ಕವನ ಸುಂದರಿ: ನಾಗರೇಖಾ ಗಾಂವಕರ: ನಗುವನ್ನು ಹರಾಜಿಗಿಡಲಾಗಿದೆ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ, ಕವನ ಸುಂದರಿ 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on


ನಗುವನ್ನು ಹರಾಜಿಗಿಡಲಾಗಿದೆ

ಈ ನಗರದಲ್ಲಿ ನಗುವನ್ನೂ ಹರಾಜಿಗೆ ಇಡುತ್ತಾರೆ
ಅದು ಸೂಸುವ ಕಂಪಿಗೂ
ಬಲೆ ನಿಗದಿ ಇದೆ.

 

ನಸುಗೆಂಪು ಕೆನ್ನೆಗಳ ಕಿರು ಮಂದಹಾಸ
ಕಾವಿಗೆ ಒಡೆಯುತ್ತವೆ ಮೊಟ್ಟೆಗಳು
ಸ್ಮೈಲ್ ಬಿಗ್ ಆಫರ್‌ಗಳಲ್ಲಿ
ಸೆಲ್ ಮೋರ್ ಎನ್ನುತ್ತವೆ..

 

ನಗುವಿನ ನಸೀಬು
ನಕ್ಕವಳ ನಸೀಬು ಎರಡೂ ಬದಲಾಗುವುದು
ಯಾರದೋ ಬೆರಳಿಗೆ ಮೀಟಿದ ತಂತಿ
ಚಡಪಡಿಸಿದಾಗ.
ಆ ನಗುವಲ್ಲಿ ಗಾಳಿ
ಮಳೆ, ಕೆಲವೊಮ್ಮೆ ಬೆಂಕಿಗಳು
ಅರಳಲೂಬಹುದು
ಇಲ್ಲ... ಬೆಳಕು
ಬೆಳದಿಂಗಳು ನಾಟ್ಯವಾಡಬಹುದು.

 

ಗೋಡೆಯಲ್ಲಿ ತೂಗುಬಿದ್ದ
ದರ್ಪಣ ಸುಂದರಿಯ ತುಟಿಯಂಚಲ್ಲಿ
ಟ್ರೈಫೋಲ್ಡ್ ಕನ್ನಡಿಗಳಲ್ಲಿ
ಪ್ರತಿಫಲಿಸಲೂಬಹುದು

 

ಯಾರೂ ಬೇಕಾದರೂ
ಕೊಂಡುಕೊಳ್ಳಬಹುದಂತೆ..

 

ಸಣ್ಣಗೆ ಉರಿಯುವ ಪೆಟ್ರೊಮ್ಯಾಕ್ಸ್
ಪಕ್ಕದಲ್ಲಿ ನಿಂತ ಸ್ಮಿತವದನೆ
ಮೊಗದ ದುಮ್ಮಾನ
ಸೆಲ್ ಮೋರ್ ಬರಹಗಳ ಹೊತ್ತ
ಗ್ಲೋಸಿ ಫ್ಲಾಯರ್‌ಗಳಲ್ಲಿ ಹುದುಗಿದಂತೆ.

 

ಬಾರ್ಗೆನು ಮಾಡುವುದು ಮರ್ಯಾದೆಯ
ಪ್ರಶ್ನೆ ಇಲ್ಲಿ !!
ನಾಜೂಕು ಹವಳದ ತುಟಿಗಳಲ್ಲಿ
ನಗು ತುಂಬಿಕೊಂಡ
ಯವನಿಕೆಯರು ನಿಮ್ಮನ್ನೆ ನೋಡುತ್ತಾರೆ..

 

ನೀವಿಲ್ಲಿ ನಗುವಿನ
ಹರಾಜಿನಲ್ಲಿ ಏನೂ ಬೇಕಾದರೂ ಕೊಳ್ಳಬಹುದು.
ಕಿಸೆಯಲ್ಲಿ ಹಣವಿರುವ ತನಕ
ಹರಾಜು ಮುಗಿದ ಮೇಲೆ ಈ
ನಗುವನ್ನು ದರ್ಪಣದಲ್ಲಿ ಬಂಧಿಸಿಡಲಾಗುತ್ತದೆ 

 



ಕವಯಿತ್ರಿ, ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ ಸ್ನಾತಕೋತ್ತರ ಪದವೀಧರೆಯಾದ ಇವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ, ಬರ್ಫದ ಬೆಂಕಿ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ ಲಭಿಸಿದೆ. ಆಕಾಶವಾಣಿ ಧಾರವಾಡ, ಕಾರವಾರಗಳಲ್ಲಿ ಚಿಂತನ ಕಾರ್ಯಕ್ರಮಗಳಲ್ಲಿ ಕತಾವಾಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಅವರದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com