
ಬೆಂಗಳೂರು: ಒಂದೇ ರಾಕೆಟ್ ನಲ್ಲಿ ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಗೆ ಇಸ್ರೋ ಸಜ್ಜುಗೊಂಡಿದೆ. ಫೆಬ್ರವರಿ 15ರಂದು 104 ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್‌ವಿ –ಸಿ 37 ರಾಕೆಟ್ ಬಾಹ್ಯಾಕಾಶಕ್ಕೆ ಜಿಗಿಯಲಿದೆ.
ಆಂಧ್ರಪ್ರದೇಶದ ಶ್ರೀಹರಿ ಕೋಟಾ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ -ಸಿ37/ ಕಾರ್ಟೋಸ್ಯಾಟ್ ಸರಣಿಯ ಉಪಗ್ರಹ ಫೆಬ್ರವರಿ 15 ಬೆಳಗ್ಗೆ 9.28ಕ್ಕೆ ನಭಕ್ಕೆ ಹಾರಲಿದೆ ಎಂದು ಇಸ್ರೋ ತಿಳಿಸಿದೆ.
ಭೂವೀಕ್ಷಣಾ ಕಾರ್ಯ ನಡೆಸುವ ಕಾರ್ಟೋಸ್ಯಾಟ್–2, ಜೊತೆಗೆ 103 ಉಪಗ್ರಹಗಳು ಉಡಾವಣೆಯಾಗಲಿವೆ. ಈವರೆಗೂ ಜಗತ್ತಿನ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡಿರದ ಪ್ರಯತ್ನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದಾಗಿದೆ. ಏಕಕಾಲದಲ್ಲಿ ಒಂದೇ ರಾಕೆಟ್ ಮೂಲಕ ಒಟ್ಟು 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಬೃಹತ್ ಯೋಜನೆ ಕೈಗೊಂಡಿದೆ. ಪಿಎಸ್‌ಎಲ್‌ವಿ–ಸಿ37 ಉಡಾವಣಾ ವಾಹಕ 664 ಕೆ.ಜಿ. ತೂಕದ ಉಪಗ್ರಹಗಳನ್ನು ಹೊತ್ತೊಯ್ಯಲಿದೆ.
ಇಸ್ರೇಲ್, ಕಜಕಿಸ್ತಾನ್, ನೆದರ್ಲ್ಯಾಂಡ್, ಸ್ವಿಜರ್ಲ್ಯಾಂಡ್ ಮತ್ತು ಯುಎಇ ಯಿಂದ ತಲಾ ಒಂದೊಂದು ಹಾಗೂ ಅಮೆರಿಕಾದ 96 ಸೇರಿದಂತೆ ಮೂರು ಸ್ವದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. INS-1A ಮತ್ತು INS-1B ಭಾರತೀಯ ಉಪಗ್ರಹಗಳಾಗಿವೆ.
ಕಳೆದ ವರ್ಷ ಇಸ್ರೊ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. 2014ರಲ್ಲಿ ರಷ್ಯಾ ಒಟ್ಟಿಗೆ 37 ಉಪಗ್ರಹಗಳನ್ನು ಹಾಗೂ ನಾಸಾ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿರುವುದು ಈವರೆಗಿನ ದಾಖಲೆಯಾಗಿದೆ.
ನಾವು ಯಾವುದೇ ದಾಖಲೆ ಮಾಡು ಹೊರಟಿಲ್ಲ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ.
Advertisement