರಣದ ನೈವೇದ್ಯವು ದೈವ ಸಂಪ್ರೀತಿಗಾಗಿ. ದೈವದೆದುರು ಮಾನವ ಅತಿ ಚಿಕ್ಕವ ಅದನ್ನು ಒಪ್ಪಿಕೊಂಡು ದೈವ ಕೃಪೆಗೆ ಕೋರುವುದು ಪದ್ಧತಿ . ಬೇವು-ಬೆಲ್ಲದ ವಿನಿಮಯವು ಬದುಕಿನಲ್ಲಿ ಎರಡೂ ಇರಲಿ, ಬೆಲ್ಲವೇ ಹೆಚ್ಚು ದೊರೆಯಲಿ ಎಂಬ ಆಶಯದಿಂದ ಯುಗಾದಿ ಹಬ್ಬವು ಹೊಸ ವಿಚಾರ , ಸತ್ಕಾರ್ಯ ಸಮೃದ್ಧ ಆರೋಗ್ಯವನ್ನು ಆಶಿಸುತ್ತ ಯುಗಾದಿಯೊಂದಿಗೆ ಸಕಾರಾತ್ಮಕ ಚಿಂತನೆಯೊಂದಿಗೆ ಹೊಸ ಹಾದಿಯಲ್ಲಿ ನಡೆಯುವುದು ಶ್ರೇಯಸ್ಸು.
ಲೇಖನ: ಭಾನು ಶಿವಶಂಕರ ಎಮ್ಮಿಯವರ
ಬೆಂಗಳೂರು
Advertisement