ಹೊಸ ನೀತಿ ಬಳಕೆದಾರರ ಗೌಪ್ಯತೆ ಉಲ್ಲಂಘಿಸುವುದಿಲ್ಲ: ದೆಹಲಿ ಹೈಕೋರ್ಟ್ ಗೆ ವಾಟ್ಸ್ ಆಪ್ ಸ್ಪಷ್ಟನೆ
ನವದೆಹಲಿ: ವಾಟ್ಸ್ ಆಪ್ ನ ಹೊಸ ನೀತಿಗಳು ಬಳಕೆದಾರರ ಗೌಪ್ಯತೆಗೆ ಉಲ್ಲಂಘಿಸುತ್ತದೆ ಎಂಬ ಆತಂಕಗಳಿಗೆ ಸ್ವತಃ ವಾಟ್ಸ್ ಆಪ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ತನ್ನ ಹೊಸ ನೀತಿ ಬಳಕೆದಾರರ ಗೌಪ್ಯತೆಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ವಾಟ್ಸ್ ಆಪ್ ಹೈಕೋರ್ಟ್ ಗೆ ತಿಳಿಸಿದೆ.
ವಾಟ್ಸ್ ಆಪ್ ನ ಬಳಕೆದಾರರು ತಮ್ಮ ಖಾತೆಯನ್ನು ಡಿಲೀಟ್ ಮಾಡಿದರೆ, ಅವರು ಕಳಿಸಿದ್ದ ಸಂದೇಶಗಳ ಮಾಹಿತಿ ಹಾಗೂ ಖಾತೆಯ ಮಾಹಿತಿ ಸರ್ವರ್ ನಲ್ಲಿ ಉಳಿಸಿಕೊಳ್ಳಲಾಗುವುದಿಲ್ಲ ಎಂದು ವಾಟ್ಸ್ ಆಪ್ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ. ಹೊಸ ನೀತಿಗಳನ್ನು ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಪ್ರಶ್ನಿಸಿರುವ ವಾಟ್ಸ್ ಆಪ್, ಬಳಕೆದಾರರು ಕಳಿಸಿದ ಸಂದೇಶ ತಲುಪದೇ ಇದ್ದರೆ ಮಾತ್ರ 30 ದಿನಗಳ ವರೆಗೆ ಅದನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ನ್ಯಾ. ಜಿ ರೋಹಿಣಿ ಹಾಗೂ ನ್ಯಾ. ಸಂಗೀತಾ ಧೀಂಗ್ರಾ ಸೆಹಗಲ್ ಅವರಿದ್ದ ದ್ವಿಸದಸ್ಯ ಪೀಠದ ಎದುರು ವಾಟ್ಸ್ ಆಪ್ ಪರ ವಕೀಲರು ವಾಟ್ಸ್ ಆಪ್ ನ ಹೊಸ ನೀತಿ ಬಳಕೆದಾರರ ಗೌಪ್ಯತೆಗೆ ಧಕ್ಕೆ ಉಂಟು ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ವಾಟ್ಸ್ ಆಪ್ ನ ಹೊಸ ನೀತಿಗಳ ವಿರುದ್ಧ ಸಲ್ಲಿಸಲಾಗಿರುವ ಅರ್ಜಿದಾರರ ಪರವಾಗಿ ವಾದ ಮಂಡಿಸಿರುವ ಹಿರಿಯ ಅಡ್ವೋಕೇಟ್ ಪ್ರತಿಭಾ ಎಂ ಸಿಂಗ್, ಬಳಕೆದಾರರ ಮಾಹಿತಿ ಫೇಸ್ ಬುಕ್ ನಲ್ಲಿ ಹಂಚಿಕೆಯಾಗದಂತೆ ನೋಡಿಕೊಳ್ಳಲು ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಯಾವುದೇ ರೀತಿಯ ಆಯ್ಕೆಗಳನ್ನು ನೀಡುತ್ತಿಲ್ಲ ಎಂದು ವಾದಿಸಿದ್ದಾರೆ.
ಈ ಬಗ್ಗೆ ವಾಟ್ಸ್ ಆಪ್ ಪರ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದ್ದು ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಮಾತ್ರ ನಾವು ಬಳಕೆದಾರರ ಮೆಸೇಜ್ ಗಳನ್ನು ದೀರ್ಘಾವಧಿಯವರೆಗೂ ಸರ್ವರ್ ನಲ್ಲಿಯೇ ಇಟ್ಟುಕೊಳ್ಳುತ್ತೇವೆ, ಅದೂ ಸಂದೇಶ ರವಾನೆಯಾಗದಿದ್ದರೆ 30 ದಿನಗಳ ವರೆಗೆ ಮಾತ್ರ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