ಕವನ ಸುಂದರಿ: ಬಿ.ವಿ ಭಾರತಿ: ನೆನಪಿದೆಯಾ...

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೆನಪಿದೆಯಾ..

ಕತ್ತಲಾವರಿಸಿದ ಆ ಹೊತ್ತು
ಇಬ್ಬರೇ ಇದ್ದದ್ದು 
ಬರೀ ಆಕಾಶ ಹೊದ್ದದ್ದು
ನೆನಪಿದೆಯಾ ನಿನಗೆ?

 

ಹುಟ್ಟೆನ್ನುವುದು ಆದಿಯಾಗದ
ಸಾವೆನ್ನುವುದು ಅಂತ್ಯವೂ ಆಗದ
ಘಳಿಗೆಗಳ ಪರಾಗಸ್ಪರ್ಶ ಮಾಡುತ್ತಿದ್ದ
ನಿನ್ನೆದುರು ಮಂಡಿಯೂರಿ ನಾ ಬೊಗಸೆಯೊಡ್ಡಿದ್ದೆ

 

ರಾತ್ರಿಯೊಂದು ಉನ್ಮತ್ತವಾಗಲು
ಬೆಳದಿಂಗಳು, ತಂಗಾಳಿ 
ಏನೆಲ್ಲ ಇರಬೇಕೆನ್ನುವವರಿಗೆ
ನೀನೆಂಬ ನೀನು ಎಂದೂ ಎದುರಾಗಿರಲಿಕ್ಕಿಲ್ಲ

 

ಒಡ್ಡಿದ ಬೊಗಸೆಯಲ್ಲಿಟ್ಟ ಕ್ಷಣಗಳು
ಮಿಂಚು ಹುಳುಗಳಂತೆ ಹೊತ್ತಿ ಆರುತ್ತಿದ್ದವು,
ನಾನು-ನೀನು ಉರಿದು ಇಲ್ಲವಾದೆವು
ರಾತ್ರಿಯೊಂದು ಬೆಳಕಾಗಿತ್ತು ಹೀಗೆ ...




ಕವಯಿತ್ರಿ ಬಿ.ವಿ ಭಾರತಿ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರು. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು ಸಾಸಿವೆ ತಂದವಳು, ಮಿಸಳ್ ಭಾಜಿ, ಕಿಚನ್‌ ಕವಿತೆಗಳು, ಜಸ್ಟ್‌ ಮಾತ್‌ ಮಾತಲ್ಲಿ, ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ ಇವರ ಪ್ರಮುಖ ಕೃತಿಗಳು. ಇವರ ಸಾಸಿವೆ ತಂದವಳು ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ ಕೆ ಇಂದಿರಾ ಪ್ರಶಸ್ತಿ ಹಾಗೂ ಮಿಸಾಳ್ ಬಾಜಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com