ಯೂಟ್ಯೂಬ್ ಚಾನೆಲ್ ಹಣಗಳಿಕೆ ನಿಯಮ 10,000 ವೀಕ್ಷಣೆಯಿಂದ ವರ್ಷಕ್ಕೆ 4 ಸಾವಿರ ಗಂಟೆ ವೀಕ್ಷಣೆಗೆ ಬದಲು

ಲೊಗನ್ ಪೌಲ್ ವಿವಾದದ ನಂತರ ಆನ್ ಲೈನ್ ವಿಡಿಯೊ ಸಂಸ್ಥೆ ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಲೊಗನ್ ಪೌಲ್ ವಿವಾದದ ನಂತರ ಆನ್ ಲೈನ್ ವಿಡಿಯೊ ಸಂಸ್ಥೆ ಯೂಟ್ಯೂಬ್ ನಲ್ಲಿ ಹಣಗಳಿಕೆ ಮಾಡುವ ಚಾನೆಲ್ ಗಳ ಮೇಲೆ ಹೆಚ್ಚು ನಿರ್ಬಂಧವನ್ನು ಹೇರಲು ಗೂಗಲ್ ನಿರ್ಧರಿಸಿದೆ.
ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಬದಲಾವಣೆ ಮಾಡಲಾಗಿದ್ದು, 10 ಸಾವಿರ ವೀಕ್ಷಣೆ ಬದಲು ವರ್ಷಕ್ಕೆ 4,000 ಗಂಟೆಗಳಷ್ಟು ಕಾಲ ವಿಡಿಯೊ ವೀಕ್ಷಣೆ ಮಾಡಿದರೆ ಮಾತ್ರ ಯೂಟ್ಯೂಬ್ ವಿಡಿಯೊ ಮೂಲಕ ಹಣ ಗಳಿಸಬಹುದಾಗಿದೆ. 
ಯೂಟ್ಯೂಬ್ ಸ್ಟಾರ್ ಲೊಗನ್ ಪೌಲ್, ಈ ತಿಂಗಳ ಆರಂಭದಲ್ಲಿ ಜಪಾನ್ ನ ಅಯೋಗಿಗರಾ ಅರಣ್ಯ ಪ್ರದೇಶದಲ್ಲಿ ಯುವಕನೊಬ್ಬನ ಆತ್ಮಹತ್ಯೆಯ ವಿಡಿಯೊವೊಂದನ್ನು ಯೂಟ್ಯೂಬ್ ನಲ್ಲಿ ಹರಿಯಬಿಟ್ಟು ಭಾರೀ ವಿವಾದಕ್ಕೆ ಕಾರಣವಾಗಿದ್ದರು. 
ಪ್ರತಿವರ್ಷ ಯೂಟ್ಯೂಬ್ ನ ಪಾರ್ಟ್ನರ್ ಪ್ರೊಗ್ರೆಮ್ ಮೂಲಕ ಸಾವಿರಾರು ಬಳಕೆದಾರರು ಹಣ ಸಂಪಾದಿಸುತ್ತಾರೆ.ಕಳೆದ ಏಪ್ರಿಲ್ ತಿಂಗಳಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಬದಲಾವಣೆ ಮಾಡಲಾಗಿದ್ದು, ಚಾನೆಲ್ ಗೆ 10 ಸಾವಿರ ವೀಕ್ಷಣೆ ಬರುವವರೆಗೆ ವಿಡಿಯೋ ಹಾಕಿರುವವರಿಗೆ ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ನಿಯಮವನ್ನು ಬದಲಾಯಿಸಲಾಗಿದೆ. 
ಯೂಟ್ಯೂಬ್ ನಲ್ಲಿ ವಿಡಿಯೊವನ್ನು ಒಂದು ವರ್ಷದೊಳಗೆ ಒಟ್ಟಾರೆ ವೀಕ್ಷಣೆ ಅವಧಿ 4,000 ಗಂಟೆಗಳಾಗಿದ್ದರೆ ಮತ್ತು ಚಾನೆಲ್ ಗೆ 1,000ಕ್ಕಿಂತ ಹೆಚ್ಚು ಲೈಕ್ ಗಳು ಬಂದರೆ ಮಾತ್ರ ವಿಡಿಯೊ ಸೃಷ್ಟಿ ಮಾಡಿ ಹರಿಬಿಟ್ಟವರು ಹಣ ಗಳಿಸಬಹುದು.
ಯೂಟ್ಯೂಬ್ ನಲ್ಲಿ ವಿಡಿಯೊ ಮೂಲಕ ಹಣಗಳಿಕೆಯ ಹೊಸ ನಿಯಮ ಫೆಬ್ರವರಿ 20ರಿಂದ ಜಾರಿಗೆ ಬರಲಿದೆ. ಹೊಸ ನಿಯಮವನ್ನು ಪಾಲಿಸದಿದ್ದವರು ಇನ್ನು ಮುಂದೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ. 
ಗೂಗಲ್ ಕಂಪೆನಿಯ ನಿಯಮಗಳನ್ನು ವಿಡಿಯೊ ಸೃಷ್ಟಿಕರ್ತರು ಪಾಲಿಸುತ್ತಿದ್ದಾರೆಯೇ ಎಂದು ಪರೀಕ್ಷಿಸಲು ಮತ್ತು ಯೂಟ್ಯೂಬ್ ನ್ನು ಅಪಾಯಕ್ಕೆ ತಳ್ಳುವಂಥ ವಿಡಿಯೊಗಳನ್ನು ಪೋಸ್ಟ್ ಮಾಡುವಂತಹ ಕ್ರಮಗಳನ್ನು ತಡೆಯಲು ಈ ಹೊಸ ನಿಯಮ ಸಹಾಯವಾಗಲಿದೆ.
ವಿಡಿಯೊ ಸೃಷ್ಟಿಕರ್ತರೊಂದಿಗೆ ಸಂಪೂರ್ಣ ವಿಶ್ಲೇಷಣೆ ಮತ್ತು ಸಂಭಾಷಣೆ ನಡೆಸಿ .ಯೂಟ್ಯೂಬ್ ಈ ತೀರ್ಮಾನ ಮಾಡಿದೆ ಎಂದು ಅಧಿಕೃತ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ. ಯೂಟ್ಯೂಬ್ ಗೆ ಸಹಾಯವಾಗುವಂಥ ವಿಡಿಯೊಗಳನ್ನು ಸೃಷ್ಟಿಸುವವರನ್ನು ಪತ್ತೆಹಚ್ಚಲು ಕೂಡ ಈ ನಿಯಮ ಸಹಾಯವಾಗಲಿದೆ ಎಂದು ಗೂಗಲ್ ಕಂಪೆನಿ ಹೇಳಿದೆ.
2007ರಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂನ ಸ್ಟ್ರೀಮಿಂಗ್ ಸೇವೆಯನ್ನು ಎಲ್ಲರಿಗಾಗಿ ಆರಂಭಿಸಲಾಯಿತು. ಇದರಡಿ ಸೇವೆ ಪಡೆಯಲು ಯಾರು ಬೇಕಾದರೂ ಸೈನ್ ಅಪ್ ಆಗಬಹುದಾಗಿದ್ದು, ವಿಡಿಯೋಗಳನ್ನು ಅಪ್ ಲೋಡ್ ಮಾಡಿದ ತಕ್ಷಣ ಅದನ್ನು ನೋಡಿದವರ ಸಂಖ್ಯೆ ಆಧಾರದ ಮೇಲೆ ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com