ಡಿಜಿಟಲ್ ಇಂಡಿಯಾದಿಂದ ಪ್ರೇರಣೆಗೊಂಡ ಬಂಡಹಳ್ಳಿಯ ಸರ್ಕಾರಿ ಶಾಲೆ

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದಿಂದ ಪ್ರೇರೇಪಣೆಗೊಂಡು ಮೈಸೂರು ಜಿಲ್ಲೆಯ ಸರ್ಕಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದಿಂದ ಪ್ರೇರೇಪಣೆಗೊಂಡು ಮೈಸೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಮಕ್ಕಳಿಗೆ ಪರೀಕ್ಷೆಗೆ ಪೂರಕವಾಗಿರುವ ಅಧ್ಯಯನ ವಿಷಯಗಳನ್ನು ಆನ್ ಲೈನ್ ನಲ್ಲಿ ನೀಡಲಾಗುತ್ತಿದೆ.

ಮೈಸೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಬಂಡಹಳ್ಳಿಯ ಪ್ರೌಢಶಾಲೆಯಲ್ಲಿ ಈಗಾಗಲೇ ಮಕ್ಕಳಿಗೆ ಪರೀಕ್ಷೆಗೆ ಸಹಾಯವಾಗಲೆಂದು ಪರೀಕ್ಷಾ ಟೈಂ ಟೇಬಲ್, ಪರಿಹಾರ ಪ್ರಶ್ನೆ ಪತ್ರಿಕೆಗಳು ಮತ್ತು ಫೋಟೋ ಗ್ಯಾಲರಿಯನ್ನು ತಯಾರಿಸಿ ಕಂಪ್ಯೂಟರ್ ಗೆ ಅಪ್ ಲೋಡ್ ಮಾಡಲಾಗಿದೆ. ವೆಬ್ ಸೈಟ್ ವಿಳಾಸ http://ghsbandahallikrn.org. ಇದು ಇದೇ 18ರಂದು ಅಧಿಕೃತವಾಗಿ ಆರಂಭವಾಗಲಿದೆ.

ಶಾಲೆಯಲ್ಲಿ ಒಟ್ಟು 107 ಮಂದಿ ವಿದ್ಯಾರ್ಥಿಗಳಿದ್ದಾರೆ. ಎಲ್ಲರೂ ಕೃಷಿ ಕುಟುಂಬದಿಂದ ಬಂದವರು. ಇಲ್ಲಿ ಐದು ಮಂದಿ ಬೋಧಕರು ಮತ್ತು ಇಬ್ಬರು ಸಹಾಯಕ ಸಿಬ್ಬಂದಿಯಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಡಾ.ಸುರೇಶ್ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಸೌಕರ್ಯಗಳಿರುವುದಿಲ್ಲ ಎಂದು ಪೋಷಕರ ಭಾವನೆಯಿರುತ್ತದೆ. ಅದನ್ನು ಹೋಗಲಾಡಿಸಲು ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪಿಎಚ್ ಡಿ ಪದವೀಧರರಾಗಿರುವ ಸುರೇಶ್ ಅವರು, ಕಳೆದ ಐದು ವರ್ಷಗಳಿಂದ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ನಮ್ಮ ಶಾಲೆಗೆ 13 ಕಂಪ್ಯೂಟರ್ ಗಳು ಸಿಕ್ಕಿವೆ. ಆದರೆ ಹಳ್ಳಿಯಲ್ಲಿ ನಿಯಮಿತವಾಗಿ ವಿದ್ಯುತ್ ಪೂರೈಕೆಯಿಲ್ಲದಿರುವುದರಿಂದ ನಮ್ಮ ಮಕ್ಕಳಿಗೆ ಸರಿಯಾಗಿ ಕಂಪ್ಯೂಟರ್ ನಲ್ಲಿ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಹೋದಾಗ ಯುಪಿಎಸ್ ಬಳಸಿಕೊಳ್ಳೋಣವೆಂದು ನಾನೇ 6 ಸಾವಿರ ರೂಪಾಯಿ ನೀಡಿ ಖರೀದಿಸಿ ಇದೀಗ ಮಕ್ಕಳಿಗೆ ಪರದೆ ಮೂಲಕ ಪಾಠ ಮಾಡುತ್ತಿದ್ದೇವೆ ಎನ್ನುತ್ತಾರೆ ಸುರೇಶ್.

