ಮನೆಯಲ್ಲೇ ನ್ಯೂ ಇಯರ್ ಪಾರ್ಟಿ

ನ್ಯೂ ಇಯರ್ ಪಾರ್ಟಿಗೆ ಕ್ಲಬ್ಬಿಗೋ, ರೆಸಾರ್ಟಿಗೋ ಹೋಗೋದ್ಯಾಕೆ...
ಮನೆಯಲ್ಲೇ ನ್ಯೂ ಇಯರ್ ಪಾರ್ಟಿ

ನ್ಯೂ ಇಯರ್ ಪಾರ್ಟಿಗೆ ಕ್ಲಬ್ಬಿಗೋ, ರೆಸಾರ್ಟಿಗೋ ಹೋಗೋದ್ಯಾಕೆ? ಮನೆಯಲ್ಲೇ ಆ ಸಂಭ್ರಮ ಕಂಡುಕೊಳ್ಳಿ. ಇರುವ ಮನೆಯಲ್ಲೇ, ಅಗತ್ಯ ಅಲಂಕಾರಗಳೊಂದಿಗೆ, ಆತಿಥ್ಯದೊಂದಿಗೆ ಖುಷಿಯನ್ನು ಉಕ್ಕಿಸಿಕೊಳ್ಳಿ. ಹ್ಯಾಪಿ ನ್ಯೂ ಇಯರ್....

ಹೊಸ ವರುಷ ಬಂತು. ಜೋರು ಪಾರ್ಟಿ ಮಾಡ್ಬೇಕು. ಆ ದಿನ ಹೊರಗಡೆ ಹೋಗಿ ಹಾರಾಡೋ ಬದಲು, ಮನೆಯಲ್ಲೇ ಸಂಭ್ರಮಿಸಿದರೆ ಹೇಗೆ? ಕ್ಲಬ್ಬು, ರೆಸಾರ್ಟು, ಪಬ್ಬು, ಡಿಸ್ಕೋ ಮತ್ತು ಡೀಜೆ ನೈಟುಗಳಿಗೆ ಹೋಗಲು ಈಗಾಗಲೇ ಟಿಕೆಟ್, ಪಾಸ್ ಪಡೆದವರು ಆರಾಮಾಗಿ ಹೋಗಿ ಬನ್ನಿ.

ಆದರೆ, ಮನೆಯಲ್ಲೇ ಪಾರ್ಟಿ ಮಾಡಬಯಸುವವರು ಕೆಲವೊಂದು ಸಿದ್ಧತೆ ಮಾಡಿಕೊಳ್ಳಲೇಬೇಕು. ಅದರಲ್ಲೂ ಗೆಳೆಯರು, ಸಹೋದ್ಯೋಗಿಗಳು, ನೆರೆಹೊರೆಯವರನ್ನು ಆಹ್ವಾನಿಸುವುದಾದರೆ ಕೆಲವೊಂದು ಗುಟ್ಟುಗಳನ್ನು ನೀವು ಅರಿತಿರಲೇಬೇಕು.

ಪಾರ್ಟಿ ಎಂದ ಮೇಲೆ ತಿಂಡಿ-ತಿನಿಸು, ಪಾನೀಯ ಇದ್ದೇ ಇರುತ್ತದೆ. ಹಾಗಿರುವಾಗ ನೆಲಹಾಸಾಗಿ ಬಟ್ಟೆಯ ರಗ್ಗುಗಳನ್ನು ಬಳಸದಿರಿ. ಏಕೆಂದರೆ ತಿಂಡಿ ಅಥವಾ ಪಾನೀಯ ಅದರ ಮೇಲೆ ಚೆಲ್ಲಿದರೆ ಒಗೆಯುವುದು ಕಷ್ಟ! ಪಾರ್ಟಿಯಲ್ಲಿ ಯಾವ-ಯಾವ ಹಾಡೂಗಳನ್ನು ಬಳಸಬೇಕೆಂದು ಮುಂಚಿತವಾಗಿಯೇ ಪ್ಲೇ-ಲಿಸ್ಟ್ ಸಿದ್ಧಪಡಿಸಿ ಇಟ್ಟಿರಿ.

