ಇನ್ನು ಮುಂದೆ +91, 0 ಬಳಸದೇ ಎಸ್.ಟಿ.ಡಿ ಮೊಬೈಲ್ ಗಳಿಗೆ ಕರೆ ಮಾಡಿ!

ರಾಷ್ಟ್ರೀಯ ಮೊಬೈಲ್‌ ನಂಬರ್‌ ಪೋರ್ಟಬಲಿಟಿಗೆ ಉಂಟಾಗಿದ್ದ ಪ್ರಮುಖ ತೊಡಕನ್ನು ಪರಿಹರಿಸಿರುವ ಟೆಲಿಕಾಮ್ ಆಪರೇಟರ್ ಗಳು, +91 , 0 ಬಳಸಿ ಹೊರರಾಜ್ಯಗಳ ಮೊಬೈಲ್ ಗೆ ಕರೆ ಮಾಡುವ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ.
ಇನ್ನು ಮುಂದೆ +91, 0 ಬಳಸದೇ ಎಸ್.ಟಿ.ಡಿ ಮೊಬೈಲ್ ಗಳಿಗೆ ಕರೆ ಮಾಡಿ!

ನವದೆಹಲಿ: ರಾಷ್ಟ್ರೀಯ ಮೊಬೈಲ್‌ ನಂಬರ್‌ ಪೋರ್ಟಬಲಿಟಿ(ಎಂ.ಎನ್.ಪಿ)ಗೆ ಉಂಟಾಗಿದ್ದ ಪ್ರಮುಖ ತೊಡಕನ್ನು ಪರಿಹರಿಸಿರುವ ಟೆಲಿಕಾಮ್ ಆಪರೇಟರ್ ಗಳು, +91 , 0 ಬಳಸಿ ಹೊರರಾಜ್ಯಗಳ ಮೊಬೈಲ್ ಗೆ ಕರೆ ಮಾಡುವ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ.

ಈ ವರೆಗೂ  +91 , 0 ಬಳಸಿ ಎಸ್.ಟಿ.ಡಿ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ ಸ್ಥಳೀಯ ಮೊಬೈಲ್ ಗಳಿಗೆ ಕರೆ ಮಾಡುವಂತೆಯೇ ನೇರವಾಗಿ ಮೊಬೈಲ್ ಸಂಖ್ಯೆಯನ್ನು ಬಳಸಿ ಹೊರ ರಾಜ್ಯಗಳ ಮೊಬೈಲ್ ಗಳಿಗೂ ಕರೆ ಮಾಡಬಹುದಾಗಿದೆ. ನೂತನ ಸೌಲಭ್ಯವನ್ನು ಏರ್ ಟೆಲ್, ವೋಡಾಫೋನ್ ನೆಟ್ವರ್ಕ್ ಗಳಲ್ಲಿ ಪ್ರಯೋಗಿಸಲಾಗಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಟೆಲಿಕಾಂ ಆಪರೇಟರ್ ಗಳ ಕ್ರಮ, ರಾಷ್ಟ್ರೀಯ ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದ್ದು, ಹೊರ ರಾಜ್ಯಗಳಿಗೆ ವಲಸೆ ಹೋಗಿರುವವರು ಹಳೆಯ ನಂಬರ್ ನ್ನೇ ಉಳಿಸಿಕೊಂಡು +91 , 0 ಬಳಸದೇ ತಮ್ಮ  ರಾಜ್ಯದ ಮೊಬೈಲ್ ನಂಬರ್ ಗಳಿಗೆ  ಕರೆ ಮಾಡಬಹುದಾಗಿದೆ.

ದೇಶಾದ್ಯಂತ ಒಂದೇ ನಂಬರ್‌ ಹೊಂದುವ ರಾಷ್ಟ್ರೀಯ ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಯೋಜನೆ(ಎಂ.ಎನ್.ಪಿ) ಮೇ.3 ರಿಂದಲೇ ಜಾರಿಯಾಗಬೇಕಿತ್ತು. ಆದರೆ ನ್ಯಾಷನಲ್ ನಂಬರಿಂಗ್ ಪ್ಲಾನ್(ಎನ್.ಎನ್.ಪಿ)  ನಲ್ಲಿ ಬದಲಾವಣೆ ತಂದಿದ್ದ ದೂರಸಂಪರ್ಕ ಇಲಾಖೆ, ಟೆಲಿಕಾಂ ಉದ್ಯಮ ಸಂಸ್ಥೆಗಳಿಗೆ +91 , 0 ಬಳಸಿ ಹೊರರಾಜ್ಯಗಳ ಮೋಬೈಲ್ ಗೆ ಕರೆ ಮಾಡುವ ನಿಯಮವನ್ನು ತೆಗೆದುಹಾಕುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಯೋಜನೆ ಜಾರಿ ವಿಳಂಬವಾಗಿತ್ತು. ದೂರಸಂಪರ್ಕ ಇಲಾಖೆಯ ಆದೇಶ ಪೂರ್ಣಗೊಳಿಸಲು, ಕೆಲ ತಾಂತ್ರಿಕ ಬದಲಾವಣೆಗಳನ್ನು ಮಾಡಬೇಕಿದ್ದ ಹಿನ್ನೆಲೆಯಲ್ಲಿ ಸಿ.ಒ.ಎ.ಐ ಸಮಯಾವಕಾಶ  ಕೋರಿತ್ತು. ಈಗ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದ್ದು ಹಿಂದಿದ್ದ ನಿಯಮವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಈ ಬೆಳವಣಿಗೆ ರಾಷ್ಟ್ರೀಯ ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಯೋಜನೆಗೆ ಸಹಕಾರಿಯಾಗಲಿದ್ದು, ಈ ಯೋಜನೆ ಸಂಪೂರ್ಣವಾಗಿ ದೇಶಾದ್ಯಂತ ಜಾರಿಯಾದ ಬಳಿಕ, ದೇಶದ ಯಾವುದೇ ಭಾಗಗಳಿಗೆ ತೆರಳಿದರು ತಮ್ಮ ರಾಜ್ಯದ ಮೊಬೈಲ್ ನಂಬರನ್ನೇ ಸ್ಥಳೀಯವಾಗಿಯೂ ಬಳಸಬಹುದಾಗಿದೆ. ಪ್ರಸ್ತುತವಿರುವ ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಯೋಜನೆಯಲ್ಲಿ ಆಯಾ ರಾಜ್ಯದ ನಂಬರನ್ನು ಮಾತ್ರ ಬೇರೆ ನೆಟ್ವರ್ಕ್ ಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾದ ಸೌಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com