ನೀ ಬರುವ ಹಾದಿಯಲ್ಲಿ ನಾನು ಒಬ್ಬಂಟಿ...

ಒಲವಿನ ಹುಡಗಿ, ಪರಿಶುದ್ಧ ಮುಂಜಾನೆಯಲ್ಲಿ ಸ್ವಚ್ಛ ತುಂತುರು ಹನಿಗಳ ಸಂಭ್ರಮದ...
ನೀ ಬರುವ ಹಾದಿಯಲ್ಲಿ ನಾನು ಒಬ್ಬಂಟಿ...
Updated on

ಒಲವಿನ ಹುಡಗಿ, ಪರಿಶುದ್ಧ ಮುಂಜಾನೆಯಲ್ಲಿ ಸ್ವಚ್ಛ ತುಂತುರು ಹನಿಗಳ ಸಂಭ್ರಮದ ಸಂತೆಯಲಿ. ನಿರಾಳವಾಗಿ ಮಲಗಿ ಈಗಷ್ಟೇ ನಿದ್ದೆಯಿಂದೆದ್ದ, ಸೂರ್ಯನ ಬಣ್ಣ ತಗುಲದ ರಸ್ತೆಯಲಿ, ದಿನಾ ಯಮ ವೇಗದಲಿ ಓಡುವ ನನ್ನ ಮೊಬೈಕು ಯಾಕೋ ಶಾಂತಚಿತ್ತ ಮನಸಿನಲಿ, ತಂಗಾಳಿಯಷ್ಟು ತಣ್ಣಗೆ, ಹೂ ಅರಳುವಷ್ಟು ಮೆಲ್ಲಗೆ, ನಿನ್ನ ಮೆಲುನಗೆಯಷ್ಟೆ ಸುಸ್ವರ ಚೆಲ್ಲುತ್ತಾ, ನನ್ನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು, ನಿನ್ನ ನೆನಪುಗಳ ಊರಿಗೆ ಸವಾರಿ ಹೊರಡುತ್ತದೆ.

ಹೀಗೆ ಮುಂಜಾನೆಯೊಂದು ನಿನ್ನ ನೆನಪುಗಳೊಂದಿಗೆ ಆರಂಭಗೊಂಡರೆ ಆ ದಿನದ ಪ್ರತೀ ಕ್ಷಣವೂ ಪ್ರಫುಲ್ಲ ಪ್ರಫುಲ್ಲ.

ಎಂಥಾ ಹುಡುಗಿ ನೀನು. ಗುಲಾಬಿಗೆ ಮುತ್ತಿದ ಇಬ್ಬನಿಯ ಹನಿ. ಸಂಕೋಚದ ಚೆಲುವಿನ ಖನಿ. ನಿನ್ನ ಕಂಗಳಲ್ಲಿ ಈ ಕ್ರೌರ್ಯ ತುಂಬಿದ ಜಗತ್ತಿನೆಡೆಗೆ ಅವ್ಯಕ್ತ ಭಯವಿದೆ. ಯಾವುದೋ ಮುಗಿಯದ ತಳಮಳ ಸದಾ ನಿನ್ನ ಆವರಿಸಿಕೊಂಡಿರುತ್ತದೆ. ನಿಂಗೆ ಗುಬ್ಬಚ್ಚಿಯೆಂದರೆ ಇಷ್ಟ, ತನ್ಮಯತೆ ಮೂಡುವುದು ಹಾಡುಗಳ ಸನ್ನಿಧಿಯಲ್ಲಿ. ಒಂದಿಡೀ ಡೈರಿ ಮಿಲ್ಕ್ ಚಾಕ್ಲೆಟ್ ತಿಂದು ಮುಗಿಸುವ ತನಕ ಕಠಿಣ ಮೌನ ವ್ರತ. ಪ್ರೀತಿ ಪ್ರೇಮಗಳು ಸಿನಿಮಾಗಳ ಸ್ವತ್ತು. ಒಮ್ಮೆಮ್ಮೆ ಸುಷುಪ್ತಿಯ ಗಾಢ ನಿದ್ರೆಯೊಳಗಣ ಸುಂದರ ಸ್ವಪ್ನಗಳಲ್ಲಷ್ಟೇ ಒಲವ ಬಳ್ಳಿ ಚಿಗುರಿ ಹಬ್ಬಿ ಹೂ ಬಿಟ್ಟು ಘಮ ಘಮಿಸಲಷ್ಟೆ ಸಾಧ್ಯವೆಂಬಂತೆ ಜಗತ್ತಿನೆಡೆಗೆ ವಿಮುಖ ನೋಟ ನಿನ್ನದು.

