ಕವನ ಸುಂದರಿ: ನಾಗರೇಖಾ ಗಾಂವಕರ: ನಗುವನ್ನು ಹರಾಜಿಗಿಡಲಾಗಿದೆ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ, ಕವನ ಸುಂದರಿ
Published: 04th January 2022 03:55 PM | Last Updated: 04th January 2022 05:04 PM | A+A A-

ಸಾಂದರ್ಭಿಕ ಚಿತ್ರ
ನಗುವನ್ನು ಹರಾಜಿಗಿಡಲಾಗಿದೆ
ಈ ನಗರದಲ್ಲಿ ನಗುವನ್ನೂ ಹರಾಜಿಗೆ ಇಡುತ್ತಾರೆ
ಅದು ಸೂಸುವ ಕಂಪಿಗೂ
ಬಲೆ ನಿಗದಿ ಇದೆ.
ನಸುಗೆಂಪು ಕೆನ್ನೆಗಳ ಕಿರು ಮಂದಹಾಸ
ಕಾವಿಗೆ ಒಡೆಯುತ್ತವೆ ಮೊಟ್ಟೆಗಳು
ಸ್ಮೈಲ್ ಬಿಗ್ ಆಫರ್‌ಗಳಲ್ಲಿ
ಸೆಲ್ ಮೋರ್ ಎನ್ನುತ್ತವೆ..
ನಗುವಿನ ನಸೀಬು
ನಕ್ಕವಳ ನಸೀಬು ಎರಡೂ ಬದಲಾಗುವುದು
ಯಾರದೋ ಬೆರಳಿಗೆ ಮೀಟಿದ ತಂತಿ
ಚಡಪಡಿಸಿದಾಗ.
ಆ ನಗುವಲ್ಲಿ ಗಾಳಿ
ಮಳೆ, ಕೆಲವೊಮ್ಮೆ ಬೆಂಕಿಗಳು
ಅರಳಲೂಬಹುದು
ಇಲ್ಲ... ಬೆಳಕು
ಬೆಳದಿಂಗಳು ನಾಟ್ಯವಾಡಬಹುದು.
ಗೋಡೆಯಲ್ಲಿ ತೂಗುಬಿದ್ದ
ದರ್ಪಣ ಸುಂದರಿಯ ತುಟಿಯಂಚಲ್ಲಿ
ಟ್ರೈಫೋಲ್ಡ್ ಕನ್ನಡಿಗಳಲ್ಲಿ
ಪ್ರತಿಫಲಿಸಲೂಬಹುದು
ಯಾರೂ ಬೇಕಾದರೂ
ಕೊಂಡುಕೊಳ್ಳಬಹುದಂತೆ..
ಸಣ್ಣಗೆ ಉರಿಯುವ ಪೆಟ್ರೊಮ್ಯಾಕ್ಸ್
ಪಕ್ಕದಲ್ಲಿ ನಿಂತ ಸ್ಮಿತವದನೆ
ಮೊಗದ ದುಮ್ಮಾನ
ಸೆಲ್ ಮೋರ್ ಬರಹಗಳ ಹೊತ್ತ
ಗ್ಲೋಸಿ ಫ್ಲಾಯರ್‌ಗಳಲ್ಲಿ ಹುದುಗಿದಂತೆ.
ಬಾರ್ಗೆನು ಮಾಡುವುದು ಮರ್ಯಾದೆಯ
ಪ್ರಶ್ನೆ ಇಲ್ಲಿ !!
ನಾಜೂಕು ಹವಳದ ತುಟಿಗಳಲ್ಲಿ
ನಗು ತುಂಬಿಕೊಂಡ
ಯವನಿಕೆಯರು ನಿಮ್ಮನ್ನೆ ನೋಡುತ್ತಾರೆ..
ನೀವಿಲ್ಲಿ ನಗುವಿನ
ಹರಾಜಿನಲ್ಲಿ ಏನೂ ಬೇಕಾದರೂ ಕೊಳ್ಳಬಹುದು.
ಕಿಸೆಯಲ್ಲಿ ಹಣವಿರುವ ತನಕ
ಹರಾಜು ಮುಗಿದ ಮೇಲೆ ಈ
ನಗುವನ್ನು ದರ್ಪಣದಲ್ಲಿ ಬಂಧಿಸಿಡಲಾಗುತ್ತದೆ
.jpg)