ರಸ್ತೆಯಲಿ ಒಬ್ಬಳೇ ನಡೆವಾಗ
ನೆನಪಾದ ತಮಾಷೆ
ತುಟಿಗೆ ಅಗುಳು ಮೆತ್ತಿದಂತೆ
ಕಸಿವಿಸಿಯಲಿ ಕೊಡವಿ
ಯಾರೆಂದೋ ತೋರಿ ಕೈಬೀಸಿ
ಹತ್ತಿರಾದರೆ, ಅಪರಿಚಿತ ಹುಡುಗ
ಸುತ್ತ ಗಮನಿಸುವ ಕಣ್ಣುಗಳು
ಜನಜಂಗುಳಿಯ ಮಧ್ಯೆಯೇ
ತೀರಾ ಒತ್ತರಿಸಿ ಬಂದ ಅಳು
ಕಡಿಮೆ ಬಿದ್ದ ಟಿಕೇಟು ಕಾಸು
ಎಡವಿದಾಗ ಹರಿದ ಅಂಗಿ
ಸದಾ ಮೇಲಾಟ ತೋರಿದವರ
ಅಣಕು ನೋಟ
ಕಿತ್ತ ಉಂಗುಷ್ಟದ ತೇಪೆ ಚಪ್ಪಲಿ
ಜಾತ್ರೆಯಂತಹ ಮದುವೆಗೆ
ತಪ್ಪು ಅಂದಾಜಿನಲಿ ತೊಟ್ಟ ಸಾದಾ ಅರಿವೆ
ನಿಶ್ಯಬ್ದ ಕೋಣೆಯಲಿ ಶಮನವಾಗದ ಬಿಕ್ಕಳಿಕೆ
ಮುಜುಗರಕ್ಕೆ ಮುಗಿಲಷ್ಟು ಹರಹು
ಚಳಿಯಲಿ ಮುದುರಿ
ಮರೆಯಲಾಗದೆ ಉಗುರು ಕಡಿದು ಕಡಿದು
ನೋವು ಒತ್ತರಿಸಿದ ಬೆರಳು
ಅರ್ಧರಾತ್ರಿಯಲಿ ಆರ್ತನಾದ
ಮೂಕವಾದ ಜೀವಗಳು
ಒಳಗೆ ನರಳುವುದು ಇಂತದ್ದೇ
ನೆನಪುಗಳ ಜೊತೆಗೆ
ಬರಿದೇ ಮಾತುಗಳಲಿ
ಸೂಕ್ಷ್ಮ ನಟಿಸುವುದು ಬೇರೆ
ಇಲ್ಲಿ ಹಗಲಿನ ಗಾಯಗಳಿಗೆ
ಕಣ್ಣೀರಿನ ಉಪ್ಪು ಮಾಯಿಸುವ
ಸೂಕ್ಷ್ಮಗಳೇ ಬೇರೆ
ಕವಯಿತ್ರಿ ಎಸ್. ನಾಗಶ್ರೀ ಮೂಲತಃ ಮೈಸೂರಿನವರು. ಈಗ ಬೆಂಗಳೂರಿನಲ್ಲಿ ವಾಸ. ಓದಿದ್ದು ICWA ಆದರೂ ಪ್ರವೃತ್ತಿ ಸಾಹಿತ್ಯವನ್ನೇ ಪ್ರೀತಿಸುವ ಮನೋಭಾವವುಳ್ಳವರು. ಬರವಣಿಗೆಯಲ್ಲಿ ತೊಡಗಿಕೊಂಡಿರುವ ಇವರ ಕಥೆಗಳು, ಕವನಗಳು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತವೆ. ಕಾರ್ಯಕ್ರಮ ನಿರೂಪಣೆಯಲ್ಲೂ ಹೆಸರು ಮಾಡಿರುವ ನಾಗಶ್ರೀ ಬೆಂಗಳೂರು ಆಕಾಶವಾಣಿಯಲ್ಲಿ ರೇಡಿಯೊ ಕಾರ್ಯಕ್ರಮ ನಡೆಸಿಕೊಡುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos