ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿಳಿದ ಜಾಪನೀಸ್ ವಿಸ್ಕಿ
ಟೋಕಿಯೋ: ಜಾಪನೀಸ್ ವಿಸ್ಕಿಯನ್ನು ಒಳಗೊಂಡಂತೆ ತುರ್ತು ಪರಿಸ್ಥಿಗಾಗಿ ಸಾಮಗ್ರಿಗಳನ್ನು ಹೊತ್ತ ಮಾನವರಹಿತ ನೌಕೆ ಮಂಗಳವಾರ ಬೆಳಗ್ಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೊನ್ನೆ ಗುರುತ್ವಾಕರ್ಷಣದಲ್ಲಿ ಸ್ವಾದ ಹೇಗೆ ಬದಲಾಗುತ್ತದೆ ಎಂದು ತಿಳಿಯಲು ಮದ್ಯ ದೈತ್ಯ ಸುಂಟರಿ, ಬಾಹ್ಯಾಕಾಶಕ್ಕೆ ವಿಸ್ಕಿಯನ್ನು ಕೂಡ ಜೊತೆಗೆ ಕಳುಹಿಸಿದೆ.
ಅತಿ ಕಡಿಮೆ ಉಷ್ಣಾಂಶದ ಪರಿಸರದಲ್ಲಿ ಪಾನೀಯವನ್ನು ಇಡುವುದರಿಂದ ಸ್ವಾದಕ್ಕೆ ಒಳ್ಳೆಯ ಬದಲಾವಣೆ ಬರುತ್ತದೆ ಎಂದು ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.
ಈ ಸಾಮಾಗ್ರಿಗಳನ್ನು ಹೊತ್ತ ಮೂಟೆಯನ್ನು ೪.೪ ಕೆಜಿ ನೌಕೆ "ಕೌನೋಟೋರಿ"ಯಲ್ಲಿಟ್ಟು ಎಚ್-ಐಐಬಿ ರಾಕೆಟಿನಲ್ಲಿ ದಕ್ಷಿಣ ಜಪಾನಿನಿಂದ ಕಳೆದ ಬುಧವಾರ ಹಾರಿಬಿಡಲಾಗಿದೆ.
ಬಾಹ್ಯಾಕಾಶದಲ್ಲಿ ಪರೀಕ್ಷಿಸಲು ಇದರಲ್ಲಿ ಆಹಾರ, ನೀರು, ಬಟ್ಟೆ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ತುಂಬಿ ಕಳುಹಿಸಲಾಗಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐ ಎಸ್ ಎಸ್) ವಾಸಿಸುತ್ತಿರುವ ಜಪಾನಿ ಖಗೋಳಶಾಸ್ತ್ರಜ್ಞ ಕಿಮಿಯ ಯುಇ (೪೫) ಅವರು ರೋಬೋಟಿಕ್ ಕೈ ಬಳಸಿ ಈ ನೌಕೆಯನ್ನು ಯಶಸ್ವಿಯಾಗಿ ಹಿಡಿದಿದ್ದಾರೆ. ಈ ನೌಕೆ ಐ ಎಸ್ ಎಸ್ ನಿಂದ ಸೆಪ್ಟಂಬರ್ ಕೊನೆಯ ವಾರದಲ್ಲಿ ಹೊರಟು ಭೂಮಿಯ ವಾತಾವರಣಕ್ಕೆ ತಲುಪಲಿದೆ ಎಂದು ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

