ಫೈಲೀಗೆ ಮತ್ತೆ ಜೀವ

ಇದೇ ಮೊದಲ ಬಾರಿಗೆ ಧೂಮಕೇತುವೊಂದರ ಮೇಲೆ ರೋಬೊಟ್ ಇಳಿಸುವ ಸಾಹಸ ಪ್ರದರ್ಶಿಸಿದ್ದ ಯುರೋಪಿನ ಬಾಹ್ಯಾಕಾಶ ಸಂಸ್ಥೆಗೆ ಹೋದ ಜೀವ ಮತ್ತೆ...

ಪ್ಯಾರಿಸ್: ಇದೇ ಮೊದಲ ಬಾರಿಗೆ ಧೂಮಕೇತುವೊಂದರ ಮೇಲೆ ರೋಬೊಟ್ ಇಳಿಸುವ ಸಾಹಸ ಪ್ರದರ್ಶಿಸಿದ್ದ ಯುರೋಪಿನ ಬಾಹ್ಯಾಕಾಶ ಸಂಸ್ಥೆಗೆ ಹೋದ ಜೀವ ಮತ್ತೆ ಬಂದಂತಾಗಿದೆ. ಮಂಗಳನ ಸಮೀಪ ಹಾದು ಹೋಗಿದ್ದ 67ಪಿ ಧೂಮಕೇತುವಿನ ಮೇಲೆ ಇಳಿಯುವ ಪ್ರಯತ್ನದಲ್ಲಾದ ತಾಂತ್ರಿಕ ಸಮಸ್ಯೆಯಿಂದಾಗಿ ನಿದ್ರಾವಸ್ಥೆಗೆ ಜಾರಿದ್ದ ಫೈಲೀ ರೊಬೋಟ್ ಎಚ್ಚರಗೊಂಡಿದೆ. ಏಳು ತಿಂಗಳ ಬಳಿಕ ಯುರೋಪಿಯನ್ ಬಾಹ್ಯಾ ಕಾಶ ಸಂಸ್ಥೆ ಜತೆಗೆ ಸಂಪರ್ಕ ಸಾಧಿಸಿದೆ. ``ಹಲೋ ಭೂಮಿ ನನ್ನ ಧ್ವನಿ ಕೇಳಿಸುತ್ತಿದೆಯಾ?'' ಎನ್ನುವ ಸಂದೇಶವನ್ನು ಕಳುಹಿಸಿಕೊಟ್ಟಿದೆ. ಮಂಗಳ ಗ್ರಹದ ಸುತ್ತ ತಿರುಗುತ್ತಿರುವ ಯುರೋಪ್ ಬಾಹ್ಯಾಕಾಶ ಸಂಸ್ಥೆಯ ರೊಸೆಟ್ಟಾ ಉಪಗ್ರಹದಿಂದ ಪ್ರತ್ಯೇಕವಾಗಿದ್ದ ಫೈಲೀ ನ.12ರಂದು 67ಪಿ ಚುರ್ಯುಮೊವ್- ಗೆರಾಸಿಮೆನ್ಕೋ ಧೂಮ ಕೇತು ಮೇಲೆ ಇಳಿದಿತ್ತು. ಆದರೆ, ಲ್ಯಾಂಡಿಂಗ್ ಆದ ಬಳಿಕ ಹಲವು ಬಾರಿ ಪುಟಿದ ಈ 100 ಕಿ.ಗ್ರಾಂನ ರೊಬೋಟ್ ಕಂದಕಕ್ಕೆ ಬಿದ್ದಿತ್ತು. ಇದರಿಂದ ಸೌರ ಫಲಕವಿದ್ದರೂ ಅಗತ್ಯ ಪ್ರಮಾಣದ ಇಂಧನ  ಉತ್ಪಾದಿಸಲಾಗದೆನ.15ರಂದು ರೋಬೊಟ್ ನಿದ್ರಾವಸ್ಥೆಗೆ ಜಾರಿತ್ತು. ಅದಕ್ಕೂ ಮೊದಲು ಫೈಲೀ ಒಂದಷ್ಟು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿ ಕಳುಹಿಸಿಕೊಟ್ಟಿತ್ತು. ಈಗ ಏಳು ತಿಂಗಳ ನಿದ್ರೆಯ ಬಳಿಕ ಅದಕ್ಕೆ ಜೀವ ಬಂದಿದೆ. 40 ಸೆಕೆಂಡ್‍ಗಳ ಡೇಟಾಗಳನ್ನು ಕಳುಹಿಸಿಕೊಟ್ಟಿದೆ. ಒಮ್ಮೆ ಧೂಮಕೇತುವು ಸೂರ್ಯನ ಸಮೀಪ ಹೋದಾಗ ಸೌರ ಫಲಕಗಳ ಮೂಲಕ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳುವುದು ಸುಲಭವಾಗಲಿದೆ. ಇದರಿಂದ ಆ ರೋಬೊಟ್ ತನ್ನ ಕೆಲಸ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಗಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ಆ.13ರಂದು ಧೂಮಕೇತುವು ಸೂರ್ಯನಿಗೆ ಅತ್ಯಂತ ಸನಿಹದಲ್ಲಿ ಹಾದು ಹೋಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com