
ವಾಷಿಂಗ್ಟನ್: ಟ್ವಿಟ್ಟರ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಒಂದು ಬಾರಿಗೆ ಟ್ವಿಟ್ಟರ್ ನಲ್ಲಿ ಕೇವಲ 140 ಪದಗಳ ಮಿತಿಯಲ್ಲಿ ಮಾತ್ರ ಸಂದೇಶ ಬರೆಯಲಾಗುತ್ತದೆ. ಇದರಿಂದ ಟ್ವಿಟ್ಟರ್ ನಲ್ಲಿ ಸಂದೇಶ ಕಳುಹಿಸುವವರಿಗೆ ಕಿರಿ ಕಿರಿ ಅನಿಸುತ್ತದೆ.
ಇದಕ್ಕಾಗಿ ಟ್ವಿಟ್ಟರ್ ಕಂಪೆನಿ ಒಂದು ಬಾರಿಗೆ 10 ಸಾವಿರ ಪದಗಳಿಗೆ ಅಕ್ಷರ ಮಿತಿಯನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದೆ. ಮಾರ್ಚ್ ಹೊತ್ತಿಗೆ ಜಾರಿಗೆ ತರಬೇಕೆಂಬ ಯೋಜನೆಯಲ್ಲಿದೆ ಎಂದು ತಂತ್ರಜ್ಞಾನ ಸುದ್ದಿ ತಾಣ ರಿ/ ಕೋಡ್ ಸುದ್ದಿ ಪ್ರಕಟಿಸಿದೆ. ಈಗ ವಿಶ್ವಾದ್ಯಂತ 300 ದಶಲಕ್ಷಕ್ಕೂ ಅಧಿಕ ಮಂದಿ ಟ್ವಿಟ್ಟರ್ ನ್ನು ದಿನನಿತ್ಯ ಬಳಕೆ ಮಾಡುತ್ತಾರೆ. ಸುದ್ದಿಯಿಂದ ಹಿಡಿದು ಖಾಸಗಿ ವಿಷಯಗಳು, ಜಾಹೀರಾತುಗಳು, ರಾಜಕೀಯ ವಿಚಾರಗಳು, ಫೋಟೋ, ವಿಡಿಯೋ, ಪ್ರಚಲಿತ ವಿದ್ಯಮಾನಗಳು, ಮನರಂಜನೆ ಹೀಗೆ ನಾನಾ ವಿಷಯಗಳು ಟ್ವಿಟ್ಟರ್ ನಲ್ಲಿ ಸಿಗುತ್ತಿವೆ.
ನೇರ ಸಂದೇಶದಡಿಯಲ್ಲಿ ಈಗಾಗಲೇ 10 ಸಾವಿರ ಅಕ್ಷರ ಮಿತಿಯ ಸಂದೇಶವನ್ನು ಕಳುಹಿಸಿ ಕಂಪೆನಿ ನೋಡಿದೆ. ಅದಕ್ಕೆ ಯಾವುದೇ ಅಡೆತಡೆಗಳು ಉಂಟಾಗಿಲ್ಲವಂತೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ವಿಟ್ಟರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಕ್ ಡೋರ್ಸಿ, 10 ಸಾವಿರ ಅಕ್ಷರಗಳ ಮಿತಿಗೆ ಹೆಚ್ಚಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸಾಧ್ಯತೆ ಬಗ್ಗೆ ಪರಿಶೀಲಿಸುತ್ತೇವೆ. ಆದರೆ ಕಂಪನಿಯು ಈ ಅನುಕೂಲತೆಯನ್ನು ಜನರಿಗೆ ಒದಗಿಸಿಕೊಡುವುದರಲ್ಲಿ ಹಿಂಜರಿಕೆ ಮಾಡುವುದಿಲ್ಲ ಎಂದಿದ್ದಾರೆ.
Advertisement