ಎಲೆಗಳನ್ನು ಸಿಕ್ಕ ಸಿಕ್ಕಲ್ಲಿ ಎಸೆದು ನಡುಗುತ್ತ
ನಿಂತಿರುವ ಮರ. ಮುಚ್ಚಿರುವ ಮನೆಯೊಂದರ
ಕಿಟಕಿ ಬಳಿ ಗರ ಬಡಿದಂತಿರುವ ಕಿರಣ,
ಮಿನುಗುವುದೋ ಬೇಡವೋ ಎಂದೆಲ್ಲ ಲೆಕ್ಕ
ಹಾಕುತ್ತಿರುವ ಚುಕ್ಕೆ ಸಾಲು!
ಮರಗಟ್ಟಿದ ಮಾತು, ಮಂಕಾಗಿ ಹೋದ
ಮನೆ, ಬಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಉಸಿರು
ನೀಗಿಕೊಂಡ ಹೂವು, ಗಿಡ ಮರಗಳ ದೊಗರೆದ್ದ
ಬುಡ, ಎದೆ ಬಗೆದು ತುಂಬಿದ ಜಲ್ಲಿ ಕಲ್ಲು!
ಆಗಸಕ್ಕೆ ಹೊಲಿದುಕೊಂಡ ಕಾರ್ಮೋಡ,
ಜೂಗುಡಿಸುವ ಆನ್ ಲೈನ್ ತರಗತಿ, ಕಣ್ಣೂದಿದ
ಪೋನಿ ಟೈಲ್ ಹುಡುಗಿ, ಬೀದಿಗೆ ಠೂ ಠೂ
ಹೇಳಿದ ಮಕ್ಕಳು, ಕೋಣೆಯಲ್ಲೇ ಹಿಮಗಟ್ಟಿದ
ಹಿರಿಯರು.
ಈ ಬೀದಿಯ ಬೊಗಸೆಗೊಂದು
ಸೂರ್ಯಕಾಂತಿಯ ಹೂ ಬೀಳಬೇಕಾಗಿದೆ!
ಕವಯಿತ್ರಿ ಎಂ. ಆರ್. ಕಮಲ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು. ಫ್ರೆಂಚ್ ಭಾಷೆಯಲ್ಲಿ ಪದವೀಧರರು.
ಶಕುಂತಲೋಪಾಖ್ಯಾನ, ಜಾಣೆ ಮತ್ತು ಇತರ ಕವಿತೆಗಳು, ಹೂವು ಚೆಲ್ಲಿದ ಹಾದಿ, ಮಾರಿಬಿಡಿ ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos