ಜುಲೈ 10 ರಂದು ಜಿಸ್ಯಾಟ್-6 ಉಡಾವಣೆ

ಜುಲೈ 10 ರಂದು ಜಿಸ್ಯಾಟ್-6 ಉಪಗ್ರಹ ಉಡಾವಣೆ ಮಾಡುವ ಮೂಲಕ ಸಂವಹನ ತಂತ್ರಜ್ಞಾನವನ್ನು ಮತ್ತಷ್ಟು ಬಲಪಡಿಸುವುದಾಗಿ ಇಸ್ರೋ ಅಧ್ಯಕ್ಷ ಡಾ. ಎ.ಎಸ್ ಕಿರಣ್ ಕುಮಾರ್ ತಿಳಿಸಿದ್ದಾರೆ.
ಇಸ್ರೋ
ಇಸ್ರೋ

ಬೆಂಗಳೂರು: ಜುಲೈ 10 ರಂದು ಜಿಸ್ಯಾಟ್-6 ಉಪಗ್ರಹ ಉಡಾವಣೆ ಮಾಡುವ ಮೂಲಕ ಸಂವಹನ ತಂತ್ರಜ್ಞಾನವನ್ನು ಮತ್ತಷ್ಟು ಬಲಪಡಿಸುವುದಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಡಾ. ಎ.ಎಸ್ ಕಿರಣ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ವಿಜ್ಞಾನ ವೇದಿಕೆ ಹಮ್ಮಿಕೊಂಡಿದ್ದ 38 ನೇ ವಾರ್ಷಿಕ ವಿಜ್ಞಾನೋತ್ಸವ ಕಾರ್ಯಕ್ರಮದಲ್ಲಿ ಕಕ್ಷೆಯಲ್ಲಿ ಭಾರತ ವಿಷಯದ ಕುರಿತು ಮಾತನಾಡಿದ ಅವರು, ಪಿಎಸ್ಎಲ್ ವಿ ಮೂಲಕ ಉಪಗ್ರಹ ಉಡಾವಣೆಗೆ ಅಗತ್ಯ ಸಿದ್ಧತೆಗಳು ನಡೆದಿದ್ದು ಜಿಸ್ಯಾಟ್-6  ಉಪಗ್ರಹದ ಜತೆಗೆ ಬ್ರಿಟನ್ 5 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುವುದು. ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೇಯಾಗಲಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವೇಗವಾಗಿ ಸಾಗುತ್ತಿರುವುದಕ್ಕೆ ಇದು ನಿದರ್ಶನ ಎಂದರು.

ಮೊಬೈಲ್ ಇಂಟರ್ ನೆಟ್, ಬ್ರಾಡ್ ಬ್ಯಾಂಡ್ ಸೇರಿದಂತೆ ಮುಂತಾದ ಸಂವಹನ ಸಂಪರ್ಕಗಳು ಒಂದು ಸ್ಥಳದಲ್ಲಿರುವಾಗ ಮಾತ್ರ ಉತ್ತಮ ಸಂಪರ್ಕ ಸಾಧ್ಯ. ಆದರೆ ವಾಹನಗಳಲ್ಲಿ ಚಲಿಸುವಾಗಲೂ ನೆಟ್ ವರ್ಕ್ ಬೇಕಿದ್ದು ಅದರ ಗುಣಮಟ್ಟ ಮತ್ತಷ್ಟು ಹೆಚ್ಚುವಂತೆ ಮಾಡುವ ಅಗತ್ಯವಿದೆ. ಆದ್ದರಿಂದ ಪ್ರಯಾಣದ ಸಂದರ್ಭದಲ್ಲಿ ಮಲ್ಟಿಮೀಡಿಯಾ ಸೇವೆ ಹೆಚ್ಚಳ ಮಾಡಲಾಗುವುದು ಈ ಹಿನ್ನೆಲೆಯಲ್ಲಿ ಮಲ್ಟೀಮೀಡಿಯಾಗೆ ಸಂಬಂಧಿಸಿದ ಅತಿ ದೊಡ್ಡ ಆಂಟೆನಾವನ್ನು ಆಗಸ್ಟ್ ನಲ್ಲಿ ಉಡಾವಣೆ ಮಾಡಲಾಗುತ್ತಿದೆ ಎಂದು ಕಿರಣ್ ಕುಮಾರ್ ತಿಳಿಸಿದರು.

ಅದೇ ರೀತಿ ಆಸ್ಟ್ರೋಸ್ಯಾಟ್ ಎಂಬ ಖಗೋಳ ವೀಕ್ಷಣಾ ಉಪಗ್ರಹವನ್ನು ಸೆಪ್ಟೆಂಬರ್ ತಿಂಗಳಲ್ಲಿ ಉಡಾವಣೆ ಮಾಡಲಾಗುವುದು ಬ್ರಹ್ಮಾಂಡದ ಆಕಾಶ ಕಾಯಗಳನ್ನು ಹಾಗೂ ಅವುಗಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಈ ಉಪಗ್ರಹ ಪ್ರಮುಖ ಪಾತ್ರ ವಹಿಸಲಿದೆ. ಮತ್ತೊಂದೆಡೆ ಉಪಗ್ರಹಗಳನ್ನು  ಕಕ್ಷೆಗೆ ಉಡಾವಣೆ ಮಾಡಲು ತಗುಲುವ ವೆಚ್ಚವನ್ನು ಕಡಿಮೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದ ರಾಕೆಟ್ ಸಿದ್ಧಪಡಿಸಲಾಗುತ್ತಿದ್ದು, ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಗುವುದು. 2018 ರಲ್ಲಿ ಚಂದ್ರಯಾನ-2  ಯೋಜನೆಗೆ ಸಂಬಂಧಿಸಿದ ಉಡಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com