ಏನಿದು ಡಿಜಿಲಾಕರ್? ಬಳಕೆ ಹೇಗೆ?

ದಾಖಲೆ ಪತ್ರಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡುವಂತೆ ನಾವು ನಮ್ಮ ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಬಹುದು...
ಡಿಜಿಲಾಕರ್
ಡಿಜಿಲಾಕರ್

ಜುಲೈ 1ರಂದು ಡಿಜಿಟಲ್ ಸಪ್ತಾಹಕ್ಕೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಡಿಜಿಲಾಕರ್‌ನ್ನು ಜನರಿಗೆ ಪರಿಚಯಿಸಿದೆ. ನಮ್ಮ ಬೆಲೆಬಾಳುವ ವಸ್ತುಗಳು, ದುಡ್ಡು, ಬಂಗಾರ, ದಾಖಲೆ ಪತ್ರಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡುವಂತೆ ನಾವು ನಮ್ಮ ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಬಹುದು.

ಡಿಜಿ ಲಾಕರ್ ಹೇಗೆ ಕಾರ್ಯವೆಸಗುತ್ತದೆ?

https://digitallocker.gov.in/  ಎಂಬ ವೆಬ್‌ಸೈಟ್ ನಲ್ಲಿ  ಆಧಾರಕಾರ್ಡ್ ಸಂಖ್ಯೆ ಹೊಂದಿರುವ ಯಾರಿಗೆ ಬೇಕಾದರೂ ಡಿಜಿಲಾಕರ್ ಖಾತೆ ತೆರೆಯಬಹುದಾಗಿದೆ. ಇದಕ್ಕೆ ಬೇಕಾಗಿರುವುದು ಇಂಟರ್ನೆಟ್ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಮಾತ್ರ. ಇದು ಉಚಿತ ಸೇವೆಯಾಗಿದೆ.

ವೆಬ್‌ಸೈಟ್ ತೆರೆದ ಕೂಡಲೇ Register Now (https://digitallocker.gov.in/Register.aspx) ಎಂಬ ಲಿಂಕ್ ಕಾಣುತ್ತದೆ. ಅದರಲ್ಲಿ ಕ್ಲಿಕ್  ಮಾಡಿದಾಗ ರಿಜಿಸ್ಟರ್ ಫಾರ್ ಎ ಡಿಜಿಲಾಕರ್ ಅಕೌಂಟ್ ಎಂಬ ಆಪ್ಶನ್ ಸಿಗುತ್ತದೆ. ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ. ಆಧಾರ್ ಸಂಖ್ಯೆ ನಮೂದಿಸಿದಾಗ ಕೆಳಗೆ ಹಸಿರು ಬಣ್ಣದಲ್ಲಿ ಎರಡು ಬಟನ್‌ಗಳನ್ನು ನೀವು ಕಾಣಬಹುದು. ಅದರಲ್ಲಿ ಒಂದು Use OTP (ಒನ್ ಟೈಮ್ ಪಾಸ್ ವರ್ಡ್ ) ಮತ್ತು  Use Finger Print .
ಯೂಸ್ ಒಟಿಪಿ ಎಂಬ ಆಪ್ಶನ್ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್‌ಗೆ ಒನ್‌ಟೈಮ್ ಪಾಸ್‌ವರ್ಡ್ ಮೆಸೇಜ್ ಬರುತ್ತದೆ. ಈ ಪಾಸ್‌ವರ್ಡ್‌ನ್ನು ನೀವು ಅಲ್ಲಿ ನಮೂದಿಸಿದರೆ ಡಿಜಿ ಲಾಕರ್ ಖಾತೆಗೆ ಪ್ರವೇಶ ಪಡೆಯಬಹುದು. ಇಲ್ಲವೇ ನೀವು ಯೂಸ್ ಫಿಂಗರ್ ಪ್ರಿಂಟ್ ಎಂಬ ಆಪ್ಶನ್ ಕ್ಲಿಕ್ ಮಾಡುವುದಾದರೆ ಬೆರಳಚ್ಚು ಸ್ಕ್ಯಾನ್ ಮಾಡಬೇಕಾಗುತ್ತದೆ.



