ದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ ಯಶಸ್ಸಿನಿಂದ ವಿಮಾನ ತಯಾರಕ ವಿದೇಶಿ ಸಂಸ್ಥೆಗಳಿಗೆ ಆತಂಕ!
ಲಂಡನ್: ಭಾರತದ ಸ್ವದೇಶಿ ನಿರ್ಮಿತ ತೇಜಸ್ ಟ್ರೈನರ್ ಜೆಟ್ ಯಶಸ್ಸಿನಿಂದ ಪಾಶ್ಚಿಮಾತ್ಯ ರಕ್ಷಣಾ ಮತ್ತು ವೈಮಾನಿಕ ಸಂಸ್ಥೆಗಳು ಆತಂಕಗೊಂಡಿವೆ ಎಂಬ ವರದಿ ಪ್ರಕಟವಾಗಿದೆ.
ತೇಜಸ್ ಟ್ರೈನರ್ ಜೆಟ್ ಭಾರತದಲ್ಲಿ ಯಶಸ್ಸುಗಳಿಸಿರುವುದರಿಂದ ಶ್ರೀಲಂಕಾ ಹಾಗೂ ಈಜಿಪ್ಟ್ ತೇಜಸ್ ಟ್ರೈನರ್ ಜೆಟ್ ಗಳಿಗಾಗಿ ಬೇಡಿಕೆ ಇಟ್ಟಿದ್ದು, ಭಾರತ ಮೊದಲ ಬಾರಿಗೆ ಶ್ರೀಲಂಕಾ, ಈಜಿಪ್ಟ್ ನೊಂದಿಗೆ ಟ್ರೈನರ್ ಜೆಟ್ ಮಾರಾಟದ ಒಪ್ಪಂದಕ್ಕೆ ಸಹಿಹಾಕಲಿದೆ.
ತೇಜಸ್ ಲಘು ಯುದ್ಧ ವಿಮಾನವನ್ನು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ. ಶ್ರೀಲಂಕಾ ವಾಯು ಪಡೆ ಚೀನಾ ನಿರ್ಮಿತ ಮಿಗ್-21 ರ ಬದಲಿಗೆ 18 -24 ಯುದ್ಧ ವಿಮಾನಗಳನ್ನು ತಯಾರಿಸಲು ಮುಂದಾಗಿದ್ದು ತೇಜಸ್ ಯುದ್ಧ ವಿಮಾನದ ಬಗ್ಗೆ ಆಸಕ್ತಿ ಹೊಂದಿದೆ, ಭಾರತಕ್ಕೆ ಈ ಒಪ್ಪಂದ ಸಿಗಲಿದೆ ಎಂಬ ಮಾಹಿತಿಗೆ ಪೂರಕವಾಗಿ ಶ್ರೀಲಂಕಾ ಇತ್ತೀಚೆಗಷ್ಟೆ ಚೀನಾ ಸಹಯೋಗದಲ್ಲಿ ಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನವನ್ನು ತಿರಸ್ಕರಿಸಿತ್ತು.
ಮತ್ತೊಂದೆಡೆ ಫ್ರಾನ್ಸ್ ನ 24 ರಾಫೆಲ್ ಜೆಟ್ ಗಳ ಖರೀದಿಗೆ ಸಹಿ ಹಾಕಿದ್ದರು ಈಜಿಪ್ಟ್ ತೇಜಸ್ ಯುದ್ಧ ವಿಮಾನವನ್ನು ಉತ್ಪಾದಿಸಲು ಉತ್ಸಾಹ ತೋರಿದೆ. ಡೈಲಿ ಮಿರರ್ ನಲ್ಲಿ ಪ್ರಕಟವಾದ ವರದಿ ಪ್ರಕಾರ ಈಜಿಪ್ಟ್ ಹಾಗೂ ಶ್ರೀಲಂಕಾ ಭಾರತ ನಿರ್ಮಿತ ತೇಜಸ್ ಯುದ್ಧ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿದ್ದು, ತೇಜಸ್ ಗೆ ಸಿಗುತ್ತಿರುವ ಬೇಡಿಕೆಯಿಂದ ಯುದ್ಧ ವಿಮಾನಗಳನ್ನು ತಯಾರಿಸುವ ಪಾಶ್ಚಿಮಾತ್ಯ ಕಂಪನಿಗಳಿಗೆ ಆತಂಕ ಎದುರಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