ಪರದೆ ಮೇಲೆ ದೃಶ್ಯಗಳನ್ನು ನೋಡುವಾಗ ಮಕ್ಕಳು ಹೆಚ್ಚು ಖುಷಿಯಾಗುತ್ತಾರೆ. ಕೆಲವೊಮ್ಮೆ ಶಾಲಾ ಅವಧಿ ಮುಗಿದ ನಂತರವೂ ಪಾಠ ಮುಂದುವರಿಸಿ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ ಎಂದು ಖುಷಿಯಿಂದ ಹೇಳುತ್ತಾರೆ ಸುರೇಶ್.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನ ಭಾರೀ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಸುರೇಶ್ ಅವರಿಗೆ ಈ ಯೋಚನೆ ಬಂತಂತೆ. ಅದನ್ನು ತಮ್ಮ ಸಹೋದ್ಯೋಗಿ ಸುಬ್ಬರಾಮನ್ ಅವರಲ್ಲಿ ಹಂಚಿಕೊಂಡರು. ಅವರು ಇಂಗ್ಲೀಷ್ ಬೋಧಕರು. ನಾವು ಕುಳಿತು ಯೋಜನೆ ರೂಪಿಸಿದೆವು. ವೆಬ್ ಸೈಟ್ ನ ವಿನ್ಯಾಸಕ್ಕೆ ಸುಮಾರು 15 ಸಾವಿರ ರೂಪಾಯಿ ವೆಚ್ಚ ತಗಲಿದೆ. ಆರಂಭದಲ್ಲಿ ವಿಷಯ ಕನ್ನಡದಲ್ಲಿದ್ದು, ಮುಂದಿನ ದಿನಗಳಲ್ಲಿ ಇಂಗ್ಲೀಷ್ ಸೇರಿಸಲಾಗುವುದು ಎನ್ನುತ್ತಾರೆ.

ಕೇವಲ ಪರೀಕ್ಷೆ ಸಂದರ್ಭದಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಕಂಪ್ಯೂಟರ್ ನಲ್ಲಿ ಶಾಲೆ, ಮಕ್ಕಳು, ಅಧ್ಯಾಪಕರಿಗೆ ಸಂಬಂಧಪಟ್ಟ ವಿಷಯಗಳನ್ನು ವೆಬ್ ಸೈಟ್ ನಲ್ಲಿ ಅಳವಡಿಸುವ ಯೋಚನೆ ಸುರೇಶ್ ರದ್ದು. ಆ ಊರಿನ ರೈತರಿಗೆ ಕಂಪ್ಯೂಟರ್ ಶಿಕ್ಷಣ ಕಲಿಸುವ ಯೋಜನೆ ಕೂಡ ಅವರಿಗಿದೆ.

ಡಿಜಿಟಲ್ ಇಂಡಿಯಾ: ಜುಲೈ 1, 2015ರಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ನಮ್ಮ ದೇಶದ ಹಳ್ಳಿ ಹಳ್ಳಿಗಳಿಗೂ ಅತ್ಯಂತ ವೇಗದಲ್ಲಿ ಇಂಟರ್ನೆಟ್ ಸೇವೆ ಒದಗಿಸಿ ಕಂಪ್ಯೂಟರ್ ಸಾಕ್ಷರತೆಯನ್ನು ನೀಡುವುದು ಡಿಜಿಟಲ್ ಇಂಡಿಯಾ ಯೋಜನೆಯ ಪರಿಕಲ್ಪನೆಯಾಗಿದೆ.

ಶಾಲಾ ಮುಖ್ಯೋಪಾಧ್ಯಾಯರ ಈ ಯೋಜನೆ ಬಗ್ಗೆ ವಿದ್ಯಾರ್ಥಿಗಳು ತುಂಬಾ ಖುಷಿಯಾಗಿದ್ದಾರೆ. ನಮ್ಮ ಶಾಲೆಯಲ್ಲಿ ಪದೇ ಪದೇ ವಿದ್ಯುತ್ ಹೋಗುತ್ತಿತ್ತು. ಮುಖ್ಯೋಪಾಧ್ಯಾಯರು ಯುಪಿಎಸ್ ತಂದಿರುವುದರಿಂದ ಈಗ ಆ ಸಮಸ್ಯೆ ಇಲ್ಲ. ಈಗ ಯಾರು ಬೇಕಾದರೂ ನಮ್ಮ ಶಾಲೆಯ ಚಟುವಟಿಕೆಗಳ ಬಗ್ಗೆ ವೆಬ್ ಸೈಟ್ ನಲ್ಲಿ ನೋಡಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com