ಇದಾದ ನಂತರ ಬಳಕೆದಾರರ ಹೆಸರು (User Name) ಮತ್ತು Passwordನ್ನು ನಾವು ಕ್ರಿಯೇಟ್ ಮಾಡಬೇಕಾಗುತ್ತದೆ. User Name ಕಾಲಂನಲ್ಲಿ ನಿಮ್ಮ ಹೆಸರು ನಮೂದಿಸಿದರೆ ಸಾಕು. ಪಾಸ್‌ವರ್ಡ್ ಕಾಲಂನಲ್ಲಿ ಅಕ್ಷರಗಳು, ಸಂಖ್ಯೆ ಮತ್ತು ಚಿಹ್ನೆಗಳನ್ನು ಬಳಸಿ ಪಾಸ್‌ವರ್ಡ್ ಕ್ರಿಯೇಟ್ ಮಾಡಬಹುದು. ಇಷ್ಟೆಲ್ಲಾ ಆದರೆ ನಿಮಗೆ ನಿಮ್ಮದೇ ಆದ ಲಾಕರ್ ಲಭ್ಯವಾಗುವುದು. ನಿಮ್ಮ ಲಾಕರ್‌ನ ಶೇಖರಣೆ ಸಾಮರ್ಥ್ಯ (Storage Capacity) 10 ಮೆಗಾಬೈಟ್ಸ್ (MB) ಆಗಿರುತ್ತದೆ. ನಿಮ್ಮ ಆಧಾರಕಾರ್ಡ್‌ನ್ನು ಡಿಜಿಲಾಕರ್‌ನಲ್ಲಿ ಸಂರಕ್ಷಿಸಿಡಬಹುದು. ಇದಕ್ಕಾಗಿ ಇ-ಆಧಾರ್ ಡೌನ್‌ಲೋಡ್ ಮಾಡಲಿರುವ ಆಪ್ಶನ್‌ಗಳು  ಲಾಕರ್‌ನಲ್ಲಿವೆ. ಇ- ಆಧಾರ್ ಡೌನ್‌ಲೋಡ್ ಮಾಡಲು ಬೇಕಾದ ನಿರ್ದೇಶನಗಳನ್ನು ಲಿಂಕ್‌ನಲ್ಲಿ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ನಮ್ಮ ಡಿಜಿ ಲಾಕರ್‌ನ್ನು  ನಮ್ಮ ಫೇಸ್‌ಬುಕ್ ಖಾತೆ ಮತ್ತು ಜಿಮೇಲ್ ಖಾತೆಯ ಜತೆ ಕನೆಕ್ಟ್ ಮಾಡಬಹುದಾಗಿದೆ. ಇದನ್ನು ಕನೆಕ್ಟ್ ಮಾಡುವ ಬಗ್ಗೆಯೂ ಅಲ್ಲಿ ಮಾರ್ಗನಿರ್ದೇಶನ ನೀಡಲಾಗಿದೆ.

ಡಿಜಿಲಾಕರ್‌ನ ಅಗತ್ಯವೇನು?
ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೆಲ್ಲಾ ಡಿಜಿಟಲೈಸ್ ಮಾಡುವಾಗ ನಮಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಇದು ಸಹಾಯವಾಗುತ್ತದೆ. ಮಾತ್ರವಲ್ಲದೆ ನಮ್ಮ ಗುರುತುಚೀಟಿ, ಸರ್ಟಿಫಿಕೇಟ್‌ಗಳನ್ನು ಸಂಬಂಧಿಸಿದ ಕಚೇರಿ ಜತೆ ಶೇರ್ ಮಾಡಲು ಇದು ಸುಲಭ ವಿಧಾನವಾಗಿದೆ.

ಡಿಜಿಲಾಕರ್‌ನಲ್ಲಿ ಏನೆಲ್ಲಾ ಇಡಬಹುದು?
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ದಾಖಲೆ ಪತ್ರ ಮೊದಲಾದವುಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಡಿಜಿಟಲ್ ಲಾಕರ್‌ನಲ್ಲಿ ನಮ್ಮ ದಾಖಲೆ ಪತ್ರಗಳು ಸುರಕ್ಷಿತವಾಗಿರುತ್ತವೆ. ಕ್ಲೌಡ್ ಸರ್ವರ್ (Cloud Server) ತಂತ್ರಜ್ಞಾನದ ಮೂಲಕ ಈ ದಾಖಲೆಗಳೆಲ್ಲಾ ಇಲ್ಲಿ ಸೇವ್ ಆಗಿದ್ದು, ಅಗತ್ಯ ಬಂದಾಗ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com