ಪಾರ್ಟಿ ಬೋರಿಂಗ್ ಆಗದಿರಲು ಯಾವುದಾದರೂ ಥೀಂ, ಫ್ಯಾನ್ಸಿ ಡ್ರೆಸ್ ಅಥವಾ ಆಟಗಳನ್ನು ಆಯೋಜಿಸಿ. ಅತಿಥಿಗಳು ಬಣ್ಣ-ಬಣ್ಣದ ಉಡುಪು. ವಿಭಿನ್ನ ಮುಖವಾಡಗಳನ್ನು ತೊಡುವುದು, ಒಂದೇ ಬಣ್ಣದ ಡ್ರೆಸ್ ಕೋಡ್ ಪಾಲಿಸುವುದು, ನಟ-ನಟಿ ಅಥವಾ ಕಾಮಿಕ್ ಪಾತ್ರಗಳಂತೆ ಬಟ್ಟೆ ತೊಟ್ಟು ಬರುವಂತೆ ಐಡಿಯಾ ಹಾಕಬಹುದು. ಹವಾಯಿ, ಝಾಂಬಿ, ರೆಟ್ರೋ ಹೀಗೆ ಯಾವುದಾದರೂ ಒಂದು ಥೀಂ ಆಯ್ಕೆ ಮಾಡಬಹುದು. ಅದಕ್ಕೆ ತಕ್ಕಂತೆ ಮನೆಯ ಗೋಡೆ, ಪರದೆ ಮತ್ತು ಸೋಫಾ ಸೆಟ್‌ನ ಕವರ್‌ಗಳನ್ನು ಅಲಂಕರಿಸಬಹುದು.

ಕೇವಲ ಒಂದು ಪಾರ್ಟಿಗಾಗಿ ನೀವು ಗೋಡೆಗೆ ಹೊಸ ಬಣ್ಣ ಬಳಿಯಬೇಕಿಲ್ಲ. ಬದಲಾಗಿ ಸುಂದರವಾದ ದೀಪಗಳಿಂದ, ಹೂವುಗಳಿಂದ, ವಾಲ್‌ಪೇಪರ್ ಅಥವಾ ವಾರ್ನಿಷ್ ಕಾಗದಗಳಿಂದ ಕೋಣೆಯನ್ನು ಸಿಂಗರಿಸಬಹುದು.

ಒರಿಗ್ಯಾಮಿ, ಕ್ರಾಫ್ಟ್ ಕಲಿತಿದ್ದರೆ ನಿಮ್ಮ ಕೌಶಲವನ್ನೂ ಪ್ರದರ್ಶಿಸಬಹುದು. ಹೂವು, ಅಕ್ಕಿ, ಚಿಟ್ಟೆ ಆಕಾರದಲ್ಲಿ ಬಣ್ಣದ ಕಾಗದವನ್ನು ಕತ್ತರಿಸಿ ಗೋಡೆ ಮೇಲೆ ಅಂಟಿಸಬಹುದು. ಬಟರ್ ಪೇಪರ್ ಬಳಸುವುದರಿಂದ ಲಗತ್ತಿಸಿದ ಆಕೃತಿಗಳನ್ನು ಮತ್ತೆ ತೆಗೆದಾಗ ಗೋಡೆಯ ಬಣ್ಣ ಎದ್ದು ಬರುವುದಿಲ್ಲ!

ಇನ್ನು ಮಕ್ಕಳ ಹುಟ್ಟುಹಬ್ಬದ ಪಾರ್ಟಿ ಇಲ್ಲವೇ ಇನ್ಯಾವುದೇ ಪಾರ್ಟಿ ಆಯೋಜಿಸುವುದಾದರೆ ಮಕ್ಕಳು ಬೋರ್ ಆಗದಂತೆ ನೋಡಿಕೊಳ್ಳುವುದು ಕಷ್ಟವೇ ಸರಿ. ಮಕ್ಕಳ ಮನ ರಂಜಿಸಲು ಆಟಗಳು ಆಡಿಸುವುದಲ್ಲದೇ, ಗೆದ್ದವರಿಗೆ ಬಹುಮಾನವಾಗಿ ಉಡುಗೊರೆಗಳನ್ನೂ ನೀಡಿ. ಕೋಣೆಯ ತುಂಬಾ ಕಾರ್ಟೂನ್ ಪಾತ್ರಗಳ ಚಿತ್ರಗಳನ್ನು ಅಂಟಿಸಿ. ಬಲೂನು, ಆಟಿಕೆಗಳು, ಬಣ್ಣದ ಕಾಗದ ಮತ್ತು ರಿಬ್ಬನ್ನುಗಳಿಂದ ಕೋಣೆಯನ್ನು ಅಲಂಕರಿಸಿ.

ಕೋಣೆಯ ಮೂಲೆಯಲ್ಲಿ ಬೌಲ್ ಇರಿಸಿ. ಅದರಲ್ಲಿ ಚಾಕೊಲೇಟ್ ಅಥವಾ ಇನ್ನ್ಯಾವುದೇ ಕ್ಯಾಂಡಿಗಳನ್ನು ಹಾಕಿ. ಮಕ್ಕಳಗೆ ಇಷ್ಟವಾಗುವಂಥ ಹಾಡುಗಳನ್ನು ಆಯ್ದು ಪ್ಲೇ ಲಿಸ್ಟ್ ತಯಾರಿಸಿ. ಇದಕ್ಕಾಗಿ ಅಂತರ್ಜಾಲದ ಮೊರೆ ಹೋಗಿ. ಬೇಕಾಗುವ ಎಲ್ಲ ಹಾಡುಗಳ ಪಟ್ಟಿ ನಿಮಗೆ ಇಂಟರ್ನೆಟ್‌ನಲ್ಲಿ ಸಿಗುತ್ತದೆ. ಐಸ್‌ಕ್ರೀಂ, ಕೇಕ್ ಮತ್ತು ಮಕ್ಕಳಿಗೆ ಇಷ್ಟವಾಗುವಂಥ ಕರಿದೆ ತಿನಿಸುಗಳನ್ನು ತಯಾರಿಸಿ, ಇಲ್ಲವೇ ಹೊಟೇಲ್‌ನಿಂದ ತರಿಸಿ.

ಪಾರ್ಟಿ ಆಯೋಜಿಸುವಾಗ ಮಜಾ ಮಾಡುವುದೊಂದೇ ಧ್ಯೇಯವಾಗಬಾರದು. ಪಕ್ಕದ ಮನೆಯವರಿಗೆ, ಸಾರ್ವಜನಿಕರಿಗೆ ಮತ್ತು ಸಾಕು ಪ್ರಾಣಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಿಕ್ಕಾಪಟ್ಟೆ ಜೋರಾಗಿ ಸಂಗೀತ ಬೇಡ. ಪೊಲೀಸರೂ ಅತಿಥಿಗಳಾಗಿ ಬಂದಾರು, ಹುಷಾರು!

ಅಲಂಕಾರ ಹೇಗೆ?

ಪಾರ್ಟಿ ಏರ್ಪಡಿಸುವ ಕೋಣೆಯ ಪ್ರತಿ ಮೂಲೆಯಲ್ಲೂ ಕಾಗದದ ಪಾಪ್‌ಕಾರ್ನ್ ಬಕೆಟ್ ಹೋಲ್ಡರ್ ಇರಿಸಿ. ಕೋಣೆಯ ಮಧ್ಯದಲ್ಲಿ ಎಲ್ಲರೂ ಕುಣಿದಾಡುವುದರಿಂದ ಮೇಜನ್ನು ಮೂಲೆಯಲ್ಲಿರಿಸಿ. ಅದರಲ್ಲಿ ತಿಂಡಿ-ತಿನಿಸನ್ನು ಇಡಿ. ಪಕ್ಕದಲ್ಲೇ ಕುರ್ಚಿಗಳನ್ನು ಸಾಲಾಗಿ ಇರಿಸಿ. ನ್ಯಾಪ್ಕಿನ್/ಟಿಶ್ಯೂ ಪೇಪರ್, ತಟ್ಟೆ, ಬೌಲ್, ಚಮಚ, ಫೋರ್ಕ್ ಮತ್ತು ಲೋಟಗಳನ್ನೂ ಮೇಜಿನಲ್ಲಿ ಇರಿಸಿಬಿಡಿ. ಬಫೇ ವ್ಯವಸ್ಥೆ ಮಾಡುವುದರಿಂದ ನಿಮಗೂ ಅನುಕೂಲ, ಅತಿಥಿಗಳಿಗೂ ಅನುಕೂಲ. ಪಾರ್ಟಿಯ ದಿನದಂದು ಟಿವಿ. ಹೂದಾನಿ ಮತ್ತು ಇತರೆ ನಾಜೂಕು ವಸ್ತುಗನ್ನು ಬೇರೆ ಕೋಣೆಗೆ ಸ್ಥಳಾಂತರಿಸಿ. ಕೇವಲ ಮ್ಯೂಸಿಕ್ ಸಿಸ್ಟಂ ಮಾತ್ರ ಇರಿಸಿ. ಇದರಿಂದ ಕುಣಿಯುವ ಭರದಲ್ಲಿ ಬೆಲೆ ಬಾಳುವ ವಸ್ತುಗಳು ಕೆಳಗೆ ಬಿದ್ದು ಒಡೆದುಹೋಗುವ ಭೀತಿಯಿಲ್ಲ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com