ಯಾಕೋ ನಿನ್ನನ್ನು ದೂರದಿಂದಲೇ ನೋಡುತ್ತಾ, ತುಂಬಾ ಖುಷಿ ಪಡುತ್ತಿದ್ದೆ ನಾನು, ಮಾತಾಡಬೇಕೆಂಬ ಅದಮ್ಯ ಆಸೆಯನ್ನೆಲ್ಲ ಅದುಮಿಟ್ಟುಕೊಂಡು. ನೀ ಬರುವ ಹಾದಿಯಲಿ ಅನಾಮಿಕನಾಗವುದರಲ್ಲೇ ನನ್ನೊಳಗೊಂದು ಪುಳಕವಿತ್ತು. ನೀ ಯಾವುದೋ ವಿಷಯಕ್ಕೆ ನಸು ನಗುತ್ತಾ, ಗೆಳತಿಯೊಂದಿಗೆ ನಡೆದು ಬರುತ್ತಾ, ಗುಲ್ ಮೊಹರಿನ ಹೂಗಳ ರಂಗನ್ನು ಕಣ್ಣು ತುಂಬಿಕೊಳ್ಳುತ್ತಾ, ಹಸಿರು ಚೂಡಿದಾರನ್ನಲ್ಲಿ ನವಿಲಿನಂತೆ ನಡೆಯುತ್ತಾ, ಅನಾಮಿಕನಂತೆ ನಿಂತ ನನ್ನನ್ನು ಸನಿಹದಲ್ಲೇ ಧಾಟಿ ಹೋದಾಗ... ಆಹ್! ಆಗಷ್ಟೇ ಸ್ನಾನ ಮಾಡಿ ಬಂದ ನಿನ್ನ ಹೆರಳಿನ ಘಮದಲ್ಲಿ ನಾ ಕರಗಿಹೋಗುತ್ತಿದ್ದೆ.

ಬೀಸದಿರುವ ಗಾಳಿ ಉಸಿರಿಗಂತೂ ದೂರ ಹೇಳದಿರುವ ಪ್ರೀತಿ ಭೂಮಿಗಂತೂ ಭಾರ ಇನ್ನೆಷ್ಟು ದಿನ ಹೀಗೆ ಇರಲಿ ಗೆಳತಿ?
 ಇವತ್ತು ನನ್ನೊಳಗಿನ ಒಲವನ್ನೆಲ್ಲ ನಿನ್ನೆದುರಿಗೆ ನಿವೇದಿಸಿಕೊಂಡು ಬಿಡುತ್ತೇನೆ ಅಂದುಕೊಂಡಾಗೆಲ್ಲ ಯಾವುದೋ ಉದ್ವೇಗವೊಂದು ನನ್ನೊಳಗೆ ಚಂಡಮಾರುತ ದಂತೆ, ದಿಕ್ಕು ದೆಸೆಯಿಲ್ಲದೆ ಎತ್ತೆತ್ತಲೋ ಹರಿದ ಪ್ರವಾಹದ ಕಡಲೊಳಗೆ ಸಿಕ್ಕ ಒಬ್ಬಂಟಿ ನಾವೆಯಂತೆ ಮನಸು ವಿಲಗುಟ್ಟತ್ತದೆ. ನನ್ನ ನಿರ್ಧಾರ ಬದಲಾಗುತ್ತದೆ. ಮನಸು ತಹಬದಿಗೆ ಬಂದು ನಿನ್ನ ನೋಡಬೇಕೆಂಬ ಹಂಬಲ ಮೌನದ ಕೈ ಹಿಡಿದು ನಿನ್ನತ್ತ ನಡೆಸುತ್ತದೆ.

ಮತ್ತೆ ಮತ್ತೆ ನೀ ಬರುವ ಹಾದಿಯಲಿ ನಾ ಒಬ್ಬಂಟಿ ಅನಾಮಿಕ.

ನಿನ್ನವನು,
ಜೀವ ಮುಳ್ಳೂರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com