ಚಂದ್ರಯಾನ-2: ವಿಕ್ರಮ್ ಲ್ಯಾಂಡಿಂಗ್ ನ ಮಹತ್ವದ 15 ನಿಮಿಷಗಳು ಹೇಗಿರಲಿವೆ?- ಇಲ್ಲಿದೆ ಮಾಹಿತಿ

15 ನಿಮಿಷಗಳ ಪ್ರಕ್ರಿಯೆ ಯಶಸ್ವಿಯಾದರೆ ಈ ವರೆಗೂ ಯಾವುದೇ ರಾಷ್ಟ್ರವೂ ಮಾಡಿರದ ಸಾಧನೆಯನ್ನು ಭಾರತ ಮಾಡಲಿದೆ. ಆ ಹದಿನೈದು ನಿಮಿಷಗಳೇಕೆ ಅಷ್ಟೊಂದು ಮಹತ್ವದ್ದು ಎಂಬುದನ್ನು ತಿಳಿದುಕೊಳ್ಳೋಣ.
ಚಂದ್ರಯಾನ-2: ವಿಕ್ರಮ್ ಲ್ಯಾಂಡಿಂಗ್ ನ ಮಹತ್ವದ ಆ 15 ನಿಮಿಷಗಳು ಹೇಗಿರಲಿವೆ? ಇಲ್ಲಿದೆ ಮಾಹಿತಿ
ಚಂದ್ರಯಾನ-2: ವಿಕ್ರಮ್ ಲ್ಯಾಂಡಿಂಗ್ ನ ಮಹತ್ವದ ಆ 15 ನಿಮಿಷಗಳು ಹೇಗಿರಲಿವೆ? ಇಲ್ಲಿದೆ ಮಾಹಿತಿ

ಚಂದ್ರಯಾನ-2 ಬಾಹ್ಯಾಕಾಶ ನೌಕೆ ವಿಕ್ರಮ್ ಲ್ಯಾಂಡಿಂಗ್ ನ್ನು ಇಡೀ ವಿಶ್ವವೇ ಕಾತುರದಿಂದ ಎದುರುನೋಡುತ್ತಿದೆ. ಇತ್ತ ಇಸ್ರೋ ಕೂಡ ಆ 15 ನಿಮಿಷಗಳ ನಿರ್ಣಾಯಕ ಘಟ್ಟದ ಯಶಸ್ಸಿಗೆ ಪ್ರಾರ್ಥಿಸುತ್ತಿದೆ. 

15 ನಿಮಿಷಗಳ ಪ್ರಕ್ರಿಯೆ ಯಶಸ್ವಿಯಾದರೆ ಈ ವರೆಗೂ ಯಾವುದೇ ರಾಷ್ಟ್ರವೂ ಮಾಡಿರದ ಸಾಧನೆಯನ್ನು ಭಾರತ ಮಾಡಲಿದೆ. ಆ 15 ನಿಮಿಷಗಳನ್ನು ಆತಂಕ ಇರುವ ಸಮಯವೆಂದು ಸ್ವತಃ ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ಆ 15 ನಿಮಿಷಗಳೇಕೆ ಅಷ್ಟೊಂದು ಮಹತ್ವದ್ದು ಎಂಬುದನ್ನು ತಿಳಿದುಕೊಳ್ಳೋಣ.

  1. ಇಸ್ರೋ ಹಿರಿಯ ವಿಜ್ಞಾನಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಪ್ರಕಾರ, ಲ್ಯಾಂಡರ್ ವಿಕ್ರಮ್ ದಕ್ಷಿಣ ಧ್ರುವದ ಚಂದ್ರನ ಮೇಲ್ಮೈ ಸ್ಪರ್ಶಿಸುವ ಪ್ರಕ್ರಿಯೆ ಸಂಪೂರ್ಣ ಸ್ವಯಂಚಾಲಿತ ಕ್ರಮದಲ್ಲಿರಲಿದೆ. ಬಾಹ್ಯಾಕಾಶ ನೌಕೆಯಲ್ಲಿಯೇ ಅಳವಡಿಸಲಾಗಿರುವ ಸೆನ್ಸರ್ (ಸಂವೇದಕ)ಗಳ ಸಹಾಯದಿಂದ ವಿಕ್ರಮ್ ಸ್ವಯಂ ಚಾಲಿತವಾಗಿ ಚಂದ್ರನ ಮೇಲೆ ಇಳಿಯಲಿದೆ. 
  2. ಇದೊಂದು ಕ್ಲಿಷ್ಟಕರ ಅತ್ಯಂತ ನಾಜೂಕಾದ ಪ್ರಕ್ರಿಯೆ. ಈ ಬಾಹ್ಯಾಕಾಶ ನೌಕೆ ಬಳಸಿಕೊಳ್ಳುವ ಸೆನ್ಸರ್ ಗಳು, ಅತ್ಯಾಧುನಿಕ ಕಾರುಗಳಲ್ಲಿರುವ ರಿವರ್ಸ್ ಗೇರ್ ಮೋಡ್ ನಲ್ಲಿ ಅಪಾಯದ ಅಲರ್ಟ್ ನೀಡುವ ಸೆನ್ಸರ್ ಗಳಿಗಿಂತಲೂ ಅತ್ಯಾಧುನಿಕವಾದದ್ದು.
  3. ಈ ಅತ್ಯಾಧುನಿಕ ಸೆನ್ಸರ್ ಗಳು ವಿಕ್ರಮ್ ಲ್ಯಾಂಡರ್ ಗೆ ಸಾಫ್ಟ್-ಲ್ಯಾಂಡಿಂಗ್ ಗೆ ಸಹಕಾರಿಯಾಗುವಂತೆ ಅತ್ಯಂತ ಸೂಕ್ತವಾದ ಮೇಲ್ಮೈ ನ್ನು ಗುರುತಿಸುತ್ತದೆ. 
  4. ಸ್ವಯಂ ಚಾಲಿತವಾಗಿ ಲ್ಯಾಂಡ್ ಆಗುವ ಬಾಹ್ಯಾಕಾಶ ನೌಕೆಯಲ್ಲಿರುವ ಸೆನ್ಸರ್ ಗಳಿಗೆ ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ  ಯಾವುದೇ ಕಮಾಂಡ್ ನೀಡುವುದಿದ್ದರೂ ಅದು ಪ್ರಕ್ರಿಯೆ ಪ್ರಾರಂಭವಾಗುವುದಕ್ಕೂ ಒಂದು ಗಂಟೆ ಮುನ್ನ ನೀಡಬೇಕಷ್ಟೆ. ಪ್ರಕ್ರಿಯೆ ಪ್ರಾರಂಭವಾಗಿ ಈ ನಿರ್ಣಾಯಕ 15 ನಿಮಿಷಗಳ ಅವಧಿಯಲ್ಲಿ ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ಬಾಹ್ಯಾಕಾಶ ನೌಕೆಯಲ್ಲಿರುವ ಸೆನ್ಸರ್ ಗಳ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ 15 ನಿಮಿಷಗಳ 1 ಸೆಕೆಂಡ್ ಹೆಚ್ಚು ಕಡಿಮೆ ಆದರೂ, ಅಥವಾ ಸೆನ್ಸರ್ ಗಳಲ್ಲಿ ಯಾವುದೇ ಸಮಸ್ಯೆ ಎದುರಾದರು ಇಡೀ ಮಿಷನ್ ಯಶಸ್ವಿಯಾಗುವುದು ಅನುಮಾನ. 
  5. ಒಮ್ಮೆ ಪ್ರಕ್ರಿಯೆ ಪ್ರಾರಂಭವಾಯಿತೆಂದರೆ ಮರುಪರಿಶೀಲನೆ, ಪ್ರಕ್ರಿಯೆ ಹಿಂತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಈ ಪ್ರಕ್ರಿಯೆ ವೇಳೆ ವಿಕ್ರಮ್ ತನ್ನ ವೇಗವನ್ನು, ಮೇಲ್ಮೈನಿಂದ 800 ಮೀಟರ್ ಎತ್ತರದಲ್ಲೇ ಥ್ರಸ್ಟರ್‌ ಗಳ ಸಹಾಯದಿಂದ ನಿಯಂತ್ರಿತ ವಿಧಾನದಲ್ಲಿ ಸೆಕೆಂಡ್ ಗೆ 1.6 ಕಿ.ಮೀ ನಿಂದ ಶೂನ್ಯಕ್ಕೆ ಇಳಿಸಿಕೊಳ್ಳಬೇಕಾಗುತ್ತದೆ.  

 ಸಾಫ್ಟ್ ಲ್ಯಾಂಡಿಂಗ್ ಸಕ್ಸಸ್ ರೇಟ್ ಶೇ.37

ಚಂದ್ರಯಾನ-2 ಮಿಷನ್ ನಲ್ಲಿ ಇಸ್ರೋ ತೆಗೆದುಕೊಂಡಿರುವ ರಿಸ್ಕ್ ಪ್ರಮಾಣ ಬಹುದೊಡ್ಡದಿದೆ. ಏಕೆಂದರೆ ಚಂದ್ರನ ಮೇಲೆ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನ ಸಕ್ಸಸ್ ರೇಟ್ ಜಾಗತಿಕ ಮಟ್ಟದಲ್ಲಿ ಶೇ.37 ಅಷ್ಟೇ. ಇಸ್ರೋ ಅಧ್ಯಕ್ಷರು ಹೇಳುವ ಪ್ರಕಾರ ವಿಜ್ಞಾನಿಗಳಿಗೆ ಈ ಬಾಹ್ಯಾಕಾಶ ನೌಕೆಯಲ್ಲಿ ಬಳಕೆ ಮಾಡಲಾಗಿರುವ 4 ಥ್ರಸ್ಟರ್ ಗಳು ಹಾಗೂ ಸೆನ್ಸರ್ ಗಳು ಹೊಸತಾದ ತಂತ್ರಜ್ಞಾನ. 

15 ನಿಮಿಷಗಳೇ ಏಕೆ ಅಷ್ಟೊಂದು ಮಹತ್ವದ್ದು?: ಸ್ವಯಂ ಚಾಲಿತ ಲ್ಯಾಂಡಿಂಗ್ ವೇಳೆ ಕೆಲಸ ಮಾಡುವ ಸೆನ್ಸರ್ ಗಳೇ ಈ 15 ನಿಮಿಷಗಳಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವುದು. ಈ ಸೆನ್ಸರ್ ಗಳನ್ನು ಭೂಮಿಯ ವಾತಾವರಣದಲ್ಲಿ ಪರೀಕ್ಷಿಸಲಾಗಿದೆ. ಆದರೆ ಬಾಹ್ಯಾಕಾಶದಲ್ಲಿಯೂ ವಿಜ್ಞಾನಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಒಂದು ವೇಳೆ ಒಂದು ಕ್ಷಣದಷ್ಟು ವ್ಯತ್ಯಾಸವಾದರೂ ಅತಿ ದೊಡ್ಡ ಸವಾಲು ಎದುರಾಗುತ್ತದೆ. 

ಇಸ್ರೇಲ್ ಸೆನ್ಸರ್ ಗಳು ವಿಫಲವಾಗಿತ್ತು: ಸ್ವಯಂ ಚಾಲಿತ ಮೋಡ್ ನಲ್ಲಿ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಇಸ್ರೇಲ್ ಕೂಡ ಯತ್ನ ನಡೆಸಿತ್ತು. ಬಾಹ್ಯಾಕಾಶ ನೌಕೆಯಲ್ಲಿದ್ದ ಒಂದು ಸೆನ್ಸರ್ ಕೈ ಕೊಟ್ಟ ಕಾರಣ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಸುಗಮವಾಗಿ ಇಳಿಯುವ ಬದಲು ಅಪ್ಪಳಿಸಿತ್ತು. ಪರಿಣಾಮ ಬೆರೆಶೀಟ್ ಮಿಷನ್ (ಇಸ್ರೇಲ್‍ ಕಳುಹಿಸಿದ್ದ ಬಾಹ್ಯಾಕಾಶ ನೌಕೆ 'ಬೆರೆಶೀಟ್’) ವಿಫಲವಾಗಿತ್ತು. ಇಸ್ರೇಲ್ ನ ಆ ಯತ್ನ ಸಫಲವಾಗಿದ್ದರೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧನೆ ಮಾಡಿದ 4 ನೇ ರಾಷ್ಟ್ರವಾಗಿರುತ್ತಿತ್ತು. ಆದರೆ ಈ ಅವಕಾಶ ಈಗ ಭಾರತಕ್ಕೆ ದೊರೆತಿದೆ. 

ಬೇರೆಯವರು ಎಡವಿದ್ದರಿಂದ ನಾವು ಪಾಠ ಕಲಿತಿದ್ದೀವಿ, ಅದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಎಚ್ಚರ ವಹಿಸಿದ್ದೀವಿ ಎನ್ನುತ್ತಾರೆ ಇಸ್ರೋ ಅಧ್ಯಕ್ಷ ಶಿವನ್

ಇಷ್ಟೆಲ್ಲಾ ರಿಸ್ಕ್ ಇರುವ ಕಾರಣದಿಂದಲೇ ಇಸ್ರೋ ಚಂದ್ರಯಾನ-2 ಲ್ಯಾಂಡರ್ ಚಂದ್ರನ ಮೇಲೆ ಇಳಿಯುವುದನ್ನು ಇಡೀ ವಿಶ್ವವೇ ಕಾತರದಿಂದ ಎದುರುನೋಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com