
ನವದೆಹಲಿ:ಮೂವರು ಗಗನಯಾತ್ರಿಗಳನ್ನು ಏಳು ದಿನಗಳ ಕಾಲ ಬಾಹ್ಯಾಕಾಶಕ್ಕ ಕಳುಹಿಸುವ ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗಾಗಿ 10 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು. ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆಯಲ್ಲಿ ಸ್ವದೇಶದಿಂದಲೇ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಗಗನಯಾನ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ಯೋಜನೆಯನ್ನು 2022ರೊಳಗೆ ಪೂರ್ಣಗೊಳಿಸುವುದಾಗಿ ಅವರು ಹೇಳಿಕೆ ನೀಡಿದ್ದರು.
ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾತ್ರಿಗಳನ್ನು ವಾಯುಪಡೆಯಿಂದ ಆಯ್ಕೆ ಮಾಡಲಾಗುತ್ತಿದೆ. ಮೊದಲಿಗೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಕಿರುಪಟ್ಟಿ ತಯಾರಿಸಿ ಅಂತಿಮವಾಗಿ ಮೂವರಿಗೆ ತರಬೇತಿ ನೀಡಲಾಗುತ್ತಿದೆ. ಗಗನಯಾತ್ರಿಗಳ ಆಯ್ಕೆಯಲ್ಲಿ ವಾಯುಪಡೆ ಸಂಪೂರ್ಣ ಅಧಿಕಾರ ವಹಿಸಿರುವುದಾಗಿ ಇಸ್ರೋ ಅಧ್ಯಕ್ಷ ಡಾ. ಶಿವಾನ್ ತಿಳಿಸಿದ್ದಾರೆ.
ಈ ಮಹತ್ವಾಕಾಂಕ್ಷೆ ಯೋಜನೆಗಾಗಿ ನೆರವು ಪಡೆಯಲು ಫ್ರಾನ್ಸ್ ಹಾಗೂ ರಷ್ಯಾ ರಾಷ್ಟ್ರಗಳೊಂದಿಗೆ ಭಾರತ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಜಿಎಸ್ ಎಲ್ ವಿ ಮಾರ್ಕ್ -3 ನೌಕೆ ಮೂಲಕ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.
Advertisement