
ಮೈಸೂರು: ಎಚ್ ಡಿ ಕೋಟೆ ತಾಲ್ಲೂಕಿನ ಸೊಳ್ಳೆಪುರ ಗ್ರಾಮದಲ್ಲಿ ಮೇಕೆಯೊಂದು ಎರಡು ಮನುಷ್ಯ ರೂಪಿ ಮರಿಗಳಿಗೆ ಜನ್ಮ ನೀಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರ ಕುತೂಹಲ ಕೆರಳಿಸಿದೆ. ಈ ಮರಿಗಳು ಸತ್ತು ಹುಟ್ಟಿದ್ದು, ಇವುಗಳನ್ನು ನೋಡಲು ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ. ಪಶು ಸಂಗೋಪನಾ ಅಧಿಕಾರಿಗಳು ತಿಳಿಸುವಂತೆ, ಇಂತಹ ಘಟನೆಗಳು ವಿಚಿತ್ರವೇನಲ್ಲ, ಇದು ಆನುವಂಶಿಕ ತೊಂದರೆಯಿಂದ ಉಂಟಾಗಿದೆ ಎಂದಿದ್ದಾರೆ.
ಭಾಸ್ಕರ್ ಎಂಬುವವರಿಗೆ ಸೇರಿದ ಈ ಮೇಕೆ ಸೋಮವಾರ ಬೆಳಗ್ಗೆ ೧೫ ನಿಮಿಷಗಳ ಅಂತರದಲ್ಲಿ ಎರಡು ಸಾವನ್ನಪ್ಪಿದ್ದ ಮರಿಗಳಿಗೆ ಜನ್ಮ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರಿಂದ ಆಶ್ಚರ್ಯಚಕಿತರಾದ ಭಾಸ್ಕರ್ ಕುಟುಂಬದ ಸದಸ್ಯರಿಗೆ ಹಾಗು ನೆರೆಹೊರೆಯವರಿಗೆ ಈ ವಿಷಯ ತಿಳಿಸಿದ್ದಾರೆ. ಟಿ ವಿ ಚಾನೆಲ್ ಗಳು ಈ ವಿಷಯನ್ನು ಪ್ರಸಾರ ಮಾಡಿದ ಮೇಲೆ ಅಧಿಕಾರಿಗಳು ಜಾಗಕ್ಕೆ ಬಂದು, ಸತ್ತು ಹುಟ್ಟಿದ್ದ ಮರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಪಶುಸಂಗೋಪನಾ ಉಪ ನಿರ್ದೇಶಕ ದೇವದಾಸ್ ತಿಳಿಸುವಂತೆ ಆನುವಂಶಿಕ ತೊಂದರೆಗಳಿಂದಲೊ ಅಥವಾ ಮೇಕೆ ವಿಷಪೂರಿತ ಗಿಡಗಳನ್ನು ತಿಂದಾಗ ಆಗುವ ಸೋಂಕಿನಿಂದಲೋ ಇಂತಹ ಜನನವಾಗುತ್ತವೆ. ಇದನ್ನು "ಫೀಟಲ್ ಅನಸರ್ಕ" ಎನ್ನುತ್ತಾರೆ. ಜನರಲ್ಲಿ ಅರಿವು ಮೂಡಿಸಲು ಈ ಸತ್ತು ಹುಟ್ಟಿದ ಮರಿಗಳನ್ನು ದಸರಾ ಪ್ರದರ್ಶನದಲ್ಲಿ ತೋರಿಸಲಾಗುವುದು ಎಂದಿದ್ದಾರೆ.
Advertisement