ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಉಡಾವಣೆ ಯಶಸ್ವಿ: ಇಸ್ರೋ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಜಿಎಸ್ ಎಲ್ ವಿಯ ಉಪಗ್ರಹ ಉಡಾವಣಾ ವಾಹನವು ತನ್ನ 15ನೇ ಹಾರಾಟದಲ್ಲಿ 2,232 ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹ NVS-01ನ್ನು ಇಂದು ಬೆಳಿಗ್ಗೆ 10.42ಕ್ಕೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ರಾಕೆಟ್ ಉಡಾವಣೆಯಾದ 20 ನಿಮಿಷಗಳ ನಂತರ ಸುಮಾರು 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿಉಪಗ್ರಹವನ್ನು ಸೇರಿಸಿದೆ ಎಂದು ಇಸ್ರೋ ಹೇಳಿದೆ.
NVS-01 ಭಾರತದ ಎರಡನೇ ತಲೆಮಾರಿನ NavIC ಉಪಗ್ರಹಗಳಲ್ಲಿ ಮೊದಲನೆಯದು, ಇದು ವರ್ಧಿತ ವೈಶಿಷ್ಟ್ಯಗಳೊಂದಿಗೆ ಇರುತ್ತದೆ. ಉಡಾವಣೆಯಾದ 20 ನಿಮಿಷಗಳ ನಂತರ ಉಪಗ್ರಹವನ್ನು ಕಕ್ಷೆಯಲ್ಲಿ ಸೇರಿಸಲಾಯಿತು ಎಂದು ಇಸ್ರೋ ಟ್ವೀಟ್ ನಲ್ಲಿ ಮಾಹಿತಿ ನೀಡಿದೆ. NVS-01 NavIC ಸರಣಿಯಲ್ಲಿ ಎರಡನೇ ತಲೆಮಾರಿನ ಉಪಗ್ರಹಗಳ ಆರಂಭಕ್ಕೆ ಇದು ಸಾಕ್ಷಿಯಾಗಿದೆ. ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಪ ಗ್ರಹ ಉಡಾವಣೆ ಮಾಡಲಾಗಿದೆ.
ಉಪಗ್ರಹ ಕಕ್ಷೆ ಸೇರುತ್ತಿದ್ದಂತೆ ವಿಜ್ಞಾನಿಗಳ ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಪರಸ್ಪರ ಹಸ್ತಲಾಘವ ಮಾಡಿ ಶುಭ ಕೋರಿದರು. ಮಿಷನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇಡೀ ತಂಡವನ್ನು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