ದಾರಿ ತಪ್ಪಲ್ಲ: ಗೂಗಲ್ ಮ್ಯಾಪ್ ಅಪ್‌ಡೇಟ್

ಗೂಗಲ್ ಮ್ಯಾಪ್‌ನ ಹೊಸ ಅಪ್‌ಡೇಟ್‌...
ದಾರಿ ತಪ್ಪಲ್ಲ: ಗೂಗಲ್ ಮ್ಯಾಪ್ ಅಪ್‌ಡೇಟ್

ಸ್ಪಷ್ಟ ವಿಳಾಸ ಹಾಗೂ ಗೂಗಲ್ ಮ್ಯಾಪ್ ಒಂದಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿಯೂ ನಾವು 'ದಾರಿ ತಪ್ಪಿದ ಮಕ್ಕಳು' ಆಗಲು ಸಾಧ್ಯವಿಲ್ಲ. ಆದರೆ ಈ ಮಾತಿಗೆ ಸದ್ಯದವರೆಗೆ ಒಂದು ಷರತ್ತಿತ್ತು. ಏನೆಂದರೆ ದಾರಿ ತಪ್ಪಿದ ಮಕ್ಕಳಾಗದಿರಲು ಕಡ್ಡಾಯವಾಗಿ ಅಂತರ್ಜಾಲ ಸಂಪರ್ಕ ಹೊಂದಿರಬೇಕಿತ್ತು. ಆದರೆ ಗೂಗಲ್ ಮ್ಯಾಪ್‌ನ ಹೊಸ ಅಪ್‌ಡೇಟ್‌ನಿಂದ ಅಂತರ್ಜಾಲ ಸಂಪರ್ಕವಿಲ್ಲದಿದ್ದರೂ ನಿಮಗೆ ಬೇಕಾದ ವಿಳಾಸ ಹುಡುಕಬಹುದು.

ಗೂಗಲ್‌ನ ಈ ಅಪ್‌ಡೇಟ್ ದೇಶ ಸುತ್ತುವವರಿಗೆ ಅದ್ಭುತವಾಗಿರುತ್ತದೆ. ಯಾವುದೇ ಮೂಲೆಯಲ್ಲಿಯೂ ದಾರಿ ತಪ್ಪುವ ಸಾಧ್ಯತೆ ಕಡಿಮೆಯಾಗುತ್ತದೆ. ಆದರೆ ತೆಲೆಯಲ್ಲಿ ಸ್ವಲ್ಪ ಸಾಮಾನ್ಯ ಜ್ಞಾನ ಹೊಂದಿರುವುದು ಅಗತ್ಯ.

ಅದರಲ್ಲೂ ಭಾರತದಂತಹ ರಾಷ್ಟ್ರದಲ್ಲಿ ಇನ್ನೂ ಶೇ.60ರಷ್ಟು ಭಾಗಗಳು ಅಂತರ್ಜಾಲ ಸಂಪರ್ಕ ಹೊಂದಿರದ ಕಾರಣದಿಂದ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಈ ಅಪ್‌ಡೇಟ್‌ವರವಾಗಿ ಪರಿಣಮಿಸಲಿದೆ. ಆಂಡ್ರಾಯ್ಡ್ ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್‌ಗೆ ಟ್ಯೂನ್ ಮಾಡಿ ಈ ಅಪ್‌ಡೇಟ್‌ನ್ನು ಗೂಗಲ್ ಮ್ಯಾಪ್‌ಗೆ ಹೊಸ ಲುಕ್ ಕೂಡ ಬಂದಿದೆ. ಆದರೆ ಸಂಪೂರ್ಣ ಅಂತರ್ಜಾಲ ಸಂಪರ್ಕ ಅನಿವಾರ್ಯ.

ಉದಾಹರಣೆಗೆ ನಿಮಗೆ ಹಾವೇರಿಯಿಂದ ಶಿರಸಿಗೆ ಹೋಗುವ ದಾರಿ ಗೊತ್ತಿಲ್ಲ ಎಂದಿಟ್ಟುಕೊಳ್ಳಿ. ಗ್ರಹಚಾರವೇನೆಂದರೆ ದಾರಿ ಮಧ್ಯದಲ್ಲಿ ರಸ್ತೆ ತಪ್ಪಿತೆಂದರೆ ಗೂಗಲ್ ಮ್ಯಾಪ್ ಮೂಲಕ ಹುಡುಕಲು ಇಂಟರ್ನೆಟ್ ಸೌಲಭ್ಯವಿಲ್ಲ. ಇದಕ್ಕಾಗಿ ಹಾವೇರಿಯಿಂದ ಹೊರಟ ಕೂಡಲೇ ಶಿರಸಿಗೆ ಹೋಗುವ ಮಾರ್ಗವನ್ನು ಸರ್ಚ್ ಮಾಡಬೇಕು.

ಕೆಲ ಕ್ಷಣದಲ್ಲಿ ನಿಮಗೆ ಮ್ಯಾಪ್‌ನಲ್ಲಿ ದಾರಿ ಸಿಗುತ್ತದೆ. ನಂತರ ಮೊಬೈಲ್‌ನ ಮೇಲೆ ಬಲ ತುದಿಯಲ್ಲಿ ಸೇವ್ ಆಫ್ ಲೈನ್ ಮ್ಯಾಪ್ ಎಂಬ ಆಪ್ಶನ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮಗೆ  ಊರಿನ ಹೆಸರುಗಳು ಕಾಣುವಷ್ಟು ಮಟ್ಟಿಗೆ ಝೂಮ್ ಮಾಡಿ ಸೇವ್ ಎಂದು ಕೊಡಿ. ನಂತರ ಆಫ್ ಲೈನ್ ಹೋಗಿ ಸಂಚರಿಸುವಾಗಿ ಈ ಮ್ಯಾಪ್‌ಗಳನ್ನು ಎಡ ತುದಿಯ ಮೆನ್ಯು ಮೇಲೆ ಕ್ಲಿಕ್ಕಿಸಿದಾಗ ಒಂದಿಷ್ಟು ಮಾಹಿತಿಗಳ ಲಿಸ್ಟ್ ದೊರೆಯುತ್ತದೆ.

ಅಲ್ಲಿ 'ಯುವರ್ ಪ್ಲೇಸ್‌' ಎಂದಿರುವಲ್ಲಿ ಹೋಗಿ ನೋಡಿ. ಅಲ್ಲಿ ನೀವು ಸೇವ್ ಮಾಡಿರುವ ಆಫ್‌ಲೈನ್ ಮ್ಯಾಪ್‌ಗಳಿರುತ್ತವೆ. ಅಲ್ಲಿ ನಿಮಗೆ ಪ್ರತಿಯೊಂದು ಹಳ್ಳಿ ಅಥವಾ ಪಟ್ಟಣಗಳ ಗಲ್ಲಿ ಗಲ್ಲಿಗಳ ಹೆಸರು ಹಾಗೂ ಮಾಹಿತಿ ಸಿಗುತ್ತದೆ. ಒಂದು ಸಮಸ್ಯೆಯೆಂದರೆ ನಿಮಗೆ ಅಲ್ಲಿ ನೀವು ಹೋಗುವ ರಸ್ತೆಗಳ ಡೈರೆಕ್ಷನ್ ಗೊತ್ತಾಗುವುದಿಲ್ಲ. ಊರಿನ ಹೆಸರು ತಿಳಿದುಕೊಂಡು ಸಂಚರಿಸಬೇಕಾಗುತ್ತದೆ. ಆದರೆ ಜಿಪಿಎಸ್ ಆನ್ ಮಾಡಿಟ್ಟುಕೊಂಡೆ ನೀವೆಲ್ಲಿ ಹೋಗುತ್ತಿದ್ದೀರಿ ಅಥವಾ ನೀವೆಲ್ಲಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬಹುದು.

ಅದೇ ನಗರ ಪ್ರದೇಶದಲ್ಲಾದರೆ ಅಡ್ಡರಸ್ತೆಗಳನ್ನು ತಿಳಿದುಕೊಂಡು ಸುಲಭವಾಗಿ ಹೋಗಬಹುದು. ಒಂದು ಸಮಸ್ಯೆಯೆಂದರೆ ನಿಮಗೆ ನೀವು ಹೋಗುವ ಪ್ರದೇಶದ ಪಕ್ಕಾ ವಿಳಾಸ ಗೊತ್ತಿದ್ದರೆ ಹುಡುಕಿಕೊಂಡು ಹೋಗಬಹುದು. ಇನ್ನು ಈ ಆಫ್‌ಲೈನ್ ಮ್ಯಾಪ್ 30 ದಿನಗಳವರೆಗೆ ಸೇವ್ ಆಗಿರುತ್ತದೆ. ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಿಬಿಡುತ್ತದೆ.

ಮತ್ತೊಂದು ಸಮಸ್ಯೆಯೆಂದರೆ ಇಡೀ ಬೆಂಗಳೂರು ನಗರವನ್ನು ಒಂದೇ ಏಟಿಗೆ ಸೇವ್ ಮಾಡಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಬೇರೆ ಬೇರೆ ಫೈಲ್‌ಗಳಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು.

ಈ ಆಪ್ಶನ್‌ನ್ನು ಮೊದಲೇ ನೀಡಲಾಗಿತ್ತು. ಆದರೆ ಕೆಲ ಫೈಲ್‌ಗಳು ಸರಿಯಾಗಿ ಡೌನ್‌ಲೋಡ್ ಆಗುತ್ತಿರಲಿಲ್ಲ ಹಾಗೂ ಆಫ್ ಲೈನ್‌ನಲ್ಲಿ ಬಳಸಲು ಕಷ್ಟವಾಗುತ್ತಿತ್ತು ಎಂಬ ದೂರುಗಳಿದ್ದವು. ಈಗ ಸಂಪೂರ್ಣ ಸುಧಾರಣೆಯೊಂದಿಗೆ ಹೊಸ ಲುಕ್‌ನಲ್ಲಿ ಗೂಗಲ್ ಮ್ಯಾಪ್ ಸಿಗುತ್ತಿದೆ.

-ರಾಜೀವ್ ಹೆಗಡೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